
ಪುತ್ತೂರು : ಮಟಮಟ ಮಧ್ಯಾಹ್ನವೇ ತಲವಾರು ಝಳಪಿಸಿದ ಬಿಜೆಪಿ ಕಾರ್ಯಕರ್ತ – ಪುತ್ತಿಲ ಪರಿವಾರದ ಮನೀಶ್ ಕುಲಾಲ್ ಹತ್ಯೆಗೆ ಸ್ಕೆಚ್, ಐವರು ಪೋಲಿಸರ ವಶಕ್ಕೆ..!
- ಕರಾವಳಿ
- November 10, 2023
- No Comment
- 82
ನ್ಯೂಸ್ ಆ್ಯರೋ : ವಾರದ ಹಿಂದಷ್ಟೇ ತಲವಾರು ದಾಳಿಗೆ ಕಲ್ಲೇಗ ಟೈಗರ್ಸ್ ನ ಅಕ್ಷಯ್ ಕಲ್ಲೇಗ ಕೊಲೆಯಾದ ಘಟನೆ ಹಸಿರಾಗಿರುವಂತೆ ಪುತ್ತೂರಿನಲ್ಲಿ ಮಟಮಟ ಮಧ್ಯಾಹ್ನವೇ ವ್ಯಕ್ತಿಯೊಬ್ಬ ತಲವಾರು ಝಳಪಿಸಿದ ಘಟನೆ ನಡೆದಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದ, ಹಿಂದೂ ಫೈರ್ ಬ್ರ್ಯಾಂಡ್ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ಸಮೀಪದ ಮುಕ್ರಂಪಾಡಿಯಲ್ಲಿ ಪುತ್ತಿಲ ಪರಿವಾರದ ಕಚೇರಿ ಹೊಂದಿದ್ದು, ಇಂದು ಮಧ್ಯಾಹ್ನ ಕಚೇರಿ ಮುಂಭಾಗವೇ ಯುವಕನೊಬ್ಬ ನಾಲ್ವರು ಸಹಚರರೊಂದಿಗೆ ತಲವಾರು ಹಿಡಿದುಕೊಂಡು ಗಲಾಟೆ ಆರಂಭಿಸಿದ್ದು, ಅಪಾಯದ ಮುನ್ಸೂಚನೆ ಅರಿತ ಪುತ್ತೂರು ನಗರ ಠಾಣಾ ಪೊಲೀಸರು ಆಗಮಿಸಿ ಐವರನ್ನು ವಶಕ್ಕೆ ಪಡೆದಿದ್ದಾರೆ.
ಅರುಣ್ ಪುತ್ತಿಲ ಬೆಂಬಲಿಗರಾದ ಮನೀಶ್ ಕುಲಾಲ್ ಬನ್ನೂರು ಅವರನ್ನು ಗುರಿಯಾಗಿಟ್ಟುಕೊಂಡು ದಿನೇಶ್ ಪಂಜಿಗ ಎಂಬಾತ ನಾಲ್ವರು ಯುವಕರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದ ಎನ್ನಲಾಗಿದೆ. ಪುತ್ತಿಲ ಕಚೇರಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ ಮತ್ತಿತರರು ಇದ್ದು, ಮನೀಶ್ ಕುಲಾಲ್ ಕಚೇರಿಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ಮನೀಶ್ ಕುಲಾಲ್ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ವೇಳೆ ದಿನೇಶ್ ಪಂಜಿಗ ಬಿಜೆಪಿ ಪರ ಕೆಲಸ ಮಾಡಿದ್ದರೆ, ಮನೀಶ್ ಕುಲಾಲ್ ಪುತ್ತಿಲ ಪರ ಪ್ರಚಾರ ನಡೆಸಿದ್ದರು.
ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರೂಪ್‌ನಲ್ಲಿ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಇದ್ದು, ಅಲ್ಲದೇ ಪುತ್ತಿಲ ಪರಿವಾರದ ಕಚೇರಿಗೆ ಬಾ ಎಂದು ಮನೀಶ್ ಅವರು ದಿನೇಶ್ ಪಂಜಿಗ ಅವರಿಗೆ ಧಮ್ಕಿ ಹಾಕಿದ್ದರು ಎನ್ನಲಾಗಿದೆ. ತಲವಾರು ಝಳಪಿಸಿದ್ದರಿಂದ ಸಹಜವಾಗಿಯೇ ಘಟನಾ ಸ್ಥಳದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ವಶಕ್ಕೆ ಪಡೆದಿರುವ ಐವರನ್ನು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.