
17 ರೂ. ಇದ್ದ ಕೂಲಿ ಕಾರ್ಮಿಕನ ಬ್ಯಾಂಕ್ ಖಾತೆಯಲ್ಲೀಗ 100 ಕೋಟಿ ರೂ..! – ಏನಿದು ಪ್ರಕರಣ? ನಡೆದದ್ದೆಲ್ಲಿ?
- Viral News
- May 27, 2023
- No Comment
- 182
ನ್ಯೂಸ್ ಆ್ಯರೋ : ನಿಮ್ಮ ಖಾತೆಗೆ ಒಂದೇ ರಾತ್ರಿ ಬರೋಬ್ಬರಿ 100 ಕೋಟಿ ರೂ. ಜಮೆಯಾಗಿ ಅದನ್ನು ಪೊಲೀಸರು ಹೇಗೆ ಬಂತೆಂದು ಕೇಳಿದರೆ ಹೇಗಿರುತ್ತದೆ? ಊಹಿಸಲೂ ಸಾಧ್ಯವಿಲ್ಲ ಅಲ್ಲವೆ? ಆದರೆ ಕೂಲಿ ಕಾರ್ಮಿಕರೊಬ್ಬರಿಗೆ ಇಂತಹ ಪರಿಸ್ಥಿತಿ ಎದುರಾಗಿದೆ. ಏನೂ ಮಾಡಲು ತೋಚದ ಸ್ಥಿತಿಯಲ್ಲಿ ಅವರಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಬಸುದೇಬ್‌ಪುರ ಗ್ರಾಮದ ದಿನಗೂಲಿ ಕಾರ್ಮಿಕ ಮೊಹಮ್ಮದ್ ನಾಸಿರುಲ್ಲಾ ಮಂಡಲ್ ಎಂಬವರ ಬ್ಯಾಂಕ್ ಖಾತೆಗೆ 100 ಕೋಟಿ ರೂ. ಜಮೆ ಆಗಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಅಚ್ಚರಿ ಎಂದರೆ ಪೊಲೀಸರು ಕರೆ ಮಾಡಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದಾಗಲೇ ತನ್ನ ಖಾತೆಯಲ್ಲಿ ಇಷ್ಟೊಂದು ಹಣ ಇದೆ ಎಂಬುದು ಮಂಡಲ್ಗೆ ಗೊತ್ತಾಗಿದ್ದು.
ನನ್ನ ಖಾತೆಯಲ್ಲಿ 17 ರೂ. ಮಾತ್ರ ಇತ್ತು. ಅದು ಹೇಗೆ, ಯಾರಿಂದು ನೂರು ಕೋಟಿ ರೂ. ಜಮೆ ಆಯಿತು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಮಂಡಲ್ ಹೇಳಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ನಂತರ ನಿದ್ದೆ ಬರದಂತಾಯಿತು. ಏನಾಗಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಬ್ಯಾಂಕ್ ಖಾತೆಯಲ್ಲಿ 100 ಕೋಟಿ ರೂ. ಇರುವುದನ್ನು ಮೊದಲಿಗೆ ನಾನು ನಂಬಿರಲಿಲ್ಲ. ಈ ಬಗ್ಗೆ ಪಿಎನ್‌ಬಿ ಶಾಖೆಗೆ ತೆರಳಿ ವಿಚಾರಿಸಿದೆ. ಪಾಸ್‌ಬುಕ್ ಪರಿಶೀಲಿಸಿ ಆರಂಭದಲ್ಲಿ 17 ರೂ. ಮಾತ್ರ ಖಾತೆಯಲ್ಲಿತ್ತು ಎಂದು ಬ್ಯಾಂಕ್ ಹೇಳಿದೆ ಎಂದು ಮಂಡಲ್ ವಿವರಿಸಿದ್ದಾರೆ.
”ಭಯ ಆವರಿಸಿದೆ”
ನಾನು ದಿನಗೂಲಿ ಕೆಲಸ ಮಾಡುತ್ತಿದ್ದು, ಈ ಹಣದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಾರೆ, ಹೊಡೆಯುತ್ತಾರೆ ಎಂಬ ಭಯದಲ್ಲಿ ಮನೆಯಲ್ಲೇ ದಿನ ಕಳೆಯುವಂತಾಗಿದೆ. ಸದ್ಯ ನನ್ನ ಖಾತೆಯನ್ನು ಬ್ಯಾಂಕ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪೊಲೀಸ್ ಪ್ರಕರಣ ದಾಖಲಾಗಿರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಂಡಲ್ ಹೇಳಿದ್ದಾರೆ.
ಸತ್ಯಾಸತ್ಯತೆ ತಿಳಿಯಲು ಜಂಗಿಪುರ ಸೈಬರ್ ಸೆಲ್ ಅಧಿಕಾರಿಗಳನ್ನು ಕೇಳಿದರೆ ಅವರು ಪ್ರಕರಣದ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.