
ಮನುಷ್ಯನನ್ನೇ ಕೊಂದ ಮಾನವನಿರ್ಮಿತ ರೋಬೋಟ್ – ಭಯಾನಕ ಘಟನೆಗೆ ಬೆಚ್ಚಿಬಿದ್ದ ಜನತೆ, ಘಟನೆಗೆ ಕಾರಣವೇನು?
- ಟೆಕ್ ನ್ಯೂಸ್
- November 10, 2023
- No Comment
- 92
ನ್ಯೂಸ್ ಆ್ಯರೋ : ತಂತ್ರಜ್ಞಾನ ಮುಂದುವರೆದಂತೆ ಮನುಷ್ಯನ ಎಲ್ಲ ಕೆಲಸಗಳು ಸುಲಭವಾಗಿ ಬಿಟ್ಟಿದೆ. ಇನ್ನೂ ರೋಬೋಟ್‌ಗಳು ನಿರ್ಜೀವ ವಸ್ತುಗಳಾದರೂ ಮನುಷ್ಯನ ಹಾಗೆಯೇ ಕೆಲಸವನ್ನು ಮಾಡುತ್ತದೆ. ರೋಬೋಟ್‌ಗಳನ್ನು ಹೊಸ ಅನ್ವೇಷಣೆಗೆ ಹಿಡಿದ ಕನ್ನಡಿಯಂತೆ ಎಂದು ಬಣ್ಣಿಸಲಾಗುತ್ತಿತ್ತು. ಆದರೆ ಇದೇ ರೋಬೋಟ್ ಮನುಷ್ಯನನ್ನು ಕೊಂದಿರುವ ಘಟನೆಯೊಂದು ನಡೆದಿದೆ.
ವ್ಯಕ್ತಿಯನ್ನು ಕೊಂದ ರೋಬೋಟ್
ಈಚೆಗೆ ಸುಲಭವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಕೆಲಸ ಆಗಬೇಕೆಂಬ ದೃಷ್ಟಿಯಿಂದ ಹಲವಾರು ಕಂಪೆನಿಗಳಲ್ಲಿ ಕೆಲಸಕ್ಕೆ ರೋಬೋಟ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವು ಮಾನವ ನಿರ್ಮಿತ ಡಿವೈಸ್‌ಗಳಾದರೂ ಮಾನವನನ್ನೇ ಕೊಲ್ಲುವ ಮಟ್ಟಕ್ಕೆ ತಲುಪುತ್ತವೆ ಎಂದರೆ ಮುಂದಿನ ದಿನಗಳಲ್ಲಿ ಇವುಗಳ ಬಳಕೆ ಬಗ್ಗೆ ಯೋಚನೆ ಮಾಡುವಂತ ಪರಿಸ್ಥಿತಿ ಬಂದಿದೆ. ಯಾಕೆಂದರೆ ಈ ರೋಬೋಟ್ ತರಕಾರಿ ಪೆಟ್ಟಿ ಎಂದು ತಪ್ಪಾಗಿ ಭಾವಿಸಿ ಕೆಲಸಗಾರನನ್ನು ಕ್ರೂರವಾಗಿ ಕೊಂದುಹಾಕಿರುವ ಘಟನೆ ನಡೆದಿದೆ.
ದಕ್ಷಿಣ ಕೊರಿಯಾದಲ್ಲಿ ಈ ಘಟನೆ ನಡೆದಿದ್ದು, ಈ ಘಟನೆ ನಂತರ ಎಲ್ಲಾ ಕಡೆ ದೊಡ್ಡ ಸಂಚಲನವೇ ಉಂಟಾಗಿದೆ. ರೊಬೊಟಿಕ್ಸ್ ಕಂಪನಿಯ ಉದ್ಯೋಗಿಗಳು ದಕ್ಷಿಣ ಜಿಯೊಂಗ್‌ಸಾಂಗ್ ಪ್ರಾಂತ್ಯದ ಕೃಷಿ ಉತ್ಪನ್ನ ವಿತರಣಾ ಕೇಂದ್ರದಲ್ಲಿ ರೋಬೋಟ್‌ನ ಸೆನ್ಸರ್ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅಲ್ಲಿನ ಸುದ್ದಿ ಸಂಸ್ಥೆಗಳ ಪ್ರಕಾರ ಮೆಣಸಿನಕಾಯಿಯ ಪೆಟ್ಟಿಗೆಗಳನ್ನು ರೋಬೋಟ್ ತನ್ನ ತೋಳುಗಳಿಂದ ಎತ್ತಿಕೊಂಡು ಪ್ಯಾಲೆಟ್‌ಗಳ ಮೇಲೆ ಇರಿಸುವ ಕೆಲಸ ಮಾಡುತ್ತಿತ್ತು. ಆದರೆ, ಈ ಬಾರಿ ಅದು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದೆಯಂತೆ.
ಅಂದರೆ ಪೆಟ್ಟಿಗೆಯ ಬದಲಿಗೆ ವ್ಯಕ್ತಿಯನ್ನು ಎತ್ತಿಕೊಂಡು ಕನ್ವೇಯರ್ ಬೆಲ್ಟ್‌ನಲ್ಲಿ ಇರಿಸಿದೆ. ಇದರಿಂದ ಆತನ ಮುಖ ಮತ್ತು ಎದೆ ಭಾಗ ಸೀಳಿಹೋಗಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾನೆ. ಸಾವಿಗೀಡಾದ ವ್ಯಕ್ತಿಗೆ 40 ವರ್ಷವಾಗಿದೆ.
ಈ ಘಟನೆಯ ನಂತರ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಈ ಘಟಕದ ಮಾಲೀಕತ್ವದ ರಫ್ತು ಕೃಷಿ ಸಂಕೀರ್ಣದ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದ ರೊಬೊಟಿಕ್ಸ್ ತಜ್ಞ ಕ್ರಿಸ್ಟೋಫರ್ ಅಟ್ಕೆಸನ್, ರೋಬೋಟ್‌ಗಳು ಸೀಮಿತ ಇಂದ್ರಿಯಗಳನ್ನು ಹೊಂದಿರಲಿವೆ. ಆದ್ದರಿಂದ ಅವುಗಳ ಸುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅವುಗಳಿಗೆ ಸೀಮಿತ ಅರಿವು ಮಾತ್ರ ಇರಲಿದೆ ಎಂದು ಹೇಳಿದ್ದಾರೆ. ಅಂದರೆ, ಅದಕ್ಕೆ ಜೀವ ಇರುವ ವಸ್ತುಗಳು ಯಾವುವು?, ಜೀವ ಇಲ್ಲದಿರುವ ವಸ್ತುಗಳು ಯಾವುದು ಎಂಬುದನ್ನು ಕಂಡುಕೊಳ್ಳಲು ಕಷ್ಟವಾಗಿದೆ.
ಇನ್ನು ಈ ವರ್ಷದ ಮೇ ಆರಂಭದಲ್ಲಿ ದಕ್ಷಿಣ ಕೊರಿಯಾದಲ್ಲಿ ರೋಬೋಟ್ ಆಟೋಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕದಲ್ಲೂ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಅಮೆರಿಕನ್ ಜರ್ನಲ್ ಆಫ್ ಇಂಡಸ್ಟ್ರಿಯಲ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ 1992 ಮತ್ತು 2017 ರ ನಡುವೆ ಯುಎಸ್‌ನಲ್ಲಿ ಕೈಗಾರಿಕಾ ರೋಬೋಟ್‌ಗಳಿಂದ ಕನಿಷ್ಠ 41 ಜನರು ಸಾವಿಗೀಡಾಗಿದ್ದಾರಂತೆ..!