
ವೈದ್ಯಕೀಯ ಇತಿಹಾಸದಲ್ಲೇ ಮೊದಲು -ಮಹಿಳೆ ಮೆದುಳಿನಲ್ಲಿ ಸೇರಿಕೊಂಡಿತ್ತು 8 ಸೆಂಟಿ ಮೀಟರ್ ಉದ್ದದ ಜೀವಂತ ಹುಳ, ಮುಂದೇನಾಯ್ತು?
- ಅಂತಾರಾಷ್ಟ್ರೀಯ ಸುದ್ದಿ
- August 30, 2023
- No Comment
- 48
ನ್ಯೂಸ್ ಆ್ಯರೋ : ಮಾನಸಿಕ ಖಿನ್ನತೆ ಮತ್ತು ನೆನಪಿನ ಶಕ್ತಿ ಕಳೆದುಕೊಂಡಿದ್ದ 64ರ ಹರೆಯದ ಮಹಿಳೆಯನ್ನು ಪರೀಕ್ಷಿಸಿದ ಆಸ್ಟ್ರೇಲಿಯಾದ ವೈದ್ಯರಿಗೆ ಶಾಕ್ ಕಾದಿತ್ತು. ಯಾಕೆಂದರೆ ಮಹಿಳೆಯ ಮೆದುಳಿನಲ್ಲಿ 8 ಸೆಂಟಿ ಮೀಟರ್ ಉದ್ದದ ಜೀವಂತ ಹುಳವೊಂದು ಪತ್ತೆಯಾಗಿದೆ..!
ಇದೇ ಮೊದಲು
ಇಂತಹ ಪ್ರಕರಣ ವೈದ್ಯಕೀಯ ಇತಿಹಾಸದಲ್ಲೇ ಮೊದಲು ಎನ್ನಲಾಗುತ್ತಿದೆ. ಕ್ಯಾನ್ ಬೆರಾದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಮಹಿಳೆಯ ಮೆದುಳಿನಲ್ಲಿ ಸೇರಿಕೊಂಡು ಜೀವಂತವಾಗಿದ್ದ ಪರಾಬಲಂಬಿ ಹುಳವನ್ನು ವೈದ್ಯರು ಹೊರ ತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೀವ್ರ ಸಮಸ್ಯೆ
ಒಣ ಕಫ, ಜ್ವರ, ರಾತ್ರಿ ಬೆವರುವುದು, ಹೊಟ್ಟೆ ನೋವು, ಅತಿಸಾರ ಸಮಸ್ಯೆಗಳಿಂದ ಬಳಲುತ್ತಿದ್ದ ಅಗ್ನೇಯ ಸೌತ್ ವೇಲ್ಸ್ ನ ಮಹಿಳೆ 2021ರ ಜನವರಿ ಕೊನೆ ವಾರದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. 2022ರ ವೇಳೆಗೆ ಅವರ ರೋಗ ಲಕ್ಷಣ ಬದಲಾಗಿ ಮರೆವು, ಖಿನ್ನತೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಕ್ಯಾನ್ ಬೆರಾದಲ್ಲಿರುವ ಆಸ್ಪತ್ರೆಗೆ ಕರೆತರಲಾಗಿತ್ತು.
ಮೆದುಳಿನ ಎಂ.ಆರ್.ಐ. ಸ್ಕ್ಯಾನ್ ವೇಳೆ ಕೆಲವು ಅಸಹಜ ಬೆಳವಣಿಗೆ ಕಂಡು ಬಂದಿತ್ತು. ಭಾರತೀಯ ಮೂಲದ ಡಾ.ಹರಿಪ್ರಿಯಾ ಮತ್ತು ಡಾ.ಸಂಜಯ್ ಸೇನಾ ನಾಯಕ್ ಇನ್ನಷ್ಟು ಅಧ್ಯಯನ ನಡೆಸಿ ಹುಳವನ್ನು ಪತ್ತೆ ಹಚ್ಚಿದರು. ಮೆದುಳಿನಲ್ಲಿ ಈ ರೀತಿಯ ಹುಳಗಳು ಇರುತ್ತವೆ ಎನ್ನುವ ಬಗ್ಗೆ ಯಾವುದೇ ಮೆಡಿಕಲ್ ಪಠ್ಯ ಪುಸ್ತಕದಲ್ಲಾಗಲಿ ಅಥವಾ ಕೇಸ್ ಸ್ಟಡಿಯಲ್ಲಾಗಲೀ ಉಲ್ಲೇಖವಿಲ್ಲದ ಕಾರಣ ಈ ಕೇಸ್ ಗಮನ ಸೆಳೆದಿತ್ತು.
”ಒಫಿಡಾಸ್ಕರ್ ರಾಬಟ್ರ್ಸಿ ನೆಮಟೋಡ್ ಜಾತಿಗೆ ಸೇರಿದ ಮೂರನೇ ಹಂತದ ಲಾರ್ವಾ ಇದಾಗಿದೆ. ವೈದ್ಯಕೀಯ ಇತಿಹಾಸದಲ್ಲಿ ದಾಖಲಾದ ಮೊದಲ ಕೇಸ್ ಇದಾಗಿದೆ. ಸಾಮಾನ್ಯವಾಗಿ ಈ ಪರಾವಲಂಬಿ ಹುಳ ನ್ಯೂ ಸೌತ್ ವೇಲ್ಸ್ ನಲ್ಲಿ ಕಾಣ ಸಿಗುವುದು ಹೆಬ್ಬಾವುಗಳ ಜಠರ ಕರುಳಿನಲ್ಲಿ. ಆದರೆ ಮನುಷ್ಯರಲ್ಲಿ ಕಂಡು ಬಂದಿದ್ದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಲಿದೆ” ಎಂದು ಡಾ. ಸೇನಾ ನಾಯಕ್ ಹೇಳಿದ್ದಾರೆ.