Keladi Chennamma Shaurya Award for 8-year-old Shaloo who saved the life of her younger sister who had fallen into a well

ಬಾವಿಗೆ ಬಿದ್ದಿದ್ದ ತಂಗಿಯನ್ನು ರಕ್ಷಿಸಿದ್ಲು ಎಂಟರ ಬಾಲೆ – ಸಾಹಸಮೆರೆದ ದಿಟ್ಟೆಗೆ ಶೌರ್ಯ ಪ್ರಶಸ್ತಿ ಘೋಷಣೆ : ಏನಿದು‌ ಸುದ್ದಿ?

ನ್ಯೂಸ್ ಆ್ಯರೋ : ಆಟ ಆಡುವುದು, ಕೀಟಲೆ ಮಾಡುವುದು ಮಕ್ಕಳ ಸ್ವಭಾವ. ಮಕ್ಕಳಿಗೆ ಅದನ್ನು ಬಿಟ್ಟು ಮತ್ತೇನೂ ತಿಳಿದಿರುವುದಿಲ್ಲ. ತಿಳಿಯುವ ವಯಸ್ಸು ಕೂಡ ಅವರದ್ದಲ್ಲ. ಹೀಗಿರುವಾಗ 8 ವರ್ಷದ ಬಾಲಕಿಯೊಬ್ಬಳು ಅನಿರೀಕ್ಷಿತವಾಗಿ ಬಾವಿಗೆ ಬಿದ್ದ ತನ್ನ 2 ವರ್ಷದ ಪುಟಾಣಿ ತಂಗಿಯನ್ನು ಬಾವಿಗೆ ಹಾರಿ ಕಾಪಾಡುತ್ತಾಳೆ ಅಂದರೆ ನೀವು ನಂಬುತ್ತೀರಾ?

ಕೇಳಲು ಇದು ಆಶ್ಚರ್ಯಕರ ಸಂಗತಿಯಾಗಿದ್ದರೂ ಈ ಘಟನೆ ನಡೆದಿರುವುದು ಸತ್ಯ. ಹೀಗೆ ಬಾವಿಗೆ ಹಾರಿ ಸಾಹಸ ಮೆರೆದಿರುವ ಬಾಲಕಿಗೆ ಸರ್ಕಾರ ಶೌರ್ಯ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಹಾಗಿದ್ದರೆ ಈ ಬಾಲಕಿ ಯಾರು? ಈಕೆಯ ಸಾಹಸಗಾಥೆ ಎಂತಹದ್ದು? ಎಂಬುದನ್ನ ನೋಡೋಣ.

ಆಟವಾಡುತ್ತಿದ್ದಾಗ ಬಾವಿಗೆ ಬಿದ್ದಳು ತಂಗಿ!

ತುಮಕೂರಿನ ಕುಂಚಂಗಿಪಾಳ್ಯದ ಶಾಲು ಹಾಗೂ ಆಕೆಯ ಎರಡು ವರ್ಷದ ಪುಟ್ಟ ತಂಗಿ ಮನೆಯ ಪಕ್ಕ ರಜೆಯ‌ ದಿನ‌ ಆಟವಾಡುತ್ತಿದ್ದರು. ಹೀಗೆ ಆಟವಾಡುತ್ತಿದ್ದಾಗ ತಂಗಿ ಆಕಸ್ಮಿಕವಾಗಿ ಅಲ್ಲೇ ಇದ್ದ ಬಾವಿಗೆ ಬಿದ್ದಿದ್ದಾಳೆ. ಇದರಿಂದ ಗಲಿಬಿಲಿಗೊಳ್ಳದ ಶಾಲು ಧೈರ್ಯದಿಂದ ಬಾವಿಗೆ ಹಾರಿ ತಂಗಿಯನ್ನು ಎತ್ತಿ ಹಿಡಿದು ಜೋರಾಗಿ ಬೊಬ್ಬೆ ಹಾಕಿದ್ದಾಳೆ. ಈ ವೇಳೆ ಮನೆಯವರು ಓಡಿ ಬಂದು ಶಾಲು ಹಾಗು ಆಕೆಯ ತಂಗಿಯನ್ನು ಮೇಲಕ್ಕೆ ಎತ್ತಿದ್ದಾರೆ.

ಶೌರ್ಯ ಪ್ರಶಸ್ತಿ ಘೋಷಿಸಿದ ಸರ್ಕಾರ!

ತಂಗಿ ಬಾವಿಗೆ ಬಿದ್ದಾಗ ಹಿಂದೆ ಮುಂದೆ ನೋಡದೆ ಬಾವಿಗೆ ಹಾರಿ ತಂಗಿಯ ಪ್ರಾಣ ರಕ್ಷಿಸಿಸ ದಿಟ್ಟ ಬಾಲಕಿ ಶಾಲುವಿನ ಸಾಹಸಗಾಥೆ ಮಾಧ್ಯಮಗಳಲ್ಲಿ ಪ್ರಸಾರವಾದಾಗ ಸರ್ಕಾರ ಇದನ್ನು ಗಮನಿಸಿ ರಾಣಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಘೋಷಿಸಿದೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮದಲ್ಲಿ ಶಾಲುಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.