
ಜಾಗತಿಕ ಮಟ್ಟದಲ್ಲಿ ಕುಗ್ಗುತ್ತಿದೆ ಡಾಲರ್ ಮೌಲ್ಯ – ಅಂತರಾಷ್ಟ್ರೀಯ ಕರೆನ್ಸಿಯಾಗಲಿದೆ ಭಾರತೀಯ ರೂಪಾಯಿ ; ವಿವರ ಇಲ್ಲಿದೆ ನೋಡಿ…
- ಹಣಕಾಸು
- March 16, 2023
- No Comment
- 3402
ನ್ಯೂಸ್ ಆ್ಯರೋ : ಭಾರತದ ರುಪಾಯಿ ಅಂತಾರಾಷ್ಟ್ರೀಯ ಕರೆನ್ಸಿಯಾಗುವ ಹಾದಿಯಲ್ಲಿ ವೇಗವಾಗಿ ಸಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಬದಲು ರುಪಾಯಿ ಕರೆನ್ಸಿಯನ್ನು ಬಳಸಲು ಮುಂದಾಗುತ್ತಿರುವ ದೇಶಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದ್ದು, ಇದಕ್ಕೆ ಪೂರಕವಾಗಿ ರುಪಾಯಿಯಲ್ಲಿ ವ್ಯಾಪಾರ ಮಾಡುವ ದೇಶಗಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಮತ್ತು ಈ ಪ್ರಕ್ರಿಯೆ ಸುಗಮವಾಗಿ ಸಾಗುವ ರೀತಿಯಲ್ಲಿ ವೋಸ್ತ್ರೋ ವ್ಯವಸ್ಥೆಯನ್ನು ಭಾರತ ಮಾಡಿದೆ.
ಇದೀಗ ಇಸ್ರೇಲ್, ರಷ್ಯಾ ಇತ್ಯಾದಿ 18 ದೇಶಗಳಲ್ಲಿ 60 ವಿಶೇಷ ರುಪಾಯಿ ವೋಸ್ಟ್ರೋ ಖಾತೆ (SRVA- Special Rupee Vostro Account) ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮತಿಸಿದೆ.
ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಬಹುತೇಕ ದೇಶಗಳು ಡಾಲರ್ ಕರೆನ್ಸಿಯಲ್ಲೇ ವ್ಯವಹಾರ ನಡೆಸುತ್ತವೆ. ಒಂದು ವೇಳೆ ಅಮೆರಿಕವೇನಾದರೂ ಒಂದು ದೇಶದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೆ ಅದರ ಪರಿಣಾಮ ಭೀಕರವಾದುದು. ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾವನ್ನು ಇದೇ ರೀತಿ ಉಸಿರುಗಟ್ಟಿಸಿ ಇಕ್ಕಟ್ಟಿಗೆ ಸಿಲುಕಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಕರೆನ್ಸಿಯ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸುವ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಭಾರತದ ರುಪಾಯಿ ಬಹಳ ಜನಪ್ರಿಯವಾಗತೊಡಗಿದೆ.
ಅತಿಯಾದ ರುಪಾಯಿ ಆಮದಿನಿಂದ ಅದರ ಕರೆನ್ಸಿ ಮೌಲ್ಯ ಕಡಿಮೆ ಆಗುವುದನ್ನು ತಪ್ಪಿಸಲು ಮತ್ತು ವ್ಯಾಪಾರ ಪ್ರಕ್ರಿಯೆ ಸುಲಭವಾಗಿ ಸಾಗಲು ವೋಸ್ಟ್ರೋ ಖಾತೆ ವ್ಯವಸ್ಥೆ ಸಹಾಯಕ್ಕೆ ಬರುತ್ತದೆ.
ಏನಿದು ಆರ್ಬಿಐನ ಸ್ಪೆಷಲ್ ರುಪೀ ವೋಸ್ಟ್ರೋ ಅಕೌಂಟ್?
ವಿಶೇಷ ರುಪಾಯಿ ವೋಸ್ಟ್ರೋ ಖಾತೆಯ ಆಲೋಚನೆ ಆರ್ಬಿಐಗೆ ಹೊಳೆದದ್ದು ಈಗಲ್ಲ. ಕಳೆದ ವರ್ಷ ಜುಲೈನಲ್ಲೇ ಇದರ ಪ್ರಕ್ರಿಯೆ ಆರಂಭವಾಗಿತ್ತು. ಭಾರತೀಯ ರುಪಾಯಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟು ನಡೆಸಲು ಆರ್ಬಿಐ ಮಾರ್ಗಸೂಚಿಗಳನ್ನು ತಿಳಿಸಿತ್ತು.
ಅದರ ಪ್ರಕಾರ, ಭಾರತದ ಜೊತೆ ವ್ಯಾಪಾರ ಮಾಡುವ ದೇಶವು ರುಪಾಯಿ ಕರೆನ್ಸಿಯನ್ನ ಬಳಸಲು ಅನುವು ಮಾಡಿಕೊಡುತ್ತದೆ ವೋಸ್ಟ್ರೋ ಖಾತೆ. ವ್ಯಾಪಾರ ಮಾಡುವ ದೇಶದ ಪಾರ್ಟ್ನರ್ ಬ್ಯಾಂಕುಗಳಿಗೆ ವೋಸ್ಟ್ರೋ ಖಾತೆ ಬೇಕಾಗುತ್ತದೆ. ಈ ಖಾತೆಯನ್ನು ಭಾರತೀಯ ಬ್ಯಾಂಕೊಂದು ತೆರೆದು ನಿರ್ವಹಣೆ ಮಾಡುತ್ತದೆ. ಈ ವಿದೇಶೀ ವ್ಯಾಪಾರಿಯಿಂದ ಭಾರತ ಆಮದು ಮಾಡಿಕೊಂಡಾಗ ರುಪಾಯಿಯಲ್ಲಿ ವಹಿವಾಟು ಮಾಡಲಾಗುತ್ತದೆ. ವಿದೇಶೀ ವ್ಯಾಪಾರಿಗೆ ರುಪಾಯಿಯಲ್ಲೇ ಹಣ ಸಂದಾಯವಾಗುತ್ತದೆ. ಈ ಹಣವು ನಿಗದಿತ ವೋಸ್ಟ್ರೋ ಖಾತೆಗೆ ಜಮೆಯಾಗುತ್ತದೆ.
ಹಾಗೆಯೇ, ಭಾರತದಿಂದ ವಿದೇಶಕ್ಕೆ ಏನಾದರೂ ರಫ್ತು ಆದಾಗ, ಆ ವಿದೇಶೀ ಆಮದುದಾರ ಸಂಸ್ಥೆಯ ವೋಸ್ಟ್ರೋ ಖಾತೆಯಿಂದ ರುಪಾಯಿ ಲೆಕ್ಕದಲ್ಲಿ ಮೊತ್ತವನ್ನು ಕಳೆಯಲಾಗುತ್ತದೆ. ಈ ರೀತಿಯಾಗಿ ವೋಸ್ಟ್ರೋ ವ್ಯವಸ್ಥೆ ಮೂಲಕ ಭಾರತೀಯ ರುಪಾಯಿಯಲ್ಲೇ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಹಾರ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ.
ವಿಶೇಷ ವೋಸ್ಟ್ರೋ ಖಾತೆ ಹೊಂದಿರುವವರು ಭಾರತ ಸರ್ಕಾರದ ಷೇರು, ಬಾಂಡು ಇತ್ಯಾದಿಗಳಲ್ಲಿ ಹೂಡಿಕೆ ರೂಪದಲ್ಲಿ ಹಣ ಇಟ್ಟುಕೊಳ್ಳುವ ವ್ಯವಸ್ಥೆಯೂ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಭಾರತದೊಂದಿಗೆ ಡಾಲರ್ ಬದಲು ರುಪಾಯಿಯಲ್ಲೇ ವ್ಯಾಪಾರ ಮಾಡಲು ಮುಂದಾಗಬಹುದೆಂದು ನಿರೀಕ್ಷಿಸಬಹುದಾಗಿದೆ.
ರುಪಾಯಿ ಕರೆನ್ಸಿಯಲ್ಲಿ ವ್ಯಾಪಾರ ಮಾಡಲು ಆರ್ಬಿಐ ಅನುಮತಿಸಿದ 18 ದೇಶಗಳು ಹೀಗಿವೆ..
ಭಾರತೀಯ ರುಪಾಯಿಯಲ್ಲಿ ವ್ಯಾಪಾರ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ 18 ದೇಶಗಳಿಗೆ ಅನುಮತಿ ನೀಡಿದೆ. ಈ 18 ದೇಶಗಳಿಗೆ 60 ವಿಶೇಷ ವೋಸ್ಟ್ರೋ ಅಕೌಂಟ್ಗಳನ್ನು ತೆರೆಯಲಾಗುತ್ತದೆ. ಈ 18 ದೇಶಗಳು ಪಟ್ಟಿ ಮುಂದಿದೆ:
- ರಷ್ಯಾ
- ಸಿಂಗಾಪುರ
- ಶ್ರೀಲಂಕಾ
- ಬೋಟ್ಸವಾನ
- ಫಿಜಿ
- ಜರ್ಮನಿ
- ಗಯಾನ
- ಇಸ್ರೇಲ್
- ಕೀನ್ಯಾ
- ಮಲೇಷ್ಯಾ
- ಮಾರಿಷಸ್
- ಮಯನ್ಮಾರ್
- ನ್ಯೂಜಿಲೆಂಡ್
- ಓಮನ್
- ಸೇಶೆಲೆಸ್
- ತಾಂಜಾನಿಯಾ
- ಉಗಾಂಡ
- ಬ್ರಿಟನ್ (ಯುಕೆ)