A Mumbai couple sold their two children to buy drugs!

ಡ್ರಗ್ಸ್ ಖರೀದಿಸಲು ಇಬ್ಬರು ಮಕ್ಕಳನ್ನೇ ಮಾರಿದ ಮುಂಬೈ ದಂಪತಿ – ಇಂಥಾ ಪೇರೆಂಟ್ಸೂ ಇರ್ತಾರಾ…!?

ನ್ಯೂಸ್ ಆ್ಯರೋ : ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂಬ ಮಾತಿದೆ. ಹೆತ್ತ ಮೇಲೆ ಆ ಮಗು ಹೇಗಿದ್ದರೂ ಕೂಡಾ ಜೀವ ನೀಡಿದ ದಂಪತಿಗೆ ಅದು ಮಗುವೇ ತಾನೇ…? ತಾಯಿಯ ಪ್ರೀತಿಗೆ ಮಿಗಿಲಾದದ್ದು ಈ ಜಗತ್ತಿನಲ್ಲಿ ಬೇರೇನೂ ಇಲ್ಲ ಅಂತಾರೆ. ಆದರೆ ಮುಂದುವರೆದ ಆಧುನಿಕ ಯುಗದಲ್ಲಿ ಹಣಕ್ಕಿರುವ, ತಮ್ಮ ಚಟಕ್ಕೆ ನೀಡುವ ಒತ್ತಿಗಿರುವ ಬೆಲೆ ಸಂಬಂಧಕ್ಕೆ ಇರೋದಿಲ್ಲ ಅಲ್ವಾ…? ಅದೇ ರೀತಿ ಈ ಪ್ರಕರಣ ಕೂಡಾ. ಕೇವಲ ಮಾದಕ ವಸ್ತು ಖರೀದಿಗಾಗಿ ಈ ದಂಪತಿ ತಮ್ಮ ಮಕ್ಕಳನ್ನೇ ಮಾರಿದ್ರು ಅಂದ್ರೆ ನಂಬ್ತೀರಾ..? ನಂಬಲೇಬೇಕು.

ಮಾದಕ ವಸ್ತು ಖರೀದಿ ಮಾಡೋದಕ್ಕಾಗಿ ದಂಪತಿ ತಮ್ಮ ಮಕ್ಕಳನ್ನೇ ಮಾರಾಟ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರ ರಾಜ್ಯದ ರಾಜಧಾನಿ ಮುಂಬೈನಲ್ಲಿ ವರದಿಯಾಗಿದೆ. ಈ ಪ್ರಕರಣ ಸಂಬಂಧ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ತಮ್ಮ ಇಬ್ಬರು ಮಕ್ಕಳನ್ನು ಮಾರಾಟ ಮಾಡಿದ್ದ ದಂಪತಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಒಂಬತ್ತು ತಿಂಗಳ ಹಸುಳೆಯನ್ನೂ ಮಾರಿದ್ದ ಕಿರಾತಕರು….!

9 ತಿಂಗಳ ಹೆಣ್ಣು ಮಗುವನ್ನು ಈ ಕಿರಾತಕ ದಂಪತಿ ಮುಂಬೈ ನಗರದ ಅಂಧೇರಿ ನಿವಾಸಿಯೊಬ್ಬರಿಗೆ ಮಾರಾಟ ಮಾಡಿದ್ದರು. ಇದೀಗ ಪೊಲೀಸರು ಆ ಮಗುವನ್ನು ರಕ್ಷಣೆ ಮಾಡಿದ್ಧಾರೆ. ದಂಪತಿಯ ಎರಡು ವರ್ಷ ವಯಸ್ಸಿನ ಮಗನನ್ನೂ ಈ ಹಿಂದೆ ಮಾರಾಟ ಮಾಡಲಾಗಿತ್ತು. ಇದೀಗ ಪೊಲೀಸರು ಬಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

ಹೆತ್ತವರೇ ಆರೋಪಿಗಳು…!

ಬಂಧಿತ ಆರೋಪಿ ದಂಪತಿಯನ್ನು ಶಬ್ಬೀರ್ ಹಾಗೂ ಆತನ ಪತ್ನಿ ಸೈನಾ ಖಾನ್ ಎಂದು ಗುರ್ತಿಸಲಾಗಿದೆ. ದಂಪತಿಗೆ ಸಹಕರಿಸಿದ ಶಕೀಲ್ ಮಕ್ರಾನಿ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಉಷಾ ರಾಥೋಡ್ ಎಂಬ ಮಹಿಳಾ ಏಜೆಂಟ್ ಒಬ್ಬರು ಕಮಿಷನ್ ಪಡೆದು ಈ ಮಕ್ಕಳ ಮಾರಾಟಕ್ಕೆ ಸಹಕಾರ ನೀಡಿದ್ದರು ಎಂದು ಆರೋಪಿಸಲಾಗಿದ್ದು, ಆಕೆಯನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಏನಿದು ಪ್ರಕರಣ..?

ಈ ದಂಪತಿ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗಿದ್ದರು. ಡ್ರಗ್ಸ್ ಖರೀದಿಗೆ ಹಣ ಇಲ್ಲದ ಕಾರಣ ಮುಂಬೈ ನಗರದ ಅಂಧೇರಿಯಲ್ಲಿ ತಮ್ಮ ಇಬ್ಬರು ಮಕ್ಕಳನ್ನೇ ಮಾರಾಟ ಮಾಡಿದ್ದರು. ಈ ದಂಪತಿಯ ಕುಟುಂಬಸ್ಥರಿಗೆ ಮಕ್ಕಳ ಮಾರಾಟ ವಿಚಾರ ಗೊತ್ತಾಗಿ ಅವರು ಕೂಡಲೇ ಪೊಲೀಸರ ಗಮನಕ್ಕೆ ತಂದರು. ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು.

ಮೊದಲಿಗೆ ದಂಪತಿಯನ್ನು ಬಂಧಿಸಿದ ಪೊಲೀಸರು, ವಿಚಾರಣೆ ವೇಳೆ ದಂಪತಿ ನೀಡಿದ ಮಾಹಿತಿ ಆಧಾರದ ಮೇಲೆ ಮತ್ತೊಬ್ಬನನ್ನು ಬಂಧಿಸಿದರು. ಇದೀಗ ಮಹಿಳಾ ಏಜೆಂಟ್ ಒಬ್ಬರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ದಂಪತಿ ತಮ್ಮ ಎರಡು ವರ್ಷ ವಯಸ್ಸಿನ ಮಗನನ್ನು 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು. ಇನ್ನು 9 ತಿಂಗಳ ಹೆಣ್ಣು ಮಗುವನ್ನು 14 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು ಎಂದು ಮುಂಬೈ ಕ್ರೈಂ ಬ್ರಾಂಚ್‌ನ ಪೊಲಿಸ್ ಅಧಿಕಾರಿ ದಯಾ ನಾಯಕ್ ಅವರು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಇದೀಗ ಪೊಲೀಸರು ಶಬ್ಬೀರ್ ಖಾನ್, ಆತನ ಪತ್ನಿ ಸೈನಾ ಖಾನ್, ಉಷಾ ರಾಥೋಡ್ ಹಾಗೂ ಶಕೀಲ್ ಮಕ್ರಾನಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಶಬ್ಬೀರ್ ಹಾಗೂ ಸೈನಾ ಮಾದಕ ದ್ರವ್ಯ ವ್ಯಸನಿಗಳು ಎಂದು ಪೊಲೀಸರು ನಮೂದಿಸಿದ್ದಾರೆ.

ಡ್ರಗ್ಸ್ ಸೇವಿಸದೆ ಬದುಕಲೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಎಡಿಕ್ಟ್ ಆಗಿದ್ರು…!

ದಂಪತಿ ಮಾದಕ ವಸ್ತುಗಳನ್ನು ಸೇವಿಸದೆ ಬದುಕಲೂ ಸಾಧ್ಯವಿಲ್ಲದಂಥಾ ಸ್ಥಿತಿಯಲ್ಲಿದ್ದರು. ಅಷ್ಟರ ಮಟ್ಟಿಗೆ ಇವರು ವ್ಯಸನಿಗಳಾಗಿದ್ದರು. ಈ ವೇಳೆ ಏಜೆಂಟ್ ಉಷಾ ರಾಥೋಡ್ ಈ ದಂಪತಿಯ ಸಂಪರ್ಕಕ್ಕೆ ಬಂದಳು. ಆಕೆ ಈ ದಂಪತಿಯ ಗಂಡು ಮಗುವನ್ನು 60 ಸಾವಿರ ರೂಪಾಯಿಗೆ ಮಾರಾಟ ಮಾಡಿಸಿದಳು. ಬಳಿಕ 9 ತಿಂಗಳ ಹೆಣ್ಣು ಮಗುವನ್ನು 14 ಸಾವಿರ ರೂಪಾಯಿಗೆ ಮಾರಾಟ ಮಾಡಿಸಿದಳು.

ಈ ಪೈಕಿ ಹೆಣ್ಣು ಮಗುವನ್ನು ಖರೀದಿಸಿದ್ದ ಶಕೀಲ್ ಮಕ್ರಾನಿ ಎಂಬಾತನನ್ನು ಗುರ್ತಿಸಿ ಬಂಧಿಸಲಾಗಿದೆ. ಮಗುವನ್ನು ರಕ್ಷಿಸಲಾಗಿದೆ. ಆದರೆ, ಗಂಡು ಮಗುವನ್ನು ಖರೀದಿಸಿದ್ದು ಯಾರು ಅನ್ನೋದು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ, ಗಂಡು ಮಗುವನ್ನು ಖರೀದಿಸಿದವರನ್ನು ಬಂಧಿಸಲು ಹಾಗೂ ಮಗುವನ್ನು ರಕ್ಷಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತನ್ನ ಮಗುವನ್ನು ಮಾರಿದ ಆರೋಪಿ ಶಬ್ಬೀರ್‌ನ ಅಕ್ಕ ರುಬೀನಾ ಖಾನ್‌ ಅವರಿಗೆ ಮೊದಲಿಗೆ ಈ ಆಘಾತಕಾರಿ ಸಂಗತಿಯ ಮಾಹಿತಿ ಸಿಕ್ಕಿತ್ತು. ತಮ್ಮನ ವಿರುದ್ದ ಸಿಟ್ಟಿಗೆದ್ದ ರುಬೀನಾ, ಕೂಡಲೇ ಪೊಲೀಸರನ್ನು ಸಂಪರ್ಕಿಸಿ ಘಟನೆ ಕುರಿತು ಮಾಹಿತಿ ನೀಡಿ ದೂರು ದಾಖಲಿಸಿದರು. ರುಬೀನಾ ಅವರ ದೂರನ್ನು ಮುಂಬೈನ ಡಿ. ಎನ್. ನಗರ ಪೊಲೀಸರು ಕ್ರೈಂ ಬ್ರಾಂಚ್‌ಗೆ ಹಸ್ತಾಂತರ ಮಾಡಿದ್ದರು.

ಈ ಕಾಲದಲ್ಲಿ ಇನ್ನೇನೆಲ್ಲಾ ನೋಡ್ಬೇಕೋ…ತಿಳಿಯದು. ಆದರೆ ಪ್ರಪಂಚದಲ್ಲಿ ತಮ್ಮ ಕ್ಷುಲ್ಲಕ ಆಸೆಗಳನ್ನು ಈಡೇರಿಸಿಕೊಳ್ಳಲು ಹೆತ್ತ ಮಕ್ಕಳನ್ನೇ ಮಾರುವ ಹೆತ್ತವರಿದ್ದಾರೆ ಎಂದರೆ ಅದು ವಿಪರ್ಯಾಸ.