ಅಯೋಧ್ಯಾ ರಾಮಮಂದಿರದ ಲೈಟಿಂಗ್ ಹೊಣೆ ಕರಾವಳಿಯ ರಾಜೇಶ್ ಶೆಟ್ಟಿಗೆ – ತುಳುನಾಡಿನ ಯುವಕನಿಗೆ ಮಹತ್ವದ ಜವಾಬ್ದಾರಿ!

ನ್ಯೂಸ್ ಆ್ಯರೋ : ಸುಂದರ ಬದುಕನ್ನು ಕಟ್ಟಿಕೊಳ್ಳುವ ಕನಸಿನೊಂದಿಗೆ ಬೆಂಗಳೂರು ಸೇರಿದ ಕರಾವಳಿಯ ಯುವಕನಿಗೆ ಅಲ್ಲಿ ಎದುರಾದದ್ದೆಲ್ಲವೂ ಸಾಲು ಸಾಲು ಸವಾಲುಗಳು. ಆದರೆ ಬದುಕಿನ ಛಲ ಮಾತ್ರ ಒಂದಿಂಚೂ ಕುಂದಲಿಲ್ಲ. ನಿರಂತರ ಪ್ರಯತ್ನ, ಒದ್ದಾಟದ ನಡುವೆಯೂ ಕೂಡ ಶ್ರಮಕ್ಕೆ ಬೆಲೆ ಸಿಕ್ಕಿಯೇ ಬಿಟ್ಟಿತು. ಕಂಪೆನಿಯೊಂದರಲ್ಲಿ ಟೆಕ್ನಿಶಿಯನ್ ಆಗಿ ದುಡಿಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಯುವಕ ಮುಂದೆ ತಮ್ಮದೇ ಸ್ವಂತ‌ ಕಂಪೆನಿ ಕಟ್ಟಿ ಯಶಸ್ವಿಯಾದರು.

ಸದ್ಯ, ಇವರ ಕಂಪೆನಿ ರಜತ ಸಂಭ್ರಮದಲ್ಲಿರುವಾಗಲೇ ದೇಶದ ಐತಿಹಾಸಿಕ‌ ನಿರ್ಮಾಣ ಎನಿಸಿಕೊಂಡಿರುವ ರಾಮ ಮಂದಿರದ ಸಮಗ್ರ ಎಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಜವಾಬ್ದಾರಿ ಇವರಿಗೆ ಲಭಿಸಿದೆ.

ಸುಲಭವಾಗಿರಲಿಲ್ಲ ಈ ಛಲಗಾರನ ಬದುಕು!

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಹುಟ್ಟಿ ಬೆಳೆದ ಆರ್.ರಾಜೇಶ್ ಶೆಟ್ಟಿ ಅವರು ಸಾಫ್ಟ್‌ವೇರ್‌ ಎಂಜಿನಿಯರಿಂಗ್ ಆಗಬೇಕೆಂಬ ಕನಸಿನೊಂದಿಗೆ ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಶಿಕ್ಷಣ ಪೂರೈಸಿ ಅಲ್ಲೇ ಟೆಕ್ನೀಶಿಯನ್ ಆಗಿ ಬದುಕು ಕಟ್ಟಿಕೊಳ್ಳಲು ಒದ್ದಾಡಿದ್ದರು.

ಈ ನಡುವೆ ಕೆಲಸ ಮಾಡುತ್ತಿದ್ದ ಕಂಪೆನಿಯ ಒತ್ತಡವೂ ಹೆಚ್ಚಾಯಿತು. ಈ ನಡುವೆ ಸವಾಲುಗಳನ್ನು ಮೀರಿ ರಾಜೇಶ್ ಸ್ವಂತ ಕಂಪೆನಿಯನ್ನು‌ ಕಟ್ಟಿಯೇ ಬಿಟ್ಟರು. ಅಂದು ಒತ್ತಡಕ್ಕೆ ಸಿಲುಕಿ ಸ್ಥಾಪಿಸಿದ್ದ ಶಂಕರ್ ಹೆಸರಿನ ಸಂಸ್ಥೆ ಇಂದು ಶಂಕರ್ ಎಲೆಕ್ಟ್ರಿಕಲ್ಸ್ ಸರ್ವೀಸಸ್‌ ಇಂಡಿಯಾ ಪ್ರೈ.ಲಿ ಎಂಬ ಬೃಹತ್ ಸಂಸ್ಥೆಯಾಗಿ ಬೆಳೆದಿದ್ದು, ಅಮೆಜಾನ್, ಗೂಗಲ್, ಯಾಹೂ, ಮೈಕ್ರೋಸಾಫ್ಟ್ ಹೀಗೆ ಬೆಂಗಳೂರು ಮಾತ್ರವಲ್ಲ, ಚೆನ್ನೈ, ಹೈದರಾಬಾದ್, ಮುಂಬೈ ಹೀಗೆ 400ಕ್ಕೂ ಅಧಿಕ ದೊಡ್ಡ ಕಂಪನಿಗಳ ಎಲೆಕ್ಟ್ರಿಕಲ್ ನಿರ್ವಹಣೆಯಲ್ಲಿ ಟಾಪರ್ ಆಗಿದೆ. ವಾರ್ಷಿಕ 500 ಕೋಟಿ ರೂ.ನಷ್ಟು ವ್ಯವಹಾರವನ್ನೂ ನಡೆಸುತ್ತಿದೆ.

ರಾಮಮಂದಿರದ ಜವಾಬ್ದಾರಿ ಸಿಕ್ಕಿದ್ದು ಹೇಗೆ?

ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಪೂರ್ಣ ಹೊಣೆಗಾರಿಕೆ ಇರುವುದು ಅಲ್ಲಿನ ಶ್ರೀ ರಾಮ ಜನ್ಮ ಭೂಮಿ ಟ್ರಸ್ಟ್ ಹಾಗೂ ಟಾಟಾ ಅವರ ಟಿಸಿಎಸ್ ಸಂಸ್ಥೆಗೆ. ಟಾಟಾ ಅವರ ಉಪ ಸಂಸ್ಥೆ ಟಿಸಿಎಸ್ ಎಂಜಿನಿಯರಿಂಗ್ ಸಂಸ್ಥೆಗೆ ರಾಜೇಶ್ ಶೆಟ್ಟಿ ಅವರ ಸಾಮರ್ಥ್ಯ, ಸಾಧನೆ ಚಿರಪರಿಚಿತ. ಹಾಗಾಗಿಯೇ ಅಯೋಧ್ಯೆಯ ಮಂದಿರದ ಎಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಜವಾಬ್ದಾರಿ ರಾಜೇಶ್ ಅವರಿಗೆ ಕೊಡಬಾರದೇಕೆ ಎನ್ನುವ ಯೋಚನೆ ಹೊಳೆದದ್ದೇ ಇವರ ಹೆಸರನ್ನು ಟಿಸಿಎಸ್‌ಗೆ ಕಳುಹಿಸಲಾಗಿತ್ತು.

ಇವರಿಗೆ ಅಯೋಧ್ಯೆ ಶ್ರೀ ರಾಮ ಮಂದಿರದ ಎಲೆಕ್ಟ್ರಿಕಲ್ ವ್ಯವಸ್ಥೆಯ ಜವಾಬ್ದಾರಿ ಕಳೆದ ಜನವರಿಯಲ್ಲಿ ದೊರೆಯಿತು. ಮೊದಲ ಹಂತದಲ್ಲಿ ಗರ್ಭಗುಡಿಯ ಲೈಟಿಂಗ್ ವ್ಯವಸ್ಥೆಗೆ ಆದ್ಯತೆ ನೀಡಲಾಗಿದ್ದು, ಡಿಸೆಂಬರ್‌ 2025ರೊಳಗೆ ಸಂಪೂರ್ಣ ವಿದ್ಯುದ್ದೀಕರಣ ಕಾರ್ಯ ಮುಗಿಸಿಕೊಡಬೇಕು. ಆ ನಂತರದ ನಿರ್ವಹಣೆಯ ಜವಾಬ್ದಾರಿಯೂ ರಾಜೇಶ್ ಬಳಗದ ಪಾಲಿಗೆ ದೊರೆತಿದೆ. ಇದೀಗ 150 ರಿಂದ 200 ಮಂದಿಯ ತಂಡ ಅಯೋಧ್ಯೆಯ ಮಂದಿರದ ಆವರಣದಲ್ಲಿ ಕಾರ್ಯನಿರತವಾಗಿದ್ದು, ಇವರ ತಂಡದಲ್ಲಿ ಹೆಚ್ಚಿನವರು ಕರಾವಳಿ‌ ಜಿಲ್ಲೆಯವರು ಎಂಬುದು ಗಮನಾರ್ಹ ಸಂಗತಿ.

ವರ್ಷಕ್ಕೊಮ್ಮೆ ತಾನು ಹುಟ್ಟಿ ಬೆಳೆದ ತುಳುನಾಡಿಗೆ ಆಗಮಿಸುವ ರಾಜೇಶ್ ಶೆಟ್ಟಿ ಊರ ದೈವಗಳ ಸೇವೆಯನ್ನು‌ ಕೂಡ ಶಿಸ್ತಿನಿಂದ ಮಾಡುತ್ತಾರೆ. ಸದ್ಯ, ರಾಜೇಶ್ ಶೆಟ್ಟಿ ಅವರಿಗೆ ಅಯೋಧ್ಯಾ ರಾಮಮಂದಿರಕ್ಕೆ ಲೈಟಿಂಗ್ ಜವಾಬ್ದಾರಿ ಲಭಿಸಿದ್ದು ಕರಾವಳಿ ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿ.