ಕರಾವಳಿಯ ವೀರ ಯೋಧ ಪ್ರಾಂಜಲ್ ಪಾರ್ಥಿವ ಶರೀರ ಇಂದು ತವರಿಗೆ – ‘ಮಗನ ತ್ಯಾಗದ ಬಗ್ಗೆ ಹೆಮ್ಮೆಯಿದೆ’ ಎನ್ನುತ್ತಾ ಬಿಕ್ಕಳಿಸಿದ ತಂದೆ!

ನ್ಯೂಸ್ ಆ್ಯರೋ : ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರಾವಳಿ ಮೂಲದ ಬೆಂಗಳೂರು ನಿವಾಸಿ 29 ವರ್ಷದ ಕ್ಯಾಪ್ಟನ್. ಎಂ.ವಿ. ಪ್ರಾಂಜಲ್ ಹುತಾತ್ಮರಾಗಿದ್ದು, ಅವರ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ‌.

ಪ್ರಾಂಜಲ್ ಅವರ ಕುಟುಂಬ ಸದ್ಯ, ಬೆಂಗಳೂರಿನ ಜಿಗಣಿಯ ನಂದನವನದ ಬಡಾವಣೆಯಲ್ಲಿ ವಾಸವಾಗಿದ್ದು, ಗುರುವಾರದಂದು ಹಿರಿಯ ಯೋಧರು, ರಾಜಕಾರಣಿಗಳು ಮನೆಗೆ ಆಗಮಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಪ್ರಾಂಜಲ್ ಪಾರ್ಥಿವ ಶರೀರ ಇಂದು ಮನೆ ತಲುಪಲಿದ್ದು, ಸಂಜೆಯ ಹೊತ್ತಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ‌.

ನಾಲ್ವರು ಯೋಧರು ಹುತಾತ್ಮ!

ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಕ್ಯಾ.ಪ್ರಾಂಜಲ್ ಸೇರಿ ನಾಲ್ಕು ಜನ ಯೋಧರು ಹುತಾತ್ಮರಾಗಿದ್ದರೆ. ಅದಕ್ಕೂ ಮುನ್ನ ಭಾರತೀಯ ಯೋಧರು ಪಾಕಿಸ್ತಾನಿ ಉಗ್ರನನ್ನು ಹತ್ಯೆಗೈದಿದೆ. ಗುಂಡಿನ‌ ಕಾಳಗದಲ್ಲಿ ಓರ್ವ ಯೋಧ ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಾವಳಿಯಲ್ಲಿ ಪ್ರಾಂಜಲ್ ಶಿಕ್ಷಣ!

ಮಂಗಳೂರಿನ ಎಂ.ಆರ್.ಪಿ.ಎಲ್ ಸಂಸ್ಥೆಯಲ್ಲಿ ಎಂಡಿ ಆಗಿದ್ದ ವೆಂಕಟೇಶ್ ಅವರ ಏಕೈಕ ಪುತ್ರ ಪ್ರಾಂಜಲ್ ಅವರು ಸುರತ್ಕಲ್ ಹಾಗೂ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಬಳಿಕ‌ ಪೂನಾದ ಸೇನಾ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದರು. ಬೆಂಗಳೂರಿನಲ್ಲಿಯೂ ಶಿಕ್ಷಣ ಪೂರೈಸಿದ ಪ್ರಾಂಜಲ್ ಬಳಿಕ ಸೇನೆಗೆ ಸೇರಿದ್ದರು.

ಎರಡು ವರ್ಷಗಳ ಹಿಂದೆ ಅದಿತಿ ಅವರನ್ನು ವಿವಾಹವಾಗಿದ್ದ ಪ್ರಾಂಜಲ್, ಜಮ್ಮು ಕಾಶ್ಮೀರದಲ್ಲಿ ಜೀವನ‌ನಡೆಸುತ್ತಿದ್ದರು. ಇವರು 66ನೇ ರಾಷ್ಟ್ರೀಯ ರೈಫಲ್ಸ್ ನಲ್ಲಿ ಕ್ಯಾಪ್ಟನ್ ಆಗಿದ್ದು, ಪದೋನ್ನತ್ತಿಯ ಕನಸಿನಲ್ಲಿಯೇ ಹುತಾತ್ಮರಾದರು.

ಮಗನ ತ್ಯಾಗದ ಬಗ್ಗೆ ಹೆಮ್ಮೆಯಿದೆ!

ಪ್ರಾಂಜಲ್ ದೇಶಕ್ಕಾಗಿ ಪ್ರಾಣಾರ್ಪಿಸಿದ ಬಗ್ಗೆ ಮಾತನಾಡಿರುವ ಅವರ ತಂದೆ ವೆಂಕಟೇಶ್, ಪುತ್ರ ಶೋಕದ ನಡುವೆಯೂ ಮಗನ ದೇಶಪ್ರೇಮದ ಬಗ್ಗೆ, ಬಲಿದಾನದ ಬಗ್ಗೆ ಹೆಮ್ಮೆಯಿದೆ. ಪ್ರಾಂಜಲ್ ಬಹಳ ಮೃದು ಸ್ವಭಾವದವನಾಗಿದ್ದ.

ಬಾಲ್ಯದಿಂದಲೂ ಸೈನಿಕನಾಗುವ ಕನಸು ಕಂಡು ಭಾರತೀಯ ಸೇನೆ ಸೇರಿದ. ದೇಶಕ್ಕಾಗಿ ಮಡಿದ ಮಗನನ್ನು ನಗುತ್ತಲೇ ಕಳಿಸಿಕೊಡುತ್ತಿದ್ದೇವೆ. ಮಗನ ತ್ಯಾಗದ ಬಗ್ಗೆ ಹೆಮ್ಮೆಯಿದೆ’ ಎನ್ನುತ್ತಲೇ ಭಾವುಕರಾದರು.