
ರೇಷನ್ ಕಾರ್ಡ್ ತಿದ್ದುಪಡಿ’ಗೆ ಮತ್ತೆ ಅವಕಾಶ ನೀಡಿದ ರಾಜ್ಯ ಸರ್ಕಾರ – ಈ ಸೇವೆ ಲಭ್ಯವಿರೋದು ಕೆಲವೇ ದಿನ, ಲಾಸ್ಟ್ ಡೇಟ್ ಯಾವಾಗ ಗೊತ್ತಾ?
- ಸರ್ಕಾರಿ ಸೇವೆಗಳು
- September 4, 2023
- No Comment
- 125
ನ್ಯೂಸ್ ಆ್ಯರೋ : ರಾಜ್ಯದಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ ದೊರಕುವ ‘ಗೃಹ ಲಕ್ಷ್ಮಿ’ ಯೋಜನೆ ಜಾರಿಗೆ ಬಂದಿರುವ ನಡುವೆಯೇ ಸರ್ಕಾರ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಸೆ.1ರಿಂದ ಅವಕಾಶ ಕಲ್ಪಿಸಿದೆ.
ಹೌದು.. ರೇಷನ್ ಕಾರ್ಡ್‌ನಲ್ಲಿ ಪುರುಷರು ಮುಖ್ಯಸ್ಥರಾಗಿದ್ದರಿಂದ ಮಹಿಳೆಯರಿಗೆ ಸರ್ಕಾರ ನೀಡುತ್ತಿರುವ 2000 ರೂ. ಗೃಹಲಕ್ಷ್ಮೀ ಯೋಜನೆಯಿಂದ ಹಲವರು ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆ ಮುಖ್ಯಸ್ಥರ ಹೆಸರು ಬದಲಾವಣೆಗೆ ಸೆ.1 ಅವಕಾಶ ಕಲ್ಪಿಸಿದ್ದು, ಸೆ.10ರವರೆಗೆ ಈ ಸೇವೆ ಲಭ್ಯವಿರಲಿದೆ. ಈ ಮೂಲಕ ಮನೆ ಮುಖ್ಯಸ್ಥೆಯಾಗಿ ಮಹಿಳೆಯರ ಹೆಸರನ್ನು ಬದಲಾಯಿಸಲು ಅವಕಾಶ ನೀಡಿರುವ ಸರ್ಕಾರ, ಹೆಸರು ತಿದ್ದುಪಡಿ ಹಾಗೂ ಹೆಸರು ಕೈಬಿಡಲು ಅಷ್ಟೇ ಅವಕಾಶ ನೀಡಿದೆ.
ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು. ವಯಸ್ಕ ಮಹಿಳೆ ಮುಖ್ಯಸ್ಥರಿದ್ದರೆ ಮಾತ್ರ ಬಿಪಿಎಲ್ ಸೌಲಭ್ಯ ದೊರಕಲಿದೆ. ಇನ್ನೊಂದೆಡೆ ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನಕ್ಕಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತಿತರೆ ದಾಖಲೆಗಳನ್ನು ಹಿಡಿದು ಸೇವಾ ಕೇಂದ್ರ ಹಾಗೂ ಸರಕಾರಿ ಕಚೇರಿಗಳ ಮುಂದೆ ಅಲೆದಾಡುತ್ತಿದ್ದಾರೆ.
ಹೀಗಾಗಿ ಪಡಿತರ ಚೀಟಿಯ ತಪ್ಪುಗಳನ್ನು ತಿದ್ದುಪಡಿ ಮಾಡಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾದ ಅವಕಾಶ ಒದಗಿ ಬಂದಿದ್ದು, ರೇಷನ್ ಕಾರ್ಡ್ ನಲ್ಲಿರುವ ಹೆಸರು ಬದಲಾವಣೆ, ಆಧಾರ್ ಕಾರ್ಡ್ ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರು ಸೇರಿಸುವುದು, ಯಾರಾದರೂ ಮೃತಪಟ್ಟರೆ ಅಂಥವರ ಹೆಸರು ಡಿಲೀಟ್, ಬೇರೆ ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆ ಮಾಡಲು ಆಹಾರ ಇಲಾಖೆ ಅವಕಾಶ ಕೊಟ್ಟಿದೆ. ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಓನ್ ಹಾಗೂ ಕರ್ನಾಟಕ ಓನ್ ಸೇರಿ ಇತರ ಕಡೆಗಳಲ್ಲಿ ರೇಷನ್ ಕಾರ್ಡ್ ಮಾರ್ಪಾಡು, ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.
ಇನ್ನು ಸದ್ಯದ ಆಹಾರ ಇಲಾಖೆಯ ನಿಯಮದ ಪ್ರಕಾರ ರೇಷನ್ ಕಾರ್ಡ್‌ನಲ್ಲಿ ಮನೆಯ ಯಜಮಾನ ಎನ್ನುವ ಕಲ್ಪನೆಯನ್ನು ತೆಗೆದು ಹಾಕಲಾಗಿದ್ದು, ‘ಯಜಮಾನಿ’ಗೆ ಅವಕಾಶ ಕಲ್ಪಿಸಲಾಗಿದೆ. ಕುಟುಂಬ ಸದಸ್ಯರ ಪೈಕಿ ಯಾರು ಹಿರಿಯ ಮಹಿಳೆ ಇರುತ್ತಾರೋ ಅವರ ಆಧಾರ್ ಕಾರ್ಡಿನ ವಿವರಗಳನ್ನು ಹಾಕಿದಾಗ ರೇಷನ್ ಕಾರ್ಡ್ ‘ಆಟೊಮ್ಯಾಟಿಕ್’ ಆಗಿ ಹಿರಿಯ ಮಹಿಳೆಯ ಹೆಸರಿಗೆ ‘ರಿಜಿಸ್ಟರ್’ ಆಗುತ್ತಿತ್ತು.
ಇನ್ನು ರೇಷನ್ ಕಾರ್ಡ್‌ಗೆ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಲು ನೀವು ನಿಮ್ಮ ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್ ಅನ್ನು ಹೊಂದಿರಬೇಗುತ್ತದೆ. ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ನೀಡಬೇಕಾಗುತ್ತದೆ.
ಈ ಎರಡು ದಾಖಲೆಗಳು ಇದ್ದರೆ ನೀವು ಆನ್‌ಲೈನ್ ಮುಖಾಂತರ ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಸೇರಿಸಬಹುದು. ಇದಕ್ಕಾಗಿ, ನೀವು https://ahara.kar.nic.in/home ಅಧಿಕೃತ ವೆಬ್ ಸೈಟ್ ಗೆ ಲಾಗ್ ಇನ್ ಆಗಿ. ಲಾಗ್‌ಇನ್ ಮಾಡಿದ ನಂತರ ಮುಖ್ಯ ಪುಟದಲ್ಲಿ ಇ-ಸೇವೆಗಳನ್ನು ಆಯ್ಕೆ ಮಾಡಿ. ಅಲ್ಲಿ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ. ಹೊಸ ಪೇಜ್ ತೆರೆಯುತ್ತದೆ. ಅಲ್ಲಿನ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ.
ಎಲ್ಲ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ಮೀಟ್ ಮಾಡಿ. ಫಾರ್ಮ್ ಸಬ್‌ಮಿಟ್ ಆದ ಬಳಿಕ ನೋಂದಣಿ ಸಂಖ್ಯೆ ಸಿಗುತ್ತದೆ. ಆ ನೋಂದಣಿ ಸಂಖ್ಯೆ ಮೂಲಕ ವೆಬ್‌ಸೈಟ್ ಗೆ ಲಾಗ್‌ಇನ್ ಆಗಬಹುದು ಹಾಗೂ ಫಾರ್ಮ್ ಅನ್ನು ಟ್ರ್ಯಾಕ್ ಮಾಡಬಹುದು. ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನೆಗೆ ಅಪ್‌ಡೇಟ್ ಆಗಿರುವ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ.