ಓ ಮೈ ಗಾಡ್..! ಮಹಿಳೆಯ ಕಿಡ್ನಿಯಲ್ಲಿತ್ತು ಬರೋಬ್ಬರಿ 300ಕ್ಕೂ ಅಧಿಕ ಕಲ್ಲುಗಳು – ತಂಪು ಪಾನೀಯ ಪ್ರಿಯರು ಈ ಸುದ್ದಿ ಓದಲೇಬೇಕು..!

ನ್ಯೂಸ್ ಆ್ಯರೋ : ವೈದ್ಯಲೋಕದಲ್ಲಿ ನಡೆಯುವ ಅಚ್ಚರಿ ಸಂಗತಿಗಳಿಗೆ ಮಿತಿಯೇ ಇಲ್ಲ. ಲೋಕದಲ್ಲಿ ಅಸಾಧ್ಯವಾದ ಅದೆಷ್ಟೋ ವಿಚಾರಗಳು ಆರೋಗ್ಯ ಕ್ಷೇತ್ರದಲ್ಲಿ ಸಕ್ಸಸ್ ಆಗಿದ್ದಿದೆ. ಹೊಟ್ಟೆಯಲ್ಲಿ ಕೆಜಿ ಗಟ್ಟಲೆ ಕಲ್ಲು, ಅಸಾಧ್ಯವಾದ ಅಚ್ಚರಿ ಎನಿಸುವ ಶಸ್ತ್ರ ಚಿಕಿತ್ಸೆಗಳು, ಮೂರಕ್ಕಿಂತ ಹೆಚ್ಚು ಮಕ್ಕಳ ಜನನ, ಹೀಗೆ ಒಂದಲ್ಲಾ ಒಂದು ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಅಂತಹದ್ದೇ ಒಂದು ಘಟನೆ ತೈವಾನ್‌ನಲ್ಲಿ ನಡೆದಿದ್ದು, ಈ ವಿಚಾರ ಕೇಳಿದ ಪ್ರತಿಯೊಬ್ಬರಿಗೂ ಶಾಕ್‌ ಆಗಿದೆ.

ತೈವಾನ್‌ನ ವೈದ್ಯರು ಮಹಿಳೆಯ ಮೂತ್ರಪಿಂಡದಿಂದ ಒಂದಲ್ಲ ಎರಡಲ್ಲಾ ನೂರಲ್ಲಾ ಬರೋಬ್ಬರಿ 300ಕ್ಕೂ ಹೆಚ್ಚು ಕಲ್ಲುಗಳನ್ನು ಹೊರಗೆ ತೆಗೆದಿದ್ದಾರೆ. ಇದು ವೈದ್ಯ ಲೋಕಕ್ಕೆ ಸವಾಲು ಅಷ್ಟೇ ಅಲ್ಲದೇ ದೊಡ್ಡ ಅಚ್ಚರಿ ಕೂಡ. ಒಂದು ಅಥವಾ ಎರಡು ಮೂರು ಕಲ್ಲುಗಳು ಮೂತ್ರಪಿಂಡದಲ್ಲಿ ಇರುತ್ತದೆ.

ನಿಜಕ್ಕೂ ನಡೆದಿದ್ದೇನು..?

ಕ್ಸಿಯಾವೋ ಯು ಎನ್ನುವ 20 ವರ್ಷದ ಮಹಿಳೆ ಹೊಟ್ಟೆ ನೋವು, ಬೆನ್ನು ನೋವು ಹಾಗೂ ಜ್ವರದಿಂದ ಬಳಲುತ್ತಿದ್ದರು. ಕೂಡಲೇ ಆಕೆಯನ್ನು ತೈನಾನ್ ನಗರದ ಚಿಮೆಯಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಕೆಯನ್ನು ಪರೀಕ್ಷೆ ಮಾಡಿದ ವೈದ್ಯರೇ ಅಚ್ಚರಿಗೊಂಡಿದ್ದಾರೆ.

ಅಲ್ಟ್ರಾಸೌಂಡ್​ ಸ್ಕ್ಯಾನ್​ ಮಾಡಿದಾಗ ಆಕೆಯ ಮೂತ್ರಪಿಂಡ ಊದಿಕೊಂಡಿತ್ತು. ಅಲ್ಲದೇ ಅದರೊಳಗೆ ನೂರಾರು ಕಲ್ಲುಗಳಿರುವುದು ತಿಳಿದು ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಿದ್ದಾರೆ. ಆಕೆಯ ಮೂತ್ರ ಪಿಂಡದಲ್ಲಿದ್ದ ಕಲ್ಲುಗಳು ಸುಮಾರು 5 ಮಿಲಿ ಮೀಟರ್​ನಿಂದ 2 ಸೆ.ಮೀ ಗಾತ್ರದಲ್ಲಿವೆ ಎಂದು​ ಸ್ಕ್ಯಾನ್​ ಮಾಡಿದಾಗ ತಿಳಿದು ಬಂದಿದೆ.

ಜೊತೆಗೆ ಒಂದಿಷ್ಟು ದ್ರವ ಕೂಡ ತುಂಬಿಕೊಂಡಿತ್ತು. ಇದರಿಂದ ಕಿಡ್ನಿಯು ಹೆಚ್ಚು ಅಪಾಯದಲ್ಲಿತ್ತು. ಅಲ್ಲದೇ ಆಕೆಯ ರಕ್ತ ಪರೀಕ್ಷೆ ಮಾಡಿದಾಗ ಬಿಳಿ ರಕ್ತಕಣಗಳು ಹೆಚ್ಚಾಗಿರುವುದು ಕೂಡ ತಿಳಿದು ಬಂದಿದೆ. ಕ್ಸಿಯಾವೋ ಯು ಆರೋಗ್ಯದ ಬಗ್ಗೆ ಗಂಭೀರವಾಗಿ ಚಿಂತಿಸಿದ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿದ್ದಾರೆ.

ಮೊದಲು ಆ್ಯಂಟಿ ಬಯಾಟಿಕ್​ ನೀಡಿ, ಮೂತ್ರ ಪಿಂಡದಲ್ಲಿದ್ದ ದ್ರವವನ್ನು ಹೊರಗೆ ತೆಗೆದಿದ್ದಾರೆ. ಬಳಿಕ ಮಿನಿಮಲಿ ಇನ್ವೆಸಿವ್​ ಸರ್ಜರಿ ಮಾಡಿದ್ದಾರೆ. ಈ ವೇಳೆ ವೈದ್ಯರು ಒಂದಲ್ಲ, ಎರಡಲ್ಲ, ಐವತ್ತಲ್ಲಾ, ನೂರಲ್ಲಾ, ಬರೋಬ್ಬರಿ 300ಕ್ಕೂ ಅಧಿಕ ಕಲ್ಲುಗಳನ್ನು ಹೊರ ತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಕೆಲವು ದಿನಗಳವರೆಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ.

ಇನ್ನು ಕ್ಸಿಯಾವೋ ಯು ಹೆಚ್ಚು ನೀರು ಕುಡಿಯುವುದಿಲ್ಲ ಅದರ ಬದಲಾಗಿ ತೈವಾನ್​ನ ಪ್ರಸಿದ್ಧ ಟೀ ಹಾಗೂ ತಂಪು ಪಾನಿಯಗಳನ್ನು ಮಾತ್ರ ಸೇವಿಸುತ್ತಿದ್ದರು ಎಂದು ವರದಿಯಾಗಿದೆ. ಇದರಿಂದಲೇ ಆಕೆಯ ಮೂತ್ರಪಿಂಡದಲ್ಲಿ ಅಷ್ಟೊಂದು ಕಲ್ಲುಗಳು ಆಗಿದ್ದವು ಎನ್ನಲಾಗಿದೆ.

ಕಿಡ್ನಿ ಸ್ಟೋನ್‌ ಮೊದಲ ಹಂತದಲ್ಲಿದ್ದರೇ ವೈದ್ಯರು ನೀರು ಕುಡಿಯವ ಅಭ್ಯಾಸ, ಮಾತ್ರೆ ಹಾಗೂ ಔಷಧಿಗಳಿಂದಲೇ ಗುಣಪಡಿಸುತ್ತಾರೆ. ಒಂದು ವೇಳೆ ಇದರಿಂದ ಸಾಧ್ಯವಾಗದಿದ್ದರೇ ಆಪರೇಷನ್‌ ಮೂಲಕ ಮೂತ್ರಪಿಂಡದ ಕಲ್ಲುಗಳನ್ನು ಹೊರ ತೆಗೆಯುತ್ತಾರೆ. ಆದರೆ ವೈದ್ಯಲೋಕಕ್ಕೆ ಸವಾಲು ತಂದಿದ್ದ ಈ ಮಹಿಳೆ ಪ್ರಕರಣವನ್ನು ತೈವಾನ್‌ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.