
ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ – ಸಂಸದ ಸ್ಥಾನದ ಅಸಿಂಧು ಆದೇಶಕ್ಕೆ ತಡೆಯಾಜ್ಞೆ
- ರಾಜಕೀಯ
- September 18, 2023
- No Comment
- 56
ನ್ಯೂಸ್ ಆ್ಯರೋ : ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಹಾಸನ ಸಂಸದ ಸ್ಥಾನದಿಂದ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ಮಾಜಿ ಸಚಿವ ರೇವಣ್ಣ ಪುತ್ರನಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಏನಿದು ಪ್ರಕರಣ?
2019ರ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಪ್ರಜ್ವಲ್ ಜಯ ಗಳಿಸಿದ್ದರು. ಆದರೆ ಅವರು ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಎ.ಮಂಜು ಮತ್ತು ದೇವರಾಜೇಗೌಡ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಜ್ವಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಇದರ ವಿರುದ್ದ ಪ್ರಜ್ವಲ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ಸಂಸದ ಸ್ಥಾನಕ್ಕೆ ಇದ್ದ ದೊಡ್ಡ ತಡೆ ನಿವಾರಣೆಯಾದ ಹಿನ್ನಲೆಯಲ್ಲಿ ಪ್ರಜ್ವಲ್ ನಾಳೆ (ಸೆಪ್ಟೆಂಬರ್ 19) ದಿಲ್ಲಿಯಲ್ಲಿ ಸಂಸತ್ ನ ವಿಶೇಷ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ.
ಷರತ್ತು ಅನ್ವಯ
ಇದೇ ವೇಳೆ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳನ್ನೂ ವಿಧಿಸಿದೆ. ಪ್ರಜ್ವಲ್ ಲೋಕಸಭೆ ಅಧಿವೇಶನದಲ್ಲಿ ಭಾಗವಹಿಸಬಹುದು. ಆದರೆ ಅವರಿಗೆ ಯಾವುದೇ ಮತದಾನದ ಅಧಿಕಾರ ಇರುವುದಿಲ್ಲ. ಸರಕಾರದ ಭತ್ಯೆ ಪಡೆಯುವಂತಿಲ್ಲ ಎಂದು ಉಚ್ಛ ನ್ಯಾಯಾಲಯ ತಾಕೀತು ಮಾಡಿದೆ.