ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ; ಈ ಹಬ್ಬದ ಮಹತ್ವವೇನು ತಿಳಿಯಿರಿ
ನ್ಯೂಸ್ ಆ್ಯರೋ: ಸುಗ್ಗಿಯ ಕಾಲದಲ್ಲಿ ಆಚರಿಸುವ ಹಾಗೂ ಸೂರ್ಯ ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ಪವಿತ್ರ ದಿನವನ್ನು ಮಕರ ಸಂಕ್ರಾಂತಿಯಾಗಿ ಆಚರಿಸುತ್ತೇವೆ. ಸೂರ್ಯ ತನ್ನ ಮಗ, ಮಕರ ರಾಶಿಯ ಅಧಿಪತಿ ಶನಿಯ ಮನೆಗೆ ಹೋಗುತ್ತಾನೆ ಎನ್ನುವುದು ನಂಬಿಕೆ. ಹೀಗಾಗಿ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಈ ಹಬ್ಬದ ವಿಶೇಷ ಮಾಹಿತಿ ಇಲ್ಲಿದೆ.
ಈ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿ ಪಡಿಸಲು ಪ್ರತಿ 80 ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ. ಈ ವರ್ಷ ಸೂರ್ಯನು ಜನವರಿ 14 ರಂದು ಬೆಳಿಗ್ಗೆ 8.44 ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಜನವರಿ 14 ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.
ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ. ಸಂಕ್ರಾಂತಿಯ ಬಗ್ಗೆ ಪಂಚಾಂಗದಲ್ಲಿ ಇರುವ ಮಾಹಿತಿ: ಪಂಚಾಂಗದಲ್ಲಿ ಸಂಕ್ರಾಂತಿಯ ರೂಪ, ವಯಸ್ಸು, ವಸ್ತ್ರ, ಹೋಗುವ ದಿಕ್ಕು ಮುಂತಾದವುಗಳ ಮಾಹಿತಿ ಇರುತ್ತದೆ. ಅದು ಕಾಲಮಹಿಮೆಗನುಸಾರ ಅವಳಲ್ಲಿ ಆಗುವ ಬದಲಾವಣೆಯನ್ನು ಅನುಸರಿಸಿರುತ್ತದೆ.
ಮಕರ ಸಂಕ್ರಾಂತಿ ಮಹತ್ವ: ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಮಕರ ಸಂಕ್ರಾಂತಿಯ ಆಚರಣೆ ಹೇಗೆ?:
ಪುಣ್ಯತೀರ್ಥಗಳಲ್ಲಿ ಅಂದರೆ ನದಿ, ಸಮುದ್ರ ಮುಂತಾದವುಗಳಲ್ಲಿ ಪವಿತ್ರ ಸ್ನಾನ ಮಾಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದು ಮನಸ್ಸು ಮತ್ತು ಶರೀರದ ಕೊಳೆಯನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ. ನದಿ, ಸುಮುದ್ರ ಹತ್ತಿರದಲ್ಲಿ ಇರದವರು ಮನೆಯಲ್ಲಿ ಸ್ನಾನ ಮಾಡುವಾಗ ಆ ನೀರಿಗೆ ಎಳ್ಳನ್ನು ಬೆರೆಸಿ ಸ್ನಾನ ಮಾಡಬೇಕು. ಜೊತೆಗೆ ಇದು ಪರಮಾತ್ಮನ ಅಭಿಮುಖಕ್ಕೆ ಅತ್ಯಂತ ಪ್ರಶಸ್ತವಾದ ಕಾಲವಾದ್ದರಿಂದ ಈ ಸಮಯದಲ್ಲಿ ಪರಮಾತ್ಮನ ಧ್ಯಾನ ಮಾಡುವುದು ವಿಶೇಷ ಫಲದಾಯಕ.
ಇನ್ನು ಮಕರ ಸಂಕ್ರಾಂತಿ ಎಳ್ಳಿನ ಹಬ್ಬವೆಂದು ಪ್ರಸಿದ್ಧವಾಗಿದೆ. ಈ ದಿನ ಎಳ್ಳನ್ನು ವಿಶೇಷವಾಗಿ ಬಳಸಲಾಗುತ್ತದೆ. ಪೀಡಾ ಪರಿಹಾರಕ್ಕಾಗಿ ಎಳ್ಳು, ಬೆಲ್ಲ, ಕೊಬ್ಬರಿ ಇತ್ಯಾದಿಗಳನ್ನು ಹಂಚಬೇಕು ಎನ್ನಲಾಗುತ್ತದೆ. ಈ ದಿನ ಮಕ್ಕಳ ಮೇಲೆ ಎಳ್ಳನ್ನು ಸುರಿಯುವುದರಿಂದ ಬಾಲಾರಿಷ್ಟ ನಾಶವಾಗುತ್ತದೆಂಬ ನಂಬಿಕೆಯಿದೆ. ವಿಶೇಷವಾಗಿ ಎಳ್ಳೆಣ್ಣೆಯ ದೀಪವನ್ನು ಉರಿಸುವುದು, ಸೂರ್ಯ ನಮಸ್ಕಾರ ಇವುಗಳಿಂದ ಆಯುಷ್ಯ ಆರೋಗ್ಯವೃದ್ಧಿಯಾಗುತ್ತದೆ. ಈ ದಿನದಂದು ‘ಆದಿತ್ಯ ಹೃದಯ’ ಸ್ತೋತ್ರದ ಪಾರಾಯಣ ಮಾಡುವುದು ಕೂಡ ಅತ್ಯಂತ ಶ್ರೇಯಸ್ಕರವಾಗಿದೆ ಎಂದು ಪುರಾಣಗಳು ಹೇಳುತ್ತವೆ. ಮಾಡಿದ ಭಕ್ಷ್ಯ ಭೋಜನಗಳನ್ನು ನಾಲ್ಕು ಜನರಿಗೆ ಹಂಚುವುದರಿಂದ ಹಬ್ಬದ ಫಲ ಪ್ರಾಪ್ತಿಯಾಗುತ್ತದೆ. ಒಟ್ಟಿನಲ್ಲಿ ಮಕರ ಸಂಕ್ರಮಣದಂದು ದೇವರನ್ನು ಪೂಜಿಸುವುದರಿಂದ ಆಯುಷ್ಯ, ಆರೋಗ್ಯ, ಸಂಪತ್ತನ್ನು ಪಡೆಯಬಹುದು.
ಸಂಕ್ರಾಂತಿಯಲ್ಲಿ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ, ಉದಾ.ಎಳ್ಳುನೀರಿನಿಂದ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು, ಪೂಜ್ಯರಿಗೆ ಸತ್ಪಾತ್ರರಿಗೆ ಎಳ್ಳು ದಾನ ಮಾಡುವುದು, ಶಿವಮಂದಿರದಲ್ಲಿ ಎಳ್ಳೆಣ್ಣೆಯ ದೀಪಗಳನ್ನು ಹಚ್ಚುವುದು, ಪಿತೃಶ್ರಾದ್ಧ ಮಾಡುವುದು (ಇದರಲ್ಲಿ ತಿಲಾಂಜಲಿ ನೀಡುತ್ತಾರೆ).
Leave a Comment