
ಹಿರಿಯ ನಾಗರಿಕರ ಎಫ್‌ಡಿಗೆ ಶೇ 9ರಷ್ಟು ಬಡ್ಡಿ ಕೊಡುಗೆ – ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಘೋಷಣೆ
- ಹಣಕಾಸು
- November 19, 2022
- No Comment
- 315
ನ್ಯೂಸ್ ಆ್ಯರೋ : ಬ್ಯಾಂಕ್‌ಗಳಲ್ಲಿ ಸಾಮಾನ್ಯವಾಗಿ ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಯಲ್ಲಿ (ಎಫ್‌ಡಿ) ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. ಬಹುತೇಕ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಹಿರಿಯ ನಾಗರಿಕರ ಎಫ್‌ಡಿಗೆ ಗರಿಷ್ಠ ಶೇಕಡ 8.5ರ ವರೆಗೂ ಬಡ್ಡಿ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತದೆ.
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಒಂದು ಹೆಜ್ಜೆ ಮುಂದೆ ಬಂದು ಹಿರಿಯ ನಾಗರಿಕರ ಠೇವಣಿಗೆ ಎಲ್ಲರಿಗಿಂತ ಹೆಚ್ಚಿನ ಬಡ್ಡಿದರವನ್ನು ಘೋಷಣೆ ಮಾಡಿದೆ. ಹಿರಿಯ ನಾಗರಿಕರ ಎಫ್‌ಡಿ ಬಡ್ಡಿ ದರವನ್ನು ಶೇಕಡಾ 9ರ ವರೆಗೆ ಏರಿಸುವ ಮೂಲಕ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ.
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇತ್ತೀಚೆಗೆ ಆರಂಭಿಸಿದ್ದ ‘ಶಕುನ್’ ಸ್ಥಿರ ಠೇವಣಿ ಹೂಡಿಕೆ ಯೋಜನೆಯ ಯಶಸ್ಸಿನಿಂದ ಪ್ರೇರಣೆಗೊಂಡು ಬಡ್ಡಿ ದರ ಹೆಚ್ಚಳ ಮಾಡಿದೆ ಎಂದು ಬ್ಯಾಂಕ್ನ ಮೂಲಗಳು ತಿಳಿಸಿವೆ.
ಒಂದು ವರ್ಷದವರೆಗೆ ಅಥವಾ 181 ಮತ್ತು 501 ದಿನಗಳ ಅವಧಿಯ ಹಿರಿಯ ನಾಗರಿಕರ ಎಫ್‌ಡಿಗೆ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇಕಡಾ 9ರ ಬಡ್ಡಿ ನೀಡುತ್ತಿದೆ. ಇತರ ಗ್ರಾಹಕರು 181 ಮತ್ತು 501 ದಿನಗಳ ಅವಧಿಯ ಎಫ್‌ಡಿಗೆ ಶೇಕಡಾ 8.50ರ ಬಡ್ಡಿ ದರದ ಕೊಡುಗೆ ಪಡೆಯಬಹುದು. ಈ ಪ್ರಕಟಣೆಯೊಂದಿಗೆ ಬ್ಯಾಂಕ್ ನವೆಂಬರ್ನಲ್ಲಿ ಎರಡನೇ ಬಾರಿ ಬಡ್ಡಿ ದರದಲ್ಲಿ ಪರಿಷ್ಕರಣೆ ಮಾಡಿದೆ.
₹2 ಕೋಟಿಗಿಂತ ಹೆಚ್ಚಿನ ಮೊತ್ತದ ಠೇವಣಿಗಳ ಬಡ್ಡಿ ದರವನ್ನೂ ಯುನಿಟಿ ಬ್ಯಾಂಕ್ ಹೆಚ್ಚಿಸಿದೆ. ಕಾಲೇಬಲ್ ಬಲ್ಕ್ ಡೆಪಾಸಿಟ್ಗಳಿಗೆ ವರ್ಷದ ಅವಧಿಗೆ ಶೇಕಡಾ 8ರ ಬಡ್ಡಿ ನೀಡುತ್ತಿದೆ. ನಾನ್ ಕಾಲೇಬಲ್ ಬಲ್ಕ ಡೆಪಾಸಿಟ್ಗಳಿಗೆ ಶೇಕಡಾ 8.10ರ ಬಡ್ಡಿ ಘೋಷಿಸಲಾಗಿದೆ.
ಉಳಿತಾಯ ಖಾತೆಯಲ್ಲಿರುವ ಹಣಕ್ಕೂ ಯುನಿಟಿ ಬ್ಯಾಂಕ್ ವಾರ್ಷಿಕ ಶೇಕಡಾ 7ರ ಬಡ್ಡಿ ನೀಡುತ್ತಿದೆ. ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಉಳಿತಾಯಕ್ಕೆ ವಾರ್ಷಿಕ ಶೇಕಡಾ 6ರಷ್ಟು ಬಡ್ಡಿ ಕೊಡುಗೆ ನೀಡುತ್ತಿದೆ.
ಅವಧಿಗೂ ಮುನ್ನ ಸ್ಥಿರಠೇವಣಿ ಹಿಂಪಡೆಯುವುದಾದರೆ ಬಡ್ಡಿ ದರದಲ್ಲಿ ಶೇಕಡಾ 1ರಷ್ಟು ಕಡಿತ ಮಾಡಲಾಗುವುದು. ಎಲ್ಲಿಯವರೆಗೆ ಠೇವಣಿ ಇಟ್ಟಿರುತ್ತೇವೆಯೋ ಆ ಅವಧಿಯ ವರೆಗೆ ಲೆಕ್ಕಾಚಾರ ಹಾಕಿ ಬಡ್ಡಿಯಲ್ಲಿ ಶೇಕಡಾ 1ರ ಕಡಿತ ಮಾಡಲಾಗುತ್ತದೆ ಬ್ಯಾಂಕ್ ಪ್ರಕಟಣೆ ತಿಳಿಸಿದೆ.