
ಕೊರೊನಾ ಬೆನ್ನಲ್ಲೇ ಪೊವಾಸನ್ ವೈರಸ್ ಕಾಟ – ಪ್ರಾಣಿಗಳ ಮೇಲಿನ ಉಣ್ಣೆ ಹುಳುಗಳಿಂದ ಹರಡುತ್ತೆ ಈ ರೋಗ, ಇದಕ್ಕೆ ಚಿಕಿತ್ಸೆಯೇ ಇಲ್ಲ..!!
- ಅಂತಾರಾಷ್ಟ್ರೀಯ ಸುದ್ದಿ
- May 27, 2023
- No Comment
- 73
ನ್ಯೂಸ್ ಆ್ಯರೋ : ಕೊರೊನಾ – 2020ರಲ್ಲಿ ಕಾಣಿಸಿಕೊಂಡ ಈ ಮಾರಣಾಂತಿಕ ವೈರಸ್ ಹೆಸರು ಕೇಳಿದರೆ ಈಗಲೂ ಹಲವರು ಬೆಚ್ಚಿ ಬೀಳುತ್ತಾರೆ. ವಿಶ್ವನ್ನೇ ನಡುಗಿಸಿದ್ದ ಈ ವೈರಸ್ ನ ಹಾವಳಿಯಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಂತೆಯೇ ಆರೋಗ್ಯ ತಜ್ಞರು ಹೊಸದೊಂದು ಎಚ್ಚರಿಕೆ ನೀಡಿದ್ದಾರೆ. ಪೊವಾಸನ್ ಎಂಬ ವೈರಸ್ ಹರಡುತ್ತಿದ್ದು, ಇದರಿಂದ ಅಮೆರಿಕದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಪೊವಾಸನ್ ವೈರಸ್ ದಾಳಿ ಮಾಡಿದರೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ. ಇದು ಮೆದುಳಿನಲ್ಲಿ ಉರಿಯೂತ ಉಂಟು ಮಾಡುತ್ತದೆ. ಇತ್ತೀಚೆಗೆ ಯುಎಸ್, ಕೆನಡ, ರಷ್ಯಾಗಳಲ್ಲಿ ಈ ವೈರಸ್ ಪತ್ತೆಯಾಗಿರುವುದಾಗಿ ವರದಿಯಾಗಿದ್ದು, ಉಣ್ಣಿಗಳಿಂದ ಹರಡುತ್ತದೆ ಎನ್ನಲಾಗಿದೆ.
ಯುಎಸ್‍ಎಯಲ್ಲಿ ಪ್ರತೀ ವರ್ಷ ಸುಮಾರು 25 ಮಂದಿಗೆ ಈ ಸೋಂಕು ತಗುಲುತ್ತಿದ್ದು, ಇತ್ತೀಚೆಗೆ ವರದಿಯಾದ ಸಾವು ಮೂರನೆಯದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ. ಜಿಂಕೆ, ಅಳಿಲು ಮುಂತಾದ ಪ್ರಾಣಿಗಳ ಮೇಲಿರುವ ಸೋಂಕು ಪೀಡಿತ ಉಣ್ಣಿಗಳು ಮಾನವನಿಗೆ ಕಚ್ಚುವ ಮೂಲಕ ರೋಗ ಹರಡುತ್ತದೆ. ಸೋಂಕು ಪೀಡಿತ 10 ಮಂದಿಯ ಪೈಕಿ ಒಬ್ಬರು ಮೃತಪಡುತ್ತಾರೆ.
ಲಕ್ಷಣಗಳೇನು?
- ಆರಂಭದಲ್ಲಿ ಬಹುತೇಕರಿಗೆ ಯಾವುದೇ ಲಕ್ಷಣ ಕಂಡುಬರುವುದಿಲ್ಲ.
- ಲಕ್ಷಣ ಕಂಡು ಬರಲು ಸೋಂಕು ತಗುಲಿದ 1 ವಾರದಿಂದ 1 ತಿಂಗಳಿನವರೆಗೆ ಸಮಯ ಹಿಡಿಯುತ್ತದೆ.
- ಜ್ವರ, ತಲೆನೋವು, ಸುಸ್ತು, ಆಗಾಗ ವಾಂತಿ ಮಾಡುವುದು ಸಾಮಾನ್ಯ ಲಕ್ಷಣಗಳು
- ಕೆಲವೊಮ್ಮೆ ಮೆದುಳಿನ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ
- ಗೊಂದಲ, ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು, ಮಾತನಾಡಲು ತೊಂದರೆ ಕಂಡು ಬರುತ್ತದೆ.
- ಈ ಕಾಯಿಲೆ ಗುಣವಾದವರ ಪೈಕಿ ಬಹುತೇಕರು ದೀರ್ಘಕಾಲದ ಸಮಸ್ಯೆಯಿಂದ ಬಳಲುತ್ತಾರೆ. ಸ್ಮರಣೆ ಶಕ್ತಿ ಕುಂಠಿತ, ಆಗಾಗ ಕಾಣಿಸಿಕೊಳ್ಳುವ ತಲೆನೋವು, ಸ್ನಾಯು ಸೆಳೆತ ಮುಂತಾದ ತೊಂದರೆ ಕಾಣಿಸಿಕೊಳ್ಳಬಹುದು.
ಚಿಕಿತ್ಸೆ
ಮೊದಲೇ ಹೇಳಿದಂತೆ ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಇದುವರೆಗೆ ಕಂಡುಹಿಡಿಯಲಾಗಿಲ್ಲ. ವಿಶ್ರಾಂತಿ, ದ್ರವ ರೂಪದ ಆಹಾರ ಸೇವನೆ, ನೋವು ನಿವಾರಕ ಔಷಧಗಳ ಬಳಕೆಯಿಂದ ಸ್ವಲ್ಪ ಮಟ್ಟಿನ ಪ್ರಯೋಜನ ಪಡೆಯಬಹುದು. ಉಸಿರಾಟ, ಮೆದುಳಿನ ಊತದ ತೊಂದರೆ ಕಂಡು ಬಂದರೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.