
ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ಸಂಗೀತ ನಿರ್ದೇಶಕ ಹಂಸಲೇಖ – ಈ ಬಾರಿಯ ದಸರಾ ಹೇಗಿರಲಿದೆ ಗೊತ್ತಾ?
- ಕರ್ನಾಟಕ
- August 29, 2023
- No Comment
- 37
ನ್ಯೂಸ್ ಆ್ಯರೋ : ಈ ಬಾರಿಯ ಮೈಸೂರು ದಸರಾವನ್ನು ಕನ್ನಡ ಸಿನಿಮಾ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಅಕ್ಟೋಬರ್ 15ರ ಬೆಳಗ್ಗೆ 10.15ರಿಂದ 10.30ರ ಮುಹೂರ್ತದಲ್ಲಿ ದಸರಾಕ್ಕೆ ಚಾಲನೆ ನೀಡಲಾಗುವುದು. ಮೈಸೂರು ನಗರದ ಚಾಮುಂಡಿ ಬೆಟ್ಟದಲ್ಲಿ ಆಗಸ್ಟ್ 29ರಂದು ಗೃಹಲಕ್ಷ್ಮೀ ಕಾರ್ಡ್ ಗೆ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆ
ದಸರಾ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಮುಂತಾದವುಗಳನ್ನು ವ್ಯವಸ್ಥಿತವಾಗಿ ಯೋಜಿಸಲು ನಿರ್ಧರಿಸಲಾಗಿದೆ. ವಿಶೇಷ ಎಂದರೆ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿದು 1 ವಾರದವರೆಗೆ ಇರಲಿದೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಬರೋಬ್ಬರಿ 135 ಕಿ.ಮೀ. ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲು ತೀರ್ಮಾನಿಸಲಾಗಿದೆ. ಸರಕಾರಿ ಕಟ್ಟಡಗಳೂ ಬೆಳಕಿನಿಂದ ಕಂಗೊಳಿಸಲಿವೆ. ಇಂದಿನಿಂದಲೇ ಗಜಪಡೆಯ ತಾಲೀಮು ನಡೆಯುತ್ತಿದೆ ಎಂದಿದ್ದಾರೆ.
ಈ ವರ್ಷ ಏರ್ ಶೋ ಆಯೋಜಿಸುವ ಚಿಂತನೆ ಇದೆ. ಈ ಬಗ್ಗೆ ರಕ್ಷಣಾ ಸಚಿವರ ಜೊತೆ ಚರ್ಚೆ ನಡೆಸುತ್ತೇವೆ. ಮೈಸೂರು ದಸರಾದಲ್ಲಿ ಅನಗತ್ಯ ಖರ್ಚು ಇರಬಾರದು. ಶಕ್ತಿ ಯೋಜನೆ ಜಾರಿಯಾಗಿರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆಗಸ್ಟ್ 30 (ನಾಳೆ) ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.