900 female foetuses killed in 2 years - 9 people arrested, Ayurveda day care under siege ..!

ಇವರೆಂಥಾ ನೀಚ ವೈದ್ಯರು: 2 ವರ್ಷದಲ್ಲಿ 900 ಹೆಣ್ಣು ಭ್ರೂಣ ಹತ್ಯೆ – 9 ಮಂದಿ ಅರೆಸ್ಟ್, ಆಯುರ್ವೇದ ಡೇ ಕೇರ್ ಸೀಝ್ ..!

ನ್ಯೂಸ್ ಆ್ಯರೋ : ಇವತ್ತು ಪ್ರಪಂಚ ತುಂಬಾ ಮುಂದುವರಿದಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಅನೇಕ ತಂತ್ರಜ್ಞಾನಗಳು ಆವಿಷ್ಕಾರಗೊಂಡಿವೆ. ಭ್ರೂಣ ಹತ್ಯೆ ಎನ್ನುವುದು ಕಾನೂನಿನ ವಿರುದ್ಧವಾಗಿ ನಡೆಯುವ ಅಪರಾಧವಾಗಿದೆ ಅಂತ ಎಲ್ಲರಿಗೂ ಗೊತ್ತು. ಅನೇಕ ಆಸ್ಪತ್ರೆಗಳಲ್ಲಿ ಭ್ರೂಣ ಪತ್ತೆ ಕೂಡಾ ಮಾಡಲಾಗುವುದಿಲ್ಲ. ಕಾನೂನಿನಲ್ಲಿ ಅದಕ್ಕೂ ಕೂಡಾ ಶಿಕ್ಷೆಯಿದೆ. ಆದರೆ ಇಲ್ಲಿ ಈ ಪ್ರಕರಣ ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತದೆ. ಇಲ್ಲಿ ಭ್ರೂಣ ಹತ್ಯೆಯಲ್ಲಿ ವೈದ್ಯರೇ ಖಳನಾಯಕರು.

ಹೆಣ್ಣು ಭ್ರೂಣಗಳನ್ನು ಪತ್ತೆ ಮಾಡಿ ಅಬಾರ್ಶನ್ ಮಾಡಿಸುತ್ತಿದ್ದ ನಾಲ್ಕು ಮಂದಿಯ ಗ್ಯಾಂಗ್‌ ಅನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಹೆಣ್ಣು ಭ್ರೂಣಗಳನ್ನು ಪತ್ತೆ ಮಾಡಿ ಹತ್ಯೆ (ಅಬಾರ್ಶನ್) ಮಾಡಿಸುತ್ತಿದ್ದರು ಎಂಬ ವಿಚಾರ ಬಯಲಿಗೆ ಬಂದಿದ್ದು, ಈ ನಾಲ್ವರು ಖದೀಮರು ಗರ್ಭಿಣಿಯರನ್ನು ಗುರುತು ಮಾಡಿ ಸ್ಕ್ಯಾನ್ ಮಾಡಿಸುತ್ತಿದ್ದರು. ಹೆಣ್ಣು ಭ್ರೂಣವಾದರೆ ಅಬಾರ್ಶನ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?

ಮಾಹಿತಿ ಪ್ರಕಾರ ಕಳೆದ ಅಕ್ಟೋಬರ್ ತಿಂಗಳಲ್ಲಿ ನಾಲ್ವರನ್ನು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಈ ನಾಲ್ವರು ಆರೋಪಿಗಳು ಗರ್ಭಿಣಿಯರನ್ನು ಗುರುತು ಮಾಡಿ ಮಂಡ್ಯದ ಆಲೆಮನೆಯೊಂದರಲ್ಲಿ ಸ್ಕ್ಯಾನ್ ಮಾಡಿಸುತಿದ್ದರು.

ಒಟ್ಟು ಒಂಬತ್ತು ಮಂದಿ ಸೇರಿ ಸಿಂಡಿಕೇಟ್ ಮಾಡಿಕೊಂಡು ವ್ಯವಸ್ಥಿತವಾಗಿ ಕೃತ್ಯ ಎಸಗುತಿದ್ದರು ಎಂದು ತಿಳಿದು ಬಂದಿದ್ದು, ಅರೋಪಿಗಳು ತಿಂಗಳಲ್ಲಿ 20-25 ಭ್ರೂಣ ಹತ್ಯೆ ಮಾಡ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಈ ಕೃತ್ಯ ಎಸಗುತ್ತಿದ್ದು ಒಟ್ಟು 900 ಭ್ರೂಣಹತ್ಯೆ ಮಾಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಆರೋಪಿಗಳು ಯಾರು..?

ಈ ಹಿಂದೆ ಶಿವನಂಜೇ ಗೌಡ, ವೀರೇಶ್, ನವೀನ್ ಮತ್ತು ನಯನ್ ಎಂಬುವವರನ್ನು ಈ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿತ್ತು. ಪೊಲೀಸರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರೆಸಿದಾಗ ವೈದ್ಯರ ಕೈವಾಡವೂ ಪತ್ತೆಯಾಗಿದ್ದು, ಸದ್ಯ ಭ್ರೂಣ ಹತ್ಯೆ ಮಾಡುತಿದ್ದ ವೈದ್ಯರನ್ನೂ ಸಹ ಅರೆಸ್ಟ್ ಮಾಡಲಾಗಿದೆ.

ಜೊತೆಗೆ ಚೆನ್ನೈ ಮೂಲದ ಡಾ.ತುಳಸಿರಾಮ್, ಮೈಸೂರಿನ ಮಾತ ಆಸ್ಪತ್ರೆಯ ವೈದ್ಯ ಡಾ.ಚಂದನ್ ಬಲ್ಲಾಳ್ ಹಾಗೂ ಪತ್ನಿ ಮೀನಾ, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸೆಪ್ಶನಿಸ್ಟ್ ರೀಜ್ಮಾ, ಲ್ಯಾಬ್ ಟೆಕ್ನೀ಼ಶಿಯನ್ ನಿಸ್ಸಾರ್ ಅರೆಸ್ಟ್ ಮಾಡಲಾಗಿದೆ. ಇನ್ನು ಮೈಸೂರಿನ ಉದಯಗಿರಿಯಲ್ಲಿನ ಮಾತಾ ಆಸ್ಪತ್ರೆ ಮತ್ತು ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಫೈಲ್ಸ್ ಡೇ ಕೇರ್ ಸೆಂಟರ್ ಅನ್ನು ಸಹ ಪೊಲೀಸರು ಸೀಜ್ ಮಾಡಿದ್ದು, ಆಯುರ್ವೇದ ಡೇ ಕೇರ್ ಸೆಂಟರ್‌ನಲ್ಲಿಯೇ ಭ್ರೂಣ ಹತ್ಯೆ ನಡೆಯುತಿತ್ತು ಎಂಬುದು ಬಯಲಿಗೆ ಬಂದ ಹಿನ್ನೆಲೆಯಲ್ಲಿ ಸೀಜ್ ಮಾಡಲಾಗಿದೆ.

ಹೆಚ್ಚಿನ ತನಿಖೆ ಮುಂದುವರೆಸಿದ ಪೊಲೀಸರು:

ಕಳೆದ ಎರಡು ವರ್ಷಗಳಲ್ಲಿ ಸುಮಾರು 900ಕ್ಕೂ ಹೆಚ್ಚು ಭ್ರೂಣ ಹತ್ಯೆ ಮಾಡಿರುವ ಬಗ್ಗೆ ತನಿಖೆ ವೇಳೆ ಮಾಹಿತಿ ಬಯಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆಸಿರುವ ಬೈಯಪ್ಪನಹಳ್ಳಿ ಪೊಲೀಸರು, ಕಳೆದ ಅಕ್ಟೋಬರ್‌ನಲ್ಲಿ ಮೊದಲಿಗೆ ಕೇಸ್ ದಾಖಲು ಮಾಡಿದ್ದರು. ಸಿಕ್ಕ ಒಂದು ಮಾಹಿತಿ ಆಧರಿಸಿ ಕಾರ್ಯಚರಣೆ ನಡೆಸಿದಾಗ ಮೊದಲಿಗೆ ನಾಲ್ವರು ಆರೋಪಿಗಳ ಸಹಿತ ಸ್ಕ್ಯಾನಿಂಗ್ ಮೆಷಿನ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಮುಂದಿನ ತನಿಖೆ ವೇಳೆ ಉಳಿದ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ಇಬ್ಬರು ವೈದ್ಯರೂ ಸೇರಿ ಒಂಬತ್ತು ಜನರನ್ನು ಅರೆಸ್ಟ್ ಮಾಡಿದ್ದು, ತನಿಖೆ ಮುಂದುವರಿದಿದೆ.