
Demonetization : ಏಳು ವರ್ಷಗಳ ಹಿಂದೆ ಈ ದಿನ ಏನಾಗಿತ್ತು? – 500, 1000 ನೋಟ್ ಬ್ಯಾನ್ ಮಾಡಿದ್ದ ಪ್ರಧಾನಿ..!
- ರಾಷ್ಟ್ರೀಯ ಸುದ್ದಿ
- November 8, 2023
- No Comment
- 68
ನ್ಯೂಸ್ ಆ್ಯರೋ : ಕೋವಿಡ್ ಸಾಂಕ್ರಾಮಿಕ ಬರುವ ಮೊದಲು ಏಳು ವರ್ಷಗಳ ಹಿಂದೆ 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ರಾತ್ರಿ ಹೇಳಿದ ಒಂದು ಮಾತು ಭಾರತೀಯರ ಮನೆಮನೆಯಲ್ಲೂ ಚರ್ಚೆಯಾಗಿತ್ತು. ದಿಲ್ಲಿಯಿಂದ ಹಳ್ಳಿವರೆಗೆ ಎಲ್ಲರ ಜೇಬು ಖಾಲಿಯಾಗುವಂತೆ ಮಾಡಿತ್ತು.
ಭಾರತದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡುವಂತೆ ಅವರು ಅಂದು ನೀಡಿದ ಆದೇಶ ಭಾರತೀಯ ಆರ್ಥಿಕತೆಯನ್ನು ಪರಿವರ್ತನೆ ಮಾಡಿದ ಐತಿಹಾಸಿಕ ದಿನವಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ.
ದೇಶದಲ್ಲಿ ನೋಟು ಅಮಾನ್ಯೀಕರಣವಾಗಿ ಇಂದಿಗೆ 7ನೇ ವರ್ಷ. ಯಾವುದೇ ಪೂರ್ವ ಸೂಚನೆ ನೀಡದೆ ಅವರು ದೂರದರ್ಶನದಲ್ಲಿ ಜನರೊಂದಿಗೆ ಮಾತನಾಡುತ್ತಾ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದರು. ಇದು ದೇಶದ ಜನರಿಗೆ ಬಹುದೊಡ್ಡ ಆಘಾತವನ್ನೂ ನೀಡಿತ್ತು.
ಸಾರ್ವಜನಿಕರಲ್ಲಿ ಭೀತಿ, ಆಶ್ಚರ್ಯ, ಆತಂಕವನ್ನು ಉಂಟು ಮಾಡಿದ ಆ ರಾತ್ರಿ ಜನರು ತಮ್ಮಲ್ಲಿದ್ದ ಈ ನೋಟುಗಳನ್ನು ಏನು ಮಾಡುವುದೆಂದು ತಿಳಿಯದೆ ಚಿಂತೆಗೆ ಈಡಾಗಿದ್ದು ಮಾತ್ರ ಇಂದಿಗೂ ಎಲ್ಲರ ನೆನಪಿನಲ್ಲಿ ಉಳಿದಿದೆ.
ಕಪ್ಪು ಹಣ, ನಕಲಿ ಕರೆನ್ಸಿ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಇದರ ಪ್ರಮುಖ ಉದ್ದೇಶವಾಗಿದ್ದರೂ ಇದರಿಂದ ಸಾಮಾನ್ಯ ಜನರೂ ತೊಂದರೆ ಅನುಭವಿಸಿದ್ದು ಮಾತ್ರ ಸುಳ್ಳಲ್ಲ. ತಮ್ಮಲ್ಲಿರುವ ನೋಟುಗಳನ್ನು ಬದಲಾಯಿಸಲು ಜನರು ಸರಿಸುಮಾರು ತಿಂಗಳುಗಳ ಕಾಲ ಸರತಿ ಸಾಲಿನಲ್ಲಿ ಬ್ಯಾಂಕ್ ಗಳ ಮುಂದೆ ನಿಂತಿದ್ದರು. ತಮ್ಮ ಸಂಪೂರ್ಣ ಜೀವನದಲ್ಲೇ ಬ್ಯಾಂಕ್ ಅನ್ನು ನೋಡದವರು ಬ್ಯಾಂಕ್ ನತ್ತ ಹೆಜ್ಜೆ ಹಾಕುವಂತೆ ಮಾಡಿತ್ತು ಆ ಒಂದು ದಿನ.
ಬಳಿಕ ಅಮಾನ್ಯಗೊಂಡ ನೋಟಿಗೆ ಪರ್ಯಾಯವಾಗಿ 2,000 ಮತ್ತು 500 ರೂಪಾಯಿಗಳ ಹೊಸ ನೋಟುಗಳನ್ನು ತರಲಾಯಿತು. ಕ್ರಮೇಣ 2,000 ರೂ. ನೋಟು ಮುದ್ರಣವನ್ನು ನಿಲ್ಲಿಸಲಾಯಿತು.
2016 ನವೆಂಬರ್ 8ರ ಮೊದಲು ಚಲಾವಣೆಯಲ್ಲಿದ್ದ 15.41 ಲಕ್ಷ ಕೋಟಿ ರೂ. ಮೌಲ್ಯದ 500 ರೂ. ಮತ್ತು 1,000 ರೂ. ನೋಟುಗಳಲ್ಲಿ
15.31 ಲಕ್ಷ ಕೋಟಿ ರೂ. ಮೌಲ್ಯ ದ ನೋಟುಗಳನ್ನು ಮರಳಿ ಪಡೆದಿರುವುದಾಗಿ ಅರ್ ಬಿಐ ಘೋಷಿಸಿತು. ಬಳಿಕ 2023ರಲ್ಲಿ 2000 ರೂ. ಮುಖಬೆಲೆಯ ನೋಟುಗಳನ್ನೂ ಆರ್ ಬಿಐ ಮರಳಿ ಪಡೆಯಿತು.
ಬಳಿಕ ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಡಿಜಿಟಲ್ ಪಾವತಿಗೆ ಹೆಚ್ಚು ಆದ್ಯತೆ ನೀಡಲಾಯಿತು. ಈಗ ಇದು ದೇಶದ ಅರ್ಥವ್ಯವಸ್ಥೆಯ ಜೀವನಾಡಿಯಾಗಿ ಗುರುತಿಸಿಕೊಂಡಿದೆ.
ಒಟ್ಟಿನಲ್ಲಿ ಭಾರತದ ಅರ್ಥವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಕೈಗೊಂಡ ಈ ದಿಟ್ಟ ಕ್ರಮ ಇಂದು ತಕ್ಕ ಮಟ್ಟಿಗೆ ದೇಶದ ಅರ್ಥವ್ಯವಸ್ಥೆಯನ್ನು ಸುಧಾರಣೆಯ ಹಾದಿಯಲ್ಲಿ ಮುನ್ನಡೆಸಿದೆ.