
ಸಂಗ್ರಹಿಸಿಟ್ಟ ಮದ್ಯ ಸೇವಿಸಿ ಜೈಲು ಸೇರಿದ ಇಲಿ – ಕದ್ದ ತಪ್ಪಿಗೆ ಪೋಲಿಸರ ಅತಿಥಿಯಾದ ಈ ಇಲಿ ಕಥೆ ಏನು?
- ರಾಷ್ಟ್ರೀಯ ಸುದ್ದಿ
- November 10, 2023
- No Comment
- 110
ನ್ಯೂಸ್ ಆ್ಯರೋ : ತಪ್ಪು ಮಾಡಿದರೆ ಶಿಕ್ಷೆ ಖಂಡಿತ ಇದೆ. ಆದರೆ ಇದು ಮಾನವರಿಗೆ ಮಾತ್ರ ಅನ್ವಯವಲ್ಲ. ಇಲಿಗಳಿಗೂ ಅನ್ವಯವಾಗುತ್ತದೆ.
ಇಲಿಯೊಂದು ಕಳ್ಳತನ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಛಿಂದ್ವಾರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಂಗ್ರಹ ಮಾಡಿಟ್ಟಿರುವ ಮದ್ಯದ ಬಾಟಲಿ ಮೇಲೆ ಕಣ್ಣು ಹಾಕಿ ಕದ್ದು ಈಗ ಪೋಲೀಸರ ಅತಿಥಿಯಾಗಿದೆ. ಮುಂದೆ ಇದಕ್ಕೆ ಯಾವ ಶಿಕ್ಷೆ ಕಾದಿದಿಯೋ ಕಾದು ನೋಡಬೇಕು.
ಪೊಲೀಸರು ಸೀಜ್ ಮಾಡಿದ್ದ ಮದ್ಯದ ಬಾಟಲಿಗಳನ್ನು ತಂದು ಗೋದಾಮಿನಲ್ಲಿ ಇರಿಸಿದ್ದರು. ಈ ಬಗ್ಗೆ ಪ್ರಕರಣ ನ್ಯಾಯಾಲಕ್ಕೂ ಹೋಗಿದೆ. ಆದರೆ ಸಂಗ್ರಹಿಸಿ ಇಟ್ಟಿದ್ದ ಮದ್ಯದ ಪ್ಲಾಸ್ಟಿಕ್ ಬಾಟಲಿಗಳನ್ನು ಕೊರೆದು ಇಲಿಗಳು ಸಾಕಷ್ಟು ಮದ್ಯವನ್ನು ಖಾಲಿ ಮಾಡಿವೆ.

ಇದನ್ನು ಇಲಿಗಳು ಕುಡಿದಿವೆಯೋ ಅಥವಾ ಬಾಟಲಿ ಕೊರೆದ ಕಾರಣ ಸೋರಿಕೆಯಾಗಿ ಹೋಗಿದೆಯೋ ಎನ್ನುವುದು ಮಾತ್ರ ಪೊಲೀಸರಿಗೂ ಗೊತ್ತಿಲ್ಲ. ಆದರೆ ಇಲಿಗಳ ಕಾಟದಿಂದ ಬೇಸತ್ತ ಪೊಲೀಸರು ಇಲಿ ಹಿಡಿಯಲು ಬೋನು ಇಟ್ಟಿದ್ದು ಒಂದು ಇಲಿ ಇದರಲ್ಲಿ ಸಿಕ್ಕಿ ಬಿದ್ದಿದೆ.
ಇಲಿಗಳು ಒಂದೆರಡು ಬಾಟಲಿ ಮದ್ಯವಲ್ಲ ಬರೋಬ್ಬರಿ ಸುಮಾರು 60- 65 ಬಾಟಲಿಗಳನ್ನು ಖಾಲಿ ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಲಯದ ವಿಚಾರಣೆ ಹಂತದಲ್ಲಿರುವ ಈ ಪ್ರಕರಣಕ್ಕೆ ಕೋರ್ಟ್‌ಗೆ ಸಾಕ್ಷಿಯಾಗಿ ಮದ್ಯವನ್ನು ಪೊಲೀಸರು ಹಾಜರುಪಡಿಸಬೇಕಿತ್ತು. ಆದರೆ ಇಲಿಗಳು ಮಾಡಿರುವ ತೊಂದರೆಯಿಂದ ಈಗ ಪೊಲೀಸರು ಸಂಕಷ್ಟ ಎದುರಿಸುವಂತಾಗಿದೆ.
ಈ ಪೊಲೀಸ್ ಠಾಣೆಯಲ್ಲಿ ಹಿಂದೆಯೂ ಹಲವು ಸಮಸ್ಯೆಗಳನ್ನು ಇಲಿ ತಂದೊಡ್ಡಿತ್ತು. ಕಟ್ಟಡ ತುಂಬ ಹಳೆಯದಾಗಿದ್ದು, ಇಲ್ಲಿ ಇಲಿಗಳ ಕಾಟ ಸಾಕಷ್ಟಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.