
ವಿರಾಟ್ ಕೊಹ್ಲಿ ಬ್ಯಾಟ್ ನಿಂದ ಸಿಡಿಯಿತು ಶತಕಗಳ ಅರ್ಧ ಶತಕ – ಮುರಿಯಿತು ಕ್ರಿಕೆಟ್ ದೇವರ ರೆಕಾರ್ಡ್…!!
- ಕ್ರೀಡಾ ಸುದ್ದಿ
- November 16, 2023
- No Comment
- 39
ನ್ಯೂಸ್ ಆ್ಯರೋ : ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ 50ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಬ್ರೇಕ್ ಮಾಡಿದ್ದಾರೆ. ಆ ಮೂಲಕ ಅಭಿಮಾನಿಗಳ ಮನಸ್ಸನ್ನು ಮತ್ತೆ ಗೆದ್ದಿದ್ದಾರೆ.
ಮುಂಬೈಯ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ತಮ್ಮ ವೃತ್ತಿ ಬದುಕಿನ 80ನೇ ಶತಕವನ್ನು ದಾಖಲಿಸಿದ್ದಾರೆ. ಕೊಹ್ಲಿ ಅವರು ಶತಕ ಸಿಡಿಸಿ ಸಂಭ್ರಮಿಸುತ್ತಿದ್ದಂತೆ ಅಭಿಮಾನಿಗಳು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ತಮಗೊಲಿದ ಯಶಸ್ಸಿನಂತೆ ಸಂಭ್ರಮಿಸಿದ್ದಾರೆ.
ವಿರಾಟ್ ಕೊಹ್ಲಿ ವೃತ್ತಿ ಜೀವನ:
2008ರ ಅಗಸ್ಟ್ 18 ರಂದು ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ಕೊಹ್ಲಿ ಇದೀಗ ಕ್ರಿಕೆಟ್ ಲೋಕದಲ್ಲಿ ಇತಿಹಾಸದ ಪುಟ ಸೇರಿದ್ದಾರೆ. ಇತ್ತೀಚೆಗೆ ದ.ಆಫ್ರಿಕಾ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ 49ಶತಕಗಳ ದಾಖಲೆಯನ್ನು ಸರಿಗಟ್ಟಿದ್ದರು. ಸಚಿನ್ ತೆಂಡುಲ್ಕರ್ 452 ಇನ್ನಿಂಗ್ಸ್ ಗಳಲ್ಲಿ 49ಶತಕಗಳನ್ನು ಸಿಡಿಸಿದ್ದರೆ ವಿರಾಟ್ ಕೊಹ್ಲಿ ಕೇವಲ 277 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕೊಹ್ಲಿಗೆ ಅಭಿನಂದನೆ ತಿಳಿಸಿದ ಸಚಿನ್ ತೆಂಡೂಲ್ಕರ್:
ಕೊಹ್ಲಿಗೆ ಭಾವುಕ ನುಡಿಗಳ ಮೂಲಕ ಧನ್ಯವಾದ ಅರ್ಪಿಸಿ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ ಕ್ರಿಕೆಟ್ ಕಿಂಗ್ ಸಚಿನ್ ತೆಂಡೂಲ್ಕರ್ ‘ ಅಂದು ನಾನು ನಿಮ್ಮನ್ನು ಮೊದಲ ಬಾರಿಗೆ ಡ್ರೆಸ್ಸಿಂಗ್ ರೂಂನಲ್ಲಿ ಭೇಟಿಯಾದಾಗ ನನ್ನ ಪಾದಗಳನ್ನು ಮುಟ್ಟುವಂತೆ ನಿಮ್ಮ ತಂಡದ ಇತರ ಸದಸ್ಯರು ನಿಮ್ಮನ್ನು ತಮಾಷೆ ಮಾಡಿದ್ದರು. ಆ ದಿನ ನನಗೆ ನಗು ತಡೆಯಲಾಗಲಿಲ್ಲ. ಆದ್ರೆ ಅತೀ ಶೀಘ್ರದಲ್ಲಿ ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ನೀವು ನನ್ನ ಹೃದಯ ಮುಟ್ಟಿದ್ದೀರಿ. ಆ ಚಿಕ್ಕ ಹುಡುಗ ವಿರಾಟ್ ಆಟಗಾರನಾಗಿ ಬೆಳೆದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ’ ಎಂದು ಭಾವುಕವಾಗಿ ನುಡಿದಿದ್ದಾರೆ.
ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 29, ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 1 ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಒಟ್ಟು 50 ಶತಕ ಸಿಡಿಸಿದ್ದಾರೆ. ಇನ್ನೂ 49 ಶತಕಗಳನ್ನು ಸಿಡಿಸಿರುವ ಸಚಿನ್ ತೆಂಡೂಲ್ಕರ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.