
ಸರಕಾರದ ಮುಂದೆ ಗ್ಯಾರಂಟಿ ಈಡೇರಿಕೆಯ ಸವಾಲು – ಯಾವ ಯೋಜನೆಗೆ ಎಷ್ಟು ಕೋಟಿ ಬೇಕು ಗೊತ್ತಾ? ಪಕ್ಕಾ ಲೆಕ್ಕ ಇಲ್ಲಿದೆ…
- ರಾಜಕೀಯ
- May 31, 2023
- No Comment
- 97
ನ್ಯೂಸ್ ಆ್ಯರೋ : ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಇದೀಗ ಈ ಗೆಲುವಿಗೆ ಕಾರಣವಾದ ಗ್ಯಾರಂಟಿಗಳ ಈಡೇರಿಕೆಯ ಬಹು ದೊಡ್ಡ ಸವಾಲು ಮುಂದೆ ನಿಂತಿದೆ. ಒಂದೆಡೆ ಈ ಗ್ಯಾರಂಟಿಗಳ ಶೀಘ್ರ ಅನುಷ್ಠಾನಕ್ಕೆ ಒತ್ತಡ ಬರುತ್ತಿದ್ದರೆ ಇವುಗಳನ್ನು ಅನುಷ್ಠಾನಕ್ಕೆ ತರಲು ವಾರ್ಷಿಕ 52,000 ಕೊಟಿ ರೂ. ಬೇಕಾಗಬಹುದು ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗೆ ವರದಿ ಒಪ್ಪಿಸಿದ್ದಾರೆ. ಅಷ್ಟೊಂದು ಬೃಹತ್ ಮೊತ್ತ ಒಟ್ಟು ಮಾಡುವುದು ಹೇಗೆ ಎಂಬ ಪ್ರಶ್ನೆ ಇನ್ನೊಂದೆಡೆ ಹೊಸ ಸರಕಾರವನ್ನು ಕಾಡುತ್ತಿದೆ.
ಯಾವ ಯೋಜನೆಗೆ ಎಷ್ಟು ಬೇಕು?
ಗೃಹಲಕ್ಷ್ಮೀಗೆ ಬೇಕು 24,000 ಕೋಟಿ ರೂ.
ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ಯೋಜನೆ ಇದಾಗಿದ್ದು, ಬಿಪಿಎಲ್ ಕುಟುಂಬಗಳಿಗೆ ಮಾತ್ರ ಜಾರಿಗೊಳಿಸುತ್ತಿದ್ದರೂ ವಾರ್ಷಿಕವಾಗಿ 24,000 ಕೋಟಿ ರೂ. ಬೇಕಾಗುತ್ತದೆ.
ಅನ್ನಭಾಗ್ಯ ಯೋಜನೆಗೆ 10,000 ಕೋಟಿ ರೂ.
ಈ ಯೋಜನೆಯ ಮೂಲಕ 4.30 ಕೋಟಿ ಜನರಿಗೆ ತಿಂಗಳಿಗೆ ತಲಾ 10 ಕೆ.ಜಿ. ಆಹಾರ ಧಾನ್ಯ ವಿತರಿಸಬೇಕಿದ್ದು, ಇದಕ್ಕೆ ವಾರ್ಷಿಕವಾಗಿ 10,000 ಕೋಟಿ ರೂ. ಖರ್ಚಾಗಲಿದೆ.
ಗೃಹಜ್ಯೋತಿಗೆ 12,038 ಕೋಟಿ ರೂ. ಅಗತ್ಯ
ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆ ಇದಾಗಿದೆ. 2.14 ಕೋಟಿಯಷ್ಟು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿದ್ದು, ಇದಕ್ಕೆ ವಾರ್ಷಿಕ 12,038 ಕೋಟಿ ರೂ. ಬೇಕಾಗಬಹುದು.
ಯುವನಿಧಿಗೆ 1,200 ಕೋಟಿ ರೂ.
ಪ್ರಸಕ್ತ ವರ್ಷದ ಪದವೀಧರರಿಗೆ ಸೀಮಿತವಾಗಿ ಈ ಯೋಜನೆ ಜಾರಿಯಾದರೂ ವಾರ್ಷಿಕವಾಗಿ 1,200 ಕೋಟಿ ರೂ. ಅಗತ್ಯ. ಜೊತೆಗೆ ಎಂಜಿನಿಯರಿಂಗ್ ಪದವೀಧರರು, ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವೀಧರರನ್ನು ಸೇರಿಸಿದರೆ ಖರ್ಚು ಇನ್ನೂ ಹೆಚ್ಚಾಗಬಹುದು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ
ಸರಕಾರಿ ಬಸ್ ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಯ ಅನುಷ್ಠಾನವೇ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ದೂರ ಮಿತಿ ಅಳವಡಿಸುವ ಕುರಿತು ಅಂತಿಮ ತೀರ್ಮಾನ ಇನ್ನೂ ಆಗಿಲ್ಲ. ಅಲ್ಲದೆ ಪ್ರತಿ ದಿನವೂ ಪ್ರಯಾಣಿಕರ ಸಂಖ್ಯೆ ಹೆಚ್ಚು ಕಡಿಮೆ ಆಗುವುದರಿಂದ ಅಂದಾಜು ಖರ್ಚು ಲೆಕ್ಕ ಹಾಕಲು ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.