ನಿಮ್ಮ ಪಿತೃಗಳ ಫೋಟೋ ಮನೆಯಲ್ಲಿರಬೇಕೆ?; ವಾಸ್ತು ಪ್ರಕಾರ ಎಲ್ಲಿಟ್ಟರೆ ಒಳಿತು
ನ್ಯೂಸ್ ಆ್ಯರೋ: ಕೆಲವರಿಗೆ ಗೊಂದಲ- ತೀರಿಕೊಂಡ ನಮ್ಮ ಹಿರಿಯರ ಫೋಟೋ ಮನೆಯಲ್ಲಿ ಎಲ್ಲಿಡುವುದು? ಹಾಲ್ನಲ್ಲಿ ಇಟ್ಟರೆ ಸಾಕೋ ಅಥವಾ ಪೂಜಾ ಕೋಣೆಯಲ್ಲೋ? ಅದಕ್ಕೆ ನಿತ್ಯ ಹೂವಿನ ಹಾರ ಹಾಕಬೇಕೆ?. . ಈ ಕುರಿತು ಮಾಹಿತಿ ಇಲ್ಲಿದೆ
ನಮ್ಮ ಹಿಂದಿನ ಶಾಸ್ತ್ರಗಳು, ಗರುಡ ಪುರಾಣ ಇವುಗಳೆಲ್ಲ ತಿಳಿಸಿರುವ ಪ್ರಕಾರ, ಯಾರಿಗೆ ಪಿತೃಗಳ ಆಶೀರ್ವಾದ ದೊರೆಯುತ್ತದೆಯೋ ಅವರಿಗೆ ಜೀವನದಲ್ಲಿ ಉನ್ನತಿ ಎಂಬುದು ದೊರೆಯುತ್ತದೆ. ಪಿತೃಗಳನ್ನೇ ನೆನೆಯದ ವ್ಯಕ್ತಿ ಉದ್ಧಾರ ಆಗುವುದು ಸಾಧ್ಯವೇ ಇಲ್ಲ. ಬದುಕಿರುವ ಪಿತೃಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹಾಗೇ ಗತಿಸಿಹೋದ ಪಿತೃಗಳನ್ನು ಶ್ರದ್ಧೆಯಿಂದ ನೆನೆಯಬೇಕು.
ಮನುಷ್ಯರು ಪಿತೃಗಳ ನೆನಪಿಗೋಸ್ಕರ ಅವರ ಫೋಟೋಗಳನ್ನು ಗೋಡೆಯ ಮೇಲೆ ಹಾಕುತ್ತಾರೆ. ಆದರೆ ಫೋಟೋಗಳನ್ನು ಗೋಡೆಯ ಮೇಲೆ ಹಾಕಬೇಕಾದರೆ ದಿಕ್ಕಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಒಂದು ಕಾರಣದಿಂದ ಪಿತೃಗಳಿಗೆ ಬೇಸರ ಉಂಟಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಪೂರ್ವಜರ ಅಥವಾ ಪಿತೃಗಳ ಫೋಟೋವನ್ನು ಗೋಡೆಯ ಮೇಲೆ ಅಂಟಿಸಿದರೆ ಒಳ್ಳೆಯ ಫಲಗಳು ಲಭಿಸುತ್ತದೆ. ಒಂದು ವೇಳೆ ತಪ್ಪಾದ ದಿಕ್ಕಿನಲ್ಲಿ ಫೋಟೋಗಳನ್ನು ಹಾಕಿದರೆ ಅದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ತೊಂದರೆಯನ್ನು ಸಹ ಅನುಭವಿಸಬೇಕಾಗುತ್ತದೆ.
ಪೂರ್ವಜರ ಫೋಟೋವನ್ನು ಯಾವುದೇ ಕಾರಣಕ್ಕೂ ದೇವರ ಕೋಣೆಯಲ್ಲಿ ಇಡಬಾರದು. ಹಾಲ್ನಲ್ಲಿ ಇಡಬಹುದು. ಆದರ ಮಲಗುವ ಕೋಣೆಯಲ್ಲಿ ಬೇಡ. ಪೂರ್ವಜರ ಅಥವಾ ಪಿತೃಗಳ ಫೋಟೋವನ್ನು ಉತ್ತರ ದಿಕ್ಕಿನಲ್ಲಿ ಹಾಕಬೇಕು. ಪಿತೃ ಪಕ್ಷದಲ್ಲಿ ಮಾಡುವ ಪ್ರತಿಯೊಂದು ಕಾರ್ಯಗಳನ್ನು ದಕ್ಷಿಣ ಮುಖವಾಗಿ ಮಾಡಬೇಕು. ಇದರ ಜೊತೆಗೆ ಮಲಗುವ ಕೋಣೆಯಲ್ಲಿ ಅಥವಾ ಅಡುಗೆ ಕೋಣೆಯಲ್ಲಿ ಪಿತೃಗಳ ಫೋಟೋವನ್ನು ಹಾಕಬಾರದು.
ಗತಿಸಿದ ಹಿರಿಯರು ದೇವರಲ್ಲ. ಹೀಗಾಗಿ ದೇವರಂತೆ ಅವುಗಳನ್ನು ಪೂಜಿಸುವುದು ಸಲ್ಲದು. ಒಂದು ಹೂವಿನ ಹಾರವನ್ನು ಹಾಕಬಹುದು. ನಿತ್ಯವೂ ಹಾಕಬೇಕಿಲ್ಲ. ವಾರಕ್ಕೊಮ್ಮೆ ಹಾಕಿದರೂ ಸಾಕು. ದೇವರುಗಳ ಫೋಟೋದ ನಡುವಿನಲ್ಲಿ ಅವು ಬೇಡ. ಊದಿನಕಡ್ಡಿಯನ್ನು ಮಹಾಲಯ ಅಮವಾಸ್ಯೆಯಂಥ ದಿನಗಳಲ್ಲಿ ಹಚ್ಚಬಹುದು. ಕುಂಕುಮ ಅಥವಾ ವಿಭೂತಿ- ನಿಮ್ಮ ಸಂಪ್ರದಾಯಕ್ಕೆ ತಕ್ಕಂತೆ ಹಚ್ಚುವುದಕ್ಕೆ ಅಡ್ಡಿಯಿಲ್ಲ. ಆದರೆ ಹಣೆಯಲ್ಲಿ ಒಂದು ಬೊಟ್ಟು ಇಟ್ಟರೆ ಸಾಕು.
ಇನ್ನು ಪಿತೃಗಳ ಫೋಟೋದಲ್ಲಿ ಭಿನ್ನ ಇರಬಾರದು. ಅವುಗಳ ಗಾಜು ಒಡೆದಿರಬಾರದು. ಫೋಟೋ ಹರಿದಿರಬಾರದು. ನೀರಿನಲ್ಲಿ ನೆನೆದಿರಬಾರದು. ಅರ್ಧಂಬರ್ಧ ಫೋಟೋ ನೋಡಬೇಡಿ, ಹಾಕಬೇಡಿ. ಮನೆಯಲ್ಲಿ ಹಾಕುವ ಪ್ರತಿಯೊಬ್ಬ ಪಿತೃವಿನ ಹೆಸರೂ ಗೊತ್ತಿರಲಿ. ಮಕ್ಕಳಿಗೂ ತಿಳಿಸಿ. ಆಗಾಗ ಧೂಳು ತೆಗೆದು ಸ್ವಚ್ಛಗೊಳಿಸಿ.
ಮಹಾಲಯ ಅಮವಾಸ್ಯೆಯಂದು ಈ ಹಿರಿಯರಿಗೆ ಸೂಕ್ತ ಪಿಂಡಪ್ರದಾನ ಮಾಡುವುದು ಸರಿಯಾದ ಕ್ರಮ. ಅದು ಸಾಧ್ಯವಾಗದಿದ್ದರೆ ಅವರಿಗೆ ಇಷ್ಟವಾದ ತಿಂಡಿ- ತೀರ್ಥವನ್ನು ಮನೆಯಲ್ಲೇ ಮಾಡಿ ಅರ್ಪಿಸಿದರೆ ಸಾಕು. ಇಷ್ಟು ಮಾಡುವ ಮಕ್ಕಳನ್ನು ದೈವಸ್ವರೂಪರಾದ ಹಿರಿಯರು ಆಶೀರ್ವದಿಸುತ್ತಾರೆ ಎಂಬುದು ನಂಬಿಕೆ.
Leave a Comment