Grilahakshmi will be held at each gram panchayat level

ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯಲಿದೆ ‘ಗೃಹಲಕ್ಷ್ಮಿ ಅದಾಲತ್’ – ಗೃಹಲಕ್ಷ್ಮಿ ಯೋಜನೆಯಡಿ ಹಣ ಬರದವರಿಗೆ ಗುಡ್ ನ್ಯೂಸ್..!

ನ್ಯೂಸ್ ಆ್ಯರೋ : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದ ಗ್ಯಾರಂಟಿ‌ಗಳಲ್ಲಿ ‘ಗೃಹಲಕ್ಷ್ಮಿ’ ಯೋಜನೆಯೂ ಒಂದು. ಈ ಯೋಜನೆಯಡಿ ರಾಜ್ಯದ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ನೀಡಲು ಸರ್ಕಾರ ಚಿಂತನೆ ನಡೆಸಿತ್ತು. ಅದರಂತೆ ಯೋಜನೆ ಜಾರಿಯಾಗಿ ಮಹಿಳೆಯರು ಸಂತಸಗೊಂಡಿದ್ದರು. ಆದರೆ ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಹಣ ವರ್ಗಾವಣೆಯಾಗಿಲ್ಲ, ಯೋಜನೆ ಅಸಮರ್ಪಕವಾಗಿದೆ, ಸರ್ಕಾರ ಮಾತು ತಪ್ಪಿದೆ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿದ್ದು, ಕೆಲವೊಂದು ತಾಂತ್ರಕ ಸಮಸ್ಯೆಗಳಿಂದಾಗಿ ಫಲಾನುಭವಿಗಳಿಗೆ ಹಣ ದೊರೆಯುತ್ತಿಲ್ಲ. ಈ ಸಮಸ್ಯೆಗಳನ್ನು ಹೋಗಲಾಡಿಸಿ ‘ಗೃಹಲಕ್ಷ್ಮಿ’ ಗೆ ನೆರವಾಗಲು ಸರ್ಕಾರ ಚಿಂತನೆ‌ನಡೆಸಿದ್ದು, ಗುಡ್ ನ್ಯೂಸ್ ನೀಡಿದೆ.

ನಡೆಯಲಿದೆ ಗೃಹಲಕ್ಷ್ಮಿ ಅದಾಲತ್!

ಗೃಹಲಕ್ಷ್ಮಿ ಯೋಜನೆಯಡಿ‌ ಹಣ ಬರದೇ ಇದ್ದರೆ ಇನ್ನು‌ ಮಹಿಳೆಯರು ಚಿಂತಿಸಬೇಕಾಗಿಲ್ಲ. ಗೃಹಲಕ್ಷ್ಮಿ ಯೋಜನೆಯ ಯಾವುದೇ ಸಮಸ್ಯೆಗಳನ್ನು ಇನ್ನು‌ ಮುಂದೆ ತಮ್ಮ ಗ್ರಾಮದ ಪಂಚಾಯತ್ ನಲ್ಲಿ ಬಗೆಹರಿಸಿಕೊಳ್ಳಲು ಸರ್ಕಾರ ಅದಾಲತ್ ನಡೆಸಲು ಯೋಜನೆ ರೂಪಿಸಿದೆ‌.

ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ‘ಗೃಹಲಕ್ಷ್ಮಿ ಫಲಾನುಭವಿಗಳು ಬಿಟ್ಟು ಹೋಗಿದ್ದಲ್ಲಿ ಅಥವಾ ಬ್ಯಾಂಕ್‌ ಖಾತೆ ಆಧಾರ್‌ ಲಿಂಕ್‌ ಮತ್ತಿತರ ಸಮಸ್ಯೆಗಳಿಗೆ ಸಂಬಂಧಿ ಸಿದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹ ಲಕ್ಷ್ಮಿ ಅದಾಲತ್‌ ಆಯೋಜಿಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ’ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಜವಾಬ್ದಾರಿ!

ಇನ್ನು, ಡಿಸೆಂಬರ್‌ ಒಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ನಗದು ವರ್ಗಾವಣೆಯನ್ನು ಖಾತರಿ ಪಡಿಸಿಕೊಳ್ಳಬೇಕು. ಯಾವುದೇ ಹೆಸರು ಬಿಟ್ಟು ಹೋಗಿದ್ದರೆ ಇಲ್ಲವೇ ಹಣ ಜಮೆಯಾಗದೇ ಇದ್ದರೆ ಪರಿಶೀಲಿಸಿಕೊಳ್ಳಬೇಕು.

ನವೆಂಬರ್‌ ತನಕ 1.17 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದು, 1.10 ಕೋಟಿ ಫಲಾನುಭವಿಗಳಿಗೆ ನೆರವು ವರ್ಗಾವಣೆ ಮಾಡಲಾಗಿದೆ. 2 ಲಕ್ಷ ಫಲಾನುಭವಿಗಳಿಗೆ ಸಂಬಂಧಿಸಿದ ತೊಡಕು ನಿವಾರಿಸಲಾಗುತ್ತಿದೆ. ಖಾತೆಯ ಮಾಹಿತಿಯಲ್ಲಿ ಗೊಂದಲ, ಆಧಾರ್‌ ಲಿಂಕ್‌ ಆಗದಿರುವುದು ಮೊದಲಾದ ಕಾರಣಗಳಿಂದ ಹಣ ವರ್ಗಾವಣೆಗೆ ತೊಡಕಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳನ್ನು ಬ್ಯಾಂಕಿಗೇ ಕರೆದೊಯ್ದು ಸಮಸ್ಯೆ ಬಗೆಹರಿಸಬೇಕು’ ಎಂದು ಸಚಿವೆ ಸೂಚಿಸಿದ್ದಾರೆ.

ಸಿಎಂ ಖಡಕ್ ಸೂಚನೆ!

ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ‘ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡ ಶೀಘ್ರವೇ ಅವುಗಳನ್ನು ಪರಿಹರಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಎಲ್ಲ ಅರ್ಹ ಫಲಾನುಭವಿಗಳಿಗೆ ನೆರವು ಸಿಗುವಂತೆ ಕ್ರಮ ಕೈಗೊಳ್ಳಬೇಕು. ಗೃಹಲಕ್ಷ್ಮಿ ಯೋಜನೆಯಡಿ ಹಣ ಬಂದಿಲ್ಲ ಎನ್ನುವ ದೂರು ಬಾರದಂತೆ ನೋಡಿಕೊಳ್ಳಿ’ ಎಂದು ಖಡಕ್ ಸೂಚನೆ ನೀಡಿದ್ದಾರೆ.