ಅರ್ಜುನ ವೀರ ಮರಣಹೊಂದಿ ಇಂದಿಗೆ 1 ವರ್ಷ: ಸರ್ಕಾರದ ನಡೆಗೆ ಅಭಿಮಾನಿಗಳು ಬೇಸರ
ನ್ಯೂಸ್ ಆ್ಯರೋ: ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅರ್ಜುನ ವೀರ ಮರಣಹೊಂದಿ ಇಂದಿಗೆ ಒಂದು ವರ್ಷ ಕಳೆದಿದೆ. ತನ್ನ ಜೀವನದುದ್ದಕ್ಕೂ ವೀರನಂತೆ ಬದುಕಿದ್ದ ಅರ್ಜುನ ಅಂಬಾರಿ ಹೊತ್ತು ವಿಶ್ವ ವಿಖ್ಯಾತನಾಗಿದ್ದ. ಆದರೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಆದ ಅನಾಹುತ ಅರ್ಜುನನ್ನ ರಣ ರಂಗದಲ್ಲೇ ಮಡಿಯುವಂತೆ ಮಾಡಿತ್ತು.
ವೀರ ಅರ್ಜುನನ ಸಾವಿಗೆ ಕರುನಾಡೆ ಕಂಬನಿ ಮಿಡಿದಿತ್ತು. ಅರ್ಜುನ ಹೆಸರಿನಲ್ಲಿಸ್ಮಾರಕ ನಿರ್ಮಾಣ ಆಗಬೇಕು ಎಂದು ಕೋಟಿ ಕೋಟಿ ಜನರ ಕೂಗಿಗೆ ಸ್ಪಂದಿಸಿದ್ದ ಸರ್ಕಾರ ಅರ್ಜುನ ಮಡಿದ ಸ್ಥಳ ಹಾಗೂ ಅರ್ಜುನ ನೆಲೆಸಿದ್ದ ಶಿಬಿರ ಎರಡು ಕಡೆ ಸ್ಮಾರಕ ನಿರ್ಮಾಣದ ಭರವಸೆ ನೀಡಿತ್ತು. ಆದರೆ ಅರ್ಜುನ ಸತ್ತು ಒಂದು ವರ್ಷವಾದ್ರೂ ಇಲ್ಲಿಯವರೆಗೆ ಅರ್ಜುನನ ಪುತ್ಥಳಿ ಕಾರ್ಯ ಪೂರ್ಣ ಗೊಂಡಿಲ್ಲ. ಸ್ಮಾಕರದ ಕಾಮಗಾರಿ ಅಂತಿಮಗೊಂಡಿಲ್ಲ ಎನ್ನುವುದು ಅರ್ಜುನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಅಂಬಾರಿ ಹೊತ್ತೇ ಖ್ಯಾತಿಗೆ ಪಾತ್ರವಾಗಿದ್ದ ಅರ್ಜುನನಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಬರೋಬ್ಬರಿ ಒಂಭತ್ತು ಭಾರಿ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಕೊಂಚವೂ ತೊಂದರೆಯಾಗದಂತೆ ನಡೆದುಕೊಂಡು ಸಂಪನ್ನಗೊಳಿಸಿದ್ದ ಅರ್ಜುನ ಕಳೆದ ವರ್ಷ ಇದೇ ದಿನ ಅಂದರೆ ಡಿ.4ರಂದು ಕಾಡಾನೆ ಸರೆ ಕಾರ್ಯಾಚರಣೆ ವೇಳೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿ ಕಾಡಾನೆಯೊಂದಿಗೆ ಕಾದಾಟದಲ್ಲಿ ವೀರ ಮರಣವನ್ನಪ್ಪಿತ್ತು.
ಅಂದೇ ಅರ್ಜುನನ ಮೃತ ದೇಹವನ್ನ ಬಳ್ಳೆ ಆನೆ ಶಿಬಿರದಲ್ಲಿ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು. ಅದು ಸಾಧ್ಯವಾಗದೇ ಇದ್ದಾಗ ಸಾವನ್ನಪ್ಪಿದ ಸ್ಥಳದಲ್ಲಾದರೂ ಅಂತ್ಯಕ್ರಿಯೆ ನಡೆಸಿ ಅದೇ ಸ್ಥಳದಲ್ಲಿ ಅರ್ಜುನನ ಪುತ್ಥಳಿ ನಿರ್ಮಿಸಿ ಸ್ಮಾರಕ ಮಾಡಿ ಕ್ಯಾಪ್ಟನ್ ಅರ್ಜುನನಿಗೆ ಗೌರವ ಸಲ್ಲಿಸಬೇಕು ಎಂಬ ಕೂಗು ಕೇಳಿಬಂದಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ ಕೂಡ ಅರ್ಜುನ ಮೃತಪಟ್ಟ ಸ್ಥಳ ಹಾಗೂ ಅರ್ಜುನ ನೆಲೆಸಿದ್ದ ಬಳ್ಳೆ ಕ್ಯಾಂಪ್ ಎರಡೂ ಕಡೆ ಅರ್ಜುನನ ಪುತ್ಥಳಿ ಹಾಗೂ ಸ್ಮಾರಕ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ ಅರ್ಜುನ ಮಡಿದು ವರ್ಷ ಉರುಳಿದ್ದು, ಇನ್ನೂ ಅರ್ಜುನನ ಅಭಿಮಾನಿಗಳ ಕೋರಿಕೆ ನೆರವೇರಿಲ್ಲ.
ಅರ್ಜುನ ಸಾವನ್ನಪ್ಪಿದ ಸ್ಥಳದಲ್ಲಿ ಪುತ್ಥಳಿ ಪ್ರತಿಷ್ಠಾಪನೆಗೆ ಕಟ್ಟಡ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದೆ. ಅಲ್ಲದೇ ಅರ್ಜುನನ ಪುತ್ಥಳಿಗಳನ್ನು ಬಳ್ಳೆ ಆನೆ ಶಿಬಿರದಲ್ಲಿ ಶಿಲ್ಪಿಗಳು ಅರ್ಜುನ ಪುತ್ಥಳಿ ನಿರ್ಮಾಣ ಮಾಡುತ್ತಿದ್ದಾರೆ.ಈ ನಡುವೆ ಇಂದು ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಸ್ಮರಣೆ ಕಾರ್ಯಮಾಡಿದ್ದಾರೆ.
ಅರ್ಜುನನ ಸಮಾಧಿ ಸ್ಥಳದಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲದಿರೋದು ಒಂದೆಡೆಯಾದ್ರೆ, ಅರ್ಜುನ ಪುತ್ಥಳಿ ನಿರ್ಮಾಣ ಕಾರ್ಯ ಕೂಡ ಮುಗಿದಿಲ್ಲ. ಇಂದೇ ಅರ್ಜುನನ ಪುತ್ಥಳಿ ನಿರ್ಮಾಣ ಕಾರ್ಯ ನಿಗದಿಗೊಳಿಸಿಕೊಂಡಿದ್ದ ಅರಣ್ಯ ಇಲಾಖೆ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿದ್ದು, ಶೀಘ್ರವಾಗಿ ಕಾಮಗಾರಿ ಮುಗಿಸಲಿ ಎಂದು ಅರ್ಜುನನ ಅಭಿಮಾನಿಗಳು ಒತ್ತಾಯಿಸಿದ್ದಾರೆ.
Leave a Comment