
ಸೆಮೀಸ್ ನಲ್ಲಿ ಶಮಿ ಮಿಂಚಿಗೆ ಭಸ್ಮವಾದ ನ್ಯೂಜಿಲೆಂಡ್, ಕಿವೀಸ್ ವಿರುದ್ಧ ರೋಹಿತ್ ಪಡೆಗೆ ಭರ್ಜರಿ ಜಯ – ನಾಲ್ಕನೇ ಬಾರಿಗೆ ವಿಶ್ವಕಪ್ ಫೈನಲ್ ಅಂಗಳಕ್ಕೆ ಟೀಂ ಇಂಡಿಯಾ..!
- ಕ್ರೀಡಾ ಸುದ್ದಿ
- November 16, 2023
- No Comment
- 54
ನ್ಯೂಸ್ ಆ್ಯರೋ : ನಿನ್ನೆಯ ದಿನವಂತೂ ಕ್ರಿಕೆಟ್ ಅಭಿಮಾನಿಗಳಿಗೆ ಅಕ್ಷರಶಃ ಹಬ್ಬ. ಒಂದೆಡೆ ಕಿಂಗ್ ಕೊಹ್ಲಿಯ ಬಿರುಸಿನ ಬ್ಯಾಟಿಂಗ್ ವೈಭವಕ್ಕೆ ದಾಖಲೆಗಳು ಧೂಳಿಪಟವಾದರೆ, ಮತ್ತೊಂದೆಡೆ ಮೊಹಮ್ಮದ್ ಶಮಿ ಮಿಂಚಿನ ದಾಳಿಗೆ ನ್ಯೂಜಿಲೆಂಡ್ ಭಸ್ಮವಾಗಿ ಹೋಯಿತು. ಇದರೊಂದಿಗೆ ಟೀಂ ಇಂಡಿಯಾ 70 ರನ್ ಗಳ ಭರ್ಜರಿ ಜಯ ದಾಖಲಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕನೇ ಬಾರಿ ಫೈನಲ್ ಅಂಗಳಕ್ಕೆ ಕಾಲಿಟ್ಟಿತು.
ಈ ಮೂಲಕ 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 50 ಓವರ್‌ಗಳಲ್ಲಿ 397 ರನ್ ಕಲೆಹಾಕಿತ್ತು. 398 ರನ್‌ಗಳ ಗುರಿ ಬೆನ್ನತ್ತಿದ್ದ ಕಿವೀಸ್ 48.5 ಓವರ್‌ಗಳಲ್ಲೇ 327 ರನ್ ಗಳಿಗೆ ಸರ್ವಪತನ ಕಂಡಿತು. ಇದರಿಂದ ಟೀಂ ಇಂಡಿಯಾ ಸತತ 10ನೇ ಜಯದೊಂದಿಗೆ ಫೈನಲ್ ಪ್ರವೇಶಿಸಿ ಐತಿಹಾಸಿಕ ಜಯ ದಾಖಲಿಸಿತು.
ಈ ಹೈ ವೋಲ್ಟೇಜ್ ಪಂದ್ಯದ ಇಂಚಿಂಚೂ ಮಾಹಿತಿ ಇಲ್ಲಿದೆ.
ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್!
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. 50 ಓವರ್ ಗಳಲ್ಲಿ4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿ ಬೃಹತ್ ಗುರಿಯನ್ನು ಕೇನ್ ವಿಲಿಯಮ್ಸನ್ ಪಡೆಯ ಮುಂದಿಟ್ಟಿತು. ಆರಂಭದಲ್ಲಿ ಅಬ್ಬರಿಸಿದ ನಾಯಕ ರೋಹಿತ್ ಶರ್ಮ29 ಎಸೆತಗಳಲ್ಲಿ 4 ಭರ್ಜರಿ ಬೌಂಡರಿ, ಸಿಕ್ಸರ್ ನೆರವಿನಿಂದ 47 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಅತ್ಯಮೋಘ ಇನ್ನಿಂಗ್ಸ್ ಆಡಿ ಗಾಯಗೊಂಡು ನಿವೃತ್ತಿಯಾಗಿ ಬಳಿಕವೂ ಆಡಿ ಒಂದು ರನ್ ಸೇರಿ ಶುಭ್ ಮನ್ ಗಿಲ್ 80 ರನ್ ಸಿಡಿಸಿದರು. ಶ್ರೇಯಸ್ ಅಯ್ಯರ್ ಸ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದರು. 70 ಎಸೆತಗಳಲ್ಲಿ 105 ರನ್ ಗಳಿಸಿ ಔಟಾದರು. 4 ಬೌಂಡರಿ ಮತ್ತು 8 ಅಮೋಘ ಸಿಕ್ಸರ್ ಸಿಡಿಸಿದರು. ಇದು ಶ್ರೇಯಸ್ ಅಯ್ಯರ್ ಅವರ ಬ್ಯಾಕ್ ಟು ಬ್ಯಾಕ್ ಶತಕವಾಗಿದೆ.
ಕ್ರಿಕೆಟ್ ದೇವರೆದುರು ಕೊಹ್ಲಿ ಆರ್ಭಟ!

ಟೀಂ ಇಂಡಿಯಾದ ಚೇಸ್ ಮಾಸ್ಟರ್, ಕಿಂಗ್ ಕೊಹ್ಲಿ ಇದೀಗ ಕ್ರಿಕೆಟ್ ಲೋಕದಲ್ಲಿ ಇತಿಹಾಸ ಪುಟ ಸೇರಿದ್ದಾರೆ. ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿ ಮೆರೆದಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನ ಸರಿಗಟ್ಟಿದ್ದರು. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 49 ಶತಕಗಳನ್ನು ಸಿಡಿಸಿದ್ದರೆ, ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದರು.
ಬುಧವಾರ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 106 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್‌ನೊಂದಿಗೆ ಶತಕ ಸಿಡಿಸಿ ವಿಶ್ವದಾಖಲೆ ಬರೆಯುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರೆದುರು ಕೊಹ್ಲಿ ಆರ್ಭಟಿಸಿದ್ದಾರೆ.
ಕಿವೀಸ್ ಬ್ಯಾಟಿಂಗ್ ವಿಶ್ವರೂಪ!

ಟೀಂ ಇಂಡಿಯಾದ ಬೃಹತ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಅತ್ಯಮೋಘ ಇನ್ನಿಂಗ್ಸ್ ಕಟ್ಟಲು ಮುಂದಾಯಿತು. ಆದ್ರೆ 30 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಕಿವೀಸ್, ಮುಂದಿನ 9 ರನ್‌ಗಳ ಅಂತರದಲ್ಲೇ ಮತ್ತೊಂದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಜೋಡಿ ಭರ್ಜರಿ ಜೊತೆಯಾಟ ನೀಡಿತ್ತು. 3ನೇ ವಿಕೆಟ್‌ಗೆ ಈ ಜೋಡಿ 149 ಎಸೆತಗಳಲ್ಲಿ 181 ರನ್‌ಗಳ ಜೊತೆಯಾಟ ನೀಡಿತ್ತು. ಇದರಿಂದ ಕೊನೆಯ 18.2 ಓವರ್‌ಗಳಲ್ಲಿ 184 ರನ್‌ಗಳ ಅಗತ್ಯವಿತ್ತು. ಅಷ್ಟರಲ್ಲಿ ತಮ್ಮ ಮಾರಕ ದಾಳಿ ಪ್ರದರ್ಶಿಸಿದ ಮೊಹಮ್ಮದ್ ಶಮಿ ವಿಲಿಯಮ್ಸನ್ ಆಟಕ್ಕೆ ಬ್ರೇಕ್ ಹಾಕಿದರು. ವಿಲಿಯಮ್ಸನ್ ಔಟಾದ ಬೆನ್ನಲ್ಲೇ ಟಾಮ್ ಲಾಥಮ್ 2 ಎಸೆತಗಳಲ್ಲೇ ಡಕೌಟ್ ಆದರು.
ಶಮಿ ಮಿಂಚಿಗೆ ಕಿವೀಸ್ ಭಸ್ಮ!

ಟೀಂ ಇಂಡಿಯಾ ಪರ ಸಾಮರ್ಥ್ಯ ಪ್ರದರ್ಶಿಸಿದ ಮೊಹಮ್ಮದ್ ಶಮಿ 9.5 ಓವರ್‌ಗಳಲ್ಲಿ 57 ರನ್ ಬಿಟ್ಟು ಕೊಟ್ಟು 7 ವಿಕೆಟ್ ಪಡೆದರು. ಈ ಮೂಲಕ 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲೇ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಖ್ಯಾತಿಗೂ ಪಾತ್ರರಾದರು. ಶಮಿ ಮಿಂಚಿನ ದಾಳಿಗೆ ಕವೀಸ್ ಭಸ್ಮವಾಯಿತು. ಇನ್ನುಳಿದಂತೆ ಬುಮ್ರಾ, ಸಿರಾಜ್, ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದು ನಿರ್ಣಾಯಕ ಪಂದ್ಯದ ಗೆಲುವಿಗೆ ಕೊಡುಗೆ ನೀಡಿದರು.