
ಭೂವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆಗೆ ಬಿಗ್ ಟ್ವಿಸ್ಟ್ – ಕಾರು ಚಾಲಕ ಬರ್ಬರವಾಗಿ ಪ್ರತಿಮಾರನ್ನು ಕೊಲೆ ಮಾಡಿದ್ದು ಯಾಕೆ ಗೊತ್ತಾ?
- ಕರ್ನಾಟಕ
- November 6, 2023
- No Comment
- 1221
ನ್ಯೂಸ್ ಆ್ಯರೋ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪ್ರತಿಮಾ ಕೊಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಧಿಕಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಮಾಜಿ ಕಾರು ಚಾಲಕ ಕಿರಣ್ ನನ್ನು ಕಂಬಿ ಹಿಂದೆ ಕಳಿಸಲಾಗಿದೆ.ಆರೋಪಿಯ ವಿಚಾರಣೆ ವೇಳೆ ಕೆಲವು ಸ್ಪೋಟಕ ಸಂಗತಿಗಳು ಬೆಳಕಿಗೆ ಬಂದಿದ್ದು, ವಿಚಾರಣಾಧಿಕಾರಿಗಳು ಕೊಲೆಯ ಭೀಕರತೆಯನ್ನು ಕಂಡು ದಂಗಾಗಿದ್ದಾರೆ. ಈ ಬಗೆಗಿನ ಮಾಹಿತಿ ಇಲ್ಲಿದೆ.
ಕೆಲಸಕ್ಕಾಗಿ ಬೇಡಿಕೆ, ಬರ್ಬರ ಹತ್ಯೆ!
ಆರೋಪಿಯ ವಿಚಾರಣೆ ನಡೆಸಿರುವ ಪೊಲೀಸರು ಕೊಲೆಯ ಇಂಚಿಂಚು ಮಾಹಿತಿಯನ್ನು ತೆರೆದಿಟ್ಟಿದ್ದಾರೆ. ಮಹಿಳಾ ಅಧಿಕಾರಿ ಪ್ರತಿಮಾ ಅವರ ಮಾಜಿ ಕಾರು ಚಾಲಕ ಕಿರಣ್ ಕೆಲಸದಿಂದ ತೆಗೆದಿದ್ದಕ್ಕಾಗಿ ಕೋಪ ಹಾಗೂ ಹತಾಶೆಗೊಂಡಿದ್ದ. ಆರೋಪಿ ಕಿರಣ್, ಪ್ರತಿಮಾ ಮನೆಗೆ ತೆರಳಿ ನನ್ನಿಂದ ತಪ್ಪಾಗಿದೆ ಕೆಲಸದಿಂದ ತೆಗೆಯಬೇಡಿ ಎಂದು ಕಾಲು ಹಿಡಿದು ಪರಿ ಪರಿಯಾಗಿ ಬೇಡಿಕೊಂಡಿದ್ದ. ಆದರೆ ಪ್ರತಿಮಾ ಇದನ್ನು ಒಪ್ಪಿರಲಿಲ್ಲ. ಇದರಿಂದ ಕುಪಿತಗೊಂಡ ಕಿರಣ್ ವೈರ್ ಮಾದರಿಯ ವಸ್ತುವಿನಿಂದ ಕುತ್ತಿಗೆ ಬಿಗಿದು, ಬಳಿಕ ಪ್ರತಿಮಾರ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕೃತ್ಯ ನಡೆಸಿದ ಬಳಿಕ ಕಿರಣ್ ಚಾಮರಾಜನಗರದತ್ತ ಪರಾರಿಯಾಗಿದ್ದ, ಆದರೆ ಕ್ಷಿಪ್ರ ಕಾರ್ಯಾಚರಣೆಗಿಳಿ ಪೊಲೀಸರು ಮಹದೇಶ್ವರ ಬೆಟ್ಟದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಕಿರಣ್ ಕೆಲಸ ಕಳೆದುಕೊಂಡಿದ್ದು ಯಾಕೆ?
ಭೂವಿಜ್ಞಾನ ಇಲಾಖೆಯ ಮಾಜಿ ಚಾಲಕ ಕಿರಣ್ ಕೆಲಸ ಕಳೆದುಕೊಂಡಿದ್ದಕ್ಕಾಗಿ ಪ್ರತಿಮಾ ಅವರನ್ನು ಕೊಲೆ ಮಾಡಿದ್ದಾನೆ ಎಂಬುದು ವಿಚಾರಣೆಯ ಬಳಿಕ ತಿಳಿದು ಬಂದಿದೆ. ಕಳೆದ ಐದು ವರ್ಷಗಳಿಂದ ಭೂವಿಜ್ಞಾನ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಇಲಾಖೆ ರೈಡ್ ಮಾಡುವ ವಿಚಾರವನ್ನು ಕಿರಣ್ ಲೀಕ್ ಮಾಡುತ್ತಿದ್ದ, ಜೊತೆಗೆ ಇತ್ತೀಚೆಗೆ ಒಂದು ಆ್ಯಕ್ಸಿಡೆಂಟ್ ಮಾಡಿದ್ದ. ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಕಿರಣ್ ನಿರ್ಲಕ್ಷ್ಯ ಮಾಡಿದ್ದ. ಇದೇ ಕಾರಣದಿಂದ 10ದಿನಗಳ ಪ್ರತಿಮಾ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದರು ಎನ್ನಲಾಗಿದೆ.
ಪೊಲೀಸ್ ಆಯುಕ್ತರು ಹೇಳಿದ್ದೇನು?
ಈ ಕೊಲೆ ಪ್ರಕರಣದ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ಮಾತನಾಡಿದ್ದು, ಕೊಲೆ ಪ್ರಕರಣದ ಬಗ್ಗೆ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಈಗಾಗಲೇ ಪ್ರಮುಖ ಆರೋಪಿ ಕಿರಣ್ ಬಂಧನವಾಗಿದೆ. ಕಿರಣ್ ಕಳೆದ ಐದು ವರ್ಷದಿಂದ ಪ್ರತಿಮಾ ಅವರ ಕಾರು ಚಾಲಕನಾಗಿದ್ದ, ಆದರೆ ಕಳೆದ 10 ದಿನಗಳ ಹಿಂದೆ ಈತನನ್ನು ಕೆಲಸದಿಂದ ತೆಗೆದಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಸಂಕ್ಷಿಪ್ತ ಕಾರ್ಯಾಚರಣೆ ನಡೆಸಿ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.