Do you know how much salary was paid to Rakshit Shetty who was carrying cement bags?

ಸಿಮೆಂಟ್ ಮೂಟೆ ಹೊರುತ್ತಿದ್ದ ರಕ್ಷಿತ್ ಶೆಟ್ಟಿಗೆ ಅಪ್ಪ ಕೊಡ್ತಿದ್ದ ಸಂಬಳ ಎಷ್ಟು ಗೊತ್ತಾ..? – ಕೇಳಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರಾ..!

ನ್ಯೂಸ್ ಆ್ಯರೋ : ಸಿನಿಮಾ ರಂಗದಲ್ಲಿ ನಮ್ಮ ನೆಚ್ಚಿನ ನಟ-ನಟಿಯರ ಯಾವುದೇ ಸಿನಿಮಾಗಳು ರಿಲೀಸ್ ಆದರೂ ನೋಡಲು ತುದಿಗಾಲಲ್ಲಿ ಕಾಯುತ್ತಿರುತ್ತೇವೆ. ಸಿನಿಮಾ ಕ್ರೇಜೇ ಅಂತದ್ದು.‌ ಅದರಲ್ಲೂ ಸೆಲೆಬ್ರೆಟಿಗಳು ನಮ್ಮ ಊರಿನವರೇ ಆದರೆ ಅವರ ಬಗ್ಗೆ ಪ್ರೀತಿ ಇನ್ನೂ ಹೆಚ್ಚು. ನಮ್ಮ ಮನೆಯ ಮಗನಂತೆ ಅವರಿಗೆ ಮನಸ್ಸಲ್ಲೊಂದು ಸ್ಥಾನ.

ಕರಾವಳಿ ಭಾಗದ ನಟ ರಕ್ಷಿತ್ ಶೆಟ್ಟಿ ಹೆಸರು ಚಿತ್ರರಂಗದಲ್ಲಿ ಅಪರಿಚಿತ ಏನೂ ಅಲ್ಲ. ಕಥೆಯ ಒಳಗೆ ಹೊಕ್ಕು ಪಾತ್ರಕ್ಕೆ ಸಂಪೂರ್ಣ ಜೀವಂತಿಕೆ ಒದಗಿಸುವ ಒಬ್ಬ ಅದ್ಭುತ ನಟ ಇವರು. ಅಂದ ಹಾಗೆ ಮೊನ್ನೆ ತಾನೇ ಇವರು ನಟಿಸಿರುವ ಸಪ್ತಸಾಗರದಾಚೆ ಪಾರ್ಟ್-ಬಿ ಕೂಡಾ ಬಿಡುಗಡೆಯಾಯಿತು. ಇದೀಗ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.

ನಟ ರಕ್ಷಿತ್ ಶೆಟ್ಟಿ ವೈಯಕ್ತಿಕ ಬದುಕಿನ ಏರುಪೇರುಗಳನ್ನು ನಾವು ನೀವೆಲ್ಲಾ ನೋಡಿಕೊಂಡೇ ಬಂದಿದ್ದೇವೆ. ಆದರೆ ಇವರು ಹೀರೋ ಆಗುವ ಮೊದಲು ಅನೇಕ ರೀತಿಯ ಸವಾಲುಗಳನ್ನು ಎದುರಿಸಿ ಬಂದಿದ್ದರು. ಆ ವಾಸ್ತವ ಕಥೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಇವರ ಮೊದಲ ಸಂಬಳ ಎಷ್ಟು ಗೊತ್ತಾ…?

“ನಾನು 9, 10ನೇ ತರಗತಿಯಲ್ಲಿದ್ದಾಗ ಕಟ್ಟಡಗಳನ್ನು ಕಟ್ಟುತ್ತಿದ್ದ ಜಾಗಕ್ಕೆ ಸಿಮೆಂಟ್ ಮೂಟೆಗಳನ್ನು ಸಾಗಿಸುತ್ತಿದ್ದೆ. ನಾನು ಸಿಮೆಂಟ್ ಮೂಟೆಗಳನ್ನು ಲೋಡ್ ಮತ್ತು ಅನ್‌ಲೋಡ್ ಮಾಡುತ್ತಿದ್ದೆ. ಹಾಗಾಗಿ ನಮ್ಮ ಅಪ್ಪ ಪ್ರತಿ ಸಿಮೆಂಟ್‌ ಮೂಟೆಗೆ 2 ರೂಪಾಯಿ ಕೊಡುತ್ತಿದ್ದರು. 10 ರಿಂದ 15 ಮೂಟೆಗಳು. ಸಾಗಿಸುವುದಕ್ಕೆ 20 ರೂಪಾಯಿ. ಹೀಗೆ 100 ರಿಂದ 150 ರೂಪಾಯಿ ಸಿಗುತ್ತಿತ್ತು. ಅದೇ ನನ್ನ ಪಾಕೆಟ್ ಮನಿ. ಒಂದರ್ಥದಲ್ಲೇ ಅದೇ ಮೊದಲ ಸಂಬಳ” ಎಂದು ತೆಲುಗು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ರಕ್ಷಿತ್ ಶೆಟ್ಟಿ ವೃತ್ತಿ ಜೀವನದಲ್ಲಿ ಪಡೆದ ಮೊದಲ ಸಂಬಳ ಎಷ್ಟು? ಎನ್ನುವ ಪ್ರಶ್ನೆಗೆ “ನಾನು ಬೆಂಗಳೂರಿಗೆ ಬಂದಾಗ ನಾನು ಐಟಿ ಕಂಪೆನಿಯಲ್ಲಿ ಮೊದಲು ಕೆಲಸ ಮಾಡಲು ಆರಂಭಿಸಿದೆ. ನನ್ನ ಮೊದಲ ಸಂಬಳ 12 ಸಾವಿರ ರೂಪಾಯಿ” ಎಂದು ರಕ್ಷಿತ್ ಹೇಳಿದ್ದಾರೆ. ಮಾತು ಮುಂದುವೆರೆಸಿ ಅದಕ್ಕೂ ಮುನ್ನ ನಮ್ಮ ತಂದೆ ಕಂಟ್ರಕ್ಷನ್ ಫೀಲ್ಡ್‌ನಲ್ಲಿದ್ದರು. ಹಾಗಾಗಿ ಬಹಳ ಚಿಕ್ಕ ವಯಸ್ಸಿನಲ್ಲೇ ನಾನು ಸಿಮೆಂಟ್ ಮೂಟೆಗಳನ್ನು ಡೆಲಿವರಿ ಮಾಡುತ್ತಿದ್ದೆ.” ಎಂದು ಹೇಳಿದರು.

ನಟ ರಕ್ಷಿತ್ ಶೆಟ್ಟಿ ಹಿನ್ನೆಲೆ ಏನು..?

ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ರಕ್ಷಿತ್ ಶೆಟ್ಟಿ ಬಳಿಕ ಹೀರೊ ಆಗಿ ಬಡ್ತಿ ಪಡೆದರು. ‘ಉಳಿದವರು ಕಂಡಂತೆ’ ಚಿತ್ರವನ್ನು ನಿರ್ದೇಶಿಸಿ ನಟಿಸಿದರು. ಮುಂದೆ ನಿರ್ಮಾಪಕರು ಆದರು. ಉಡುಪಿಯಲ್ಲಿ ಹುಟ್ಟಿ ಬೆಳೆದ ಬಂಟರ ಹುಡುಗ ಇಂಜಿನಿಯರ್ ಪದವಿ ಪಡೆದು ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಬಳಿಕ ಅದನ್ನು ಬಿಟ್ಟು ಚಿತ್ರರಂಗ ಪ್ರವೇಶಿಸಿದರು.

‘ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’ ಚಿತ್ರದಲ್ಲಿ ನಟಿಸಿ ಗೆದ್ದ ರಕ್ಷಿತ್ ಮುಂದೆ ಸಿಂಪಲ್ ಸ್ಟಾರ್ ಅಂತ್ಲೇ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದರು. ಸೋಲು ಗೆಲುವಿನ ಲೆಕ್ಕ ಇಟ್ಟುಕೊಳ್ಳದೇ ಬಹಳ ಚೂಸಿಯಾಗಿ ಸಿನಿಮಾಗಳನ್ನು ಮಾಡುತ್ತಾ ಬಂದರು. ತಮ್ಮದೇ ಒಂದು ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡರು.

ತೆಲುಗು ಚಿತ್ರದಲ್ಲಿ ನಟಿಸ್ತೀರಾ ಅನ್ನೋ ಪ್ರಶ್ನೆಗೆ ಇವರ ಉತ್ತರ ಹೇಗಿತ್ತು ಗೊತ್ತಾ…?

ನಾನು ನಿರ್ದೇಶನ ಮಾಡಿ ನಟಿಸಿ ಬಹಳ ವರ್ಷಗಳಾಯಿತು. ನಾನು ಸಿದ್ಧ ಮಾಡಿಕೊಂಡಿರುವ ಸ್ಕ್ರಿಪ್ಟ್‌ಗಳನ್ನು ಸಿನಿಮಾ ಮಾಡಬೇಕು. ಅದನ್ನೆಲ್ಲಾ ಮುಗಿಸಿದ ಮೇಲೆ ಬೇರೆ ಸಿನಿಮಾಗಳ ಬಗ್ಗೆ ಆಲೋಚಿಸುತ್ತೀನಿ. ತೆಲುಗಿನಿಂದ ಬಹಳ ಆಫರ್‌ಗಳು ಬರುತ್ತಿದೆ”. ಸದ್ಯಕ್ಕೆ ನಾನು ಸಿನಿಮಾವನ್ನು ಬಹಳ ಭಿನ್ನವಾಗಿ ನೋಡುತ್ತಿದ್ದೇನೆ. ನನ್ನ ಮುಂದಿನ ಸಿನಿಮಾಗಳು ನನಗೆ ಬಹಳ ಮುಖ್ಯ. 4 ಸಿನಿಮಾಗಳು ಮಾಡುತ್ತಿದ್ದೇನೆ. ಅವು ನನಗೆ ನಿದ್ದೆ ಮಾಡಲು ಬಿಡುತ್ತಿಲ್ಲ. ಅಷ್ಟರಮಟ್ಟಿಗೆ ಕಾಡುತ್ತಿವೆ. ಅದನ್ನೆಲ್ಲಾ ಮುಗಿಸಿದ ಮೇಲೆ ತೆಲುಗು ಚಿತ್ರದಲ್ಲಿ ನಟಿಸಬಹುದು” ಎಂದಿದ್ದಾರೆ.

ರಕ್ಷಿತ್ ಶೆಟ್ಟಿ ಮುಂದಿನ ಪ್ಲಾನ್ ಏನು..?

‘ಸಪ್ತಸಾಗರದಾಚೆ ಎಲ್ಲೋ’ ಸರಣಿ ಬಳಿಕ 4 ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ. ಎಲ್ಲದಕ್ಕೂ ಕತೆ ಚಿತ್ರಕತೆ ಸಿದ್ಧಪಡಿಸುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಶೀಘ್ರದಲ್ಲೇ ‘ರಿಚರ್ಡ್ ಆಂಟನಿ’ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಬಳಿಕ ‘ಪುಣ್ಯಕೋಟಿ’ ಭಾಗ-1, ಭಾಗ-2 ಬಳಿಕ ‘ಮಿಡ್‌ನೈಟ್ ಮೋಕ್ಷ’ ಚಿತ್ರಕ್ಕೆ ಕೈ ಹಾಕಲಿದ್ದಾರೆ.