Shruthi Hasan : ತನಗಿದ್ದ ಕೆಟ್ಟ ಚಟದ ಬಗ್ಗೆ ಬಾಯ್ಬಿಟ್ರು ನಟಿ ಶೃತಿ ಹಾಸನ್ – ಡ್ರಗ್ಸ್ ಬಗ್ಗೆ ಕೊನೆಗೂ ಮೌನ ಮುರಿದ್ರು…!

ನ್ಯೂಸ್ ಆ್ಯರೋ : ಕಾಲಿವುಡ್‌ನ ಸೂಪರ್‌ಸ್ಟಾರ್‌ ಕಮಲ್‌ ಹಾಸನ್‌ ಅವರ ಹಿರಿ ಮಗಳು ಶ್ರುತಿ ಹಾಸನ್‌, ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಜತೆಗೆ ಬಾಯ್‌ಫ್ರೆಂಡ್‌ ವಿಚಾರದಲ್ಲೂ ಅವರು ಆಗಾಗ ಮುನ್ನೆಲೆಗೆ ಬರುತ್ತಿರುತ್ತಾರೆ. ಈ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ಸಲಾರ್‌ ಸಿನಿಮಾ ಬಿಡುಗಡೆ ಆಗಲಿದೆ. ಆ ಬಗ್ಗೆಯೂ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಹೀಗೆ ಸಂದರ್ಶನದ ವೇಳೆಯೇ ತಮ್ಮ ಬಹುಕಾಲದ ಚಟದ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಸಿನಿಮಾರಂಗದಲ್ಲಿ ಆಗಾಗ ಡ್ರಗ್ಸ್‌ ಘಾಟು ಮೂಗಿಗೆ ಅಡರುತ್ತಿರುತ್ತದೆ. ಡ್ರಗ್ಸ್‌ ಸೇವನೆ ಸೇರಿ ಮಾದಕ ವಸ್ತು ಮಾರಾಟ ಜಾಲಗಳಲ್ಲೂ ಸೆಲೆಬ್ರಿಟಿಗಳು ಸಿಲುಕಿದ ಉದಾಹರಣೆಗಳಿವೆ. ಕೆಲ ದಿನಗಳ ಹಿಂದಷ್ಟೇ ತೆಲುಗು ಚಿತ್ರರಂಗದಲ್ಲಿ ಅತಿಯಾದ ಡ್ರಗ್ಸ್‌ ಬಳಕೆ ನಡೆಯುತ್ತಿದೆ ಎಂದೂ ವರದಿಯಾಗಿತ್ತು. ಇದೀಗ ನಟಿ ಶ್ರುತಿ ಹಾಸನ್‌ ಸಹ ಆ ಬಗ್ಗೆ ಮಾತನಾಡಿದ್ದಾರೆ. ತಾವೂ ವ್ಯಸನಿಯಾಗಿದ್ದ ದಿನಗಳನ್ನು ನೆನೆದಿದ್ದಾರೆ.

‘ಮದ್ಯ ಸೇವನೆ’ ಬಗ್ಗೆ ನಟಿ ಏನಂದ್ರು ಗೊತ್ತಾ..?

“ಒಂದು ಟೈಮ್‌ನಲ್ಲಿ ನಾನು ಕುಡಿತದ ದಾಸಳಾಗಿದ್ದೆ. ಅದ್ಯಾವ ಮಟ್ಟಿಗೆ ಎಂದರೆ, ಸ್ನೇಹಿತರ ಜತೆ ಸೇರಿದರೆ, ಎಣ್ಣೆ ಹೊಡೆಯುವುದೇ ಕೆಲಸವಾಗಿತ್ತು. ಸದಾ ಅದೇ ಗುಂಗಲ್ಲಿ ಇರುತ್ತಿದ್ದೆ. ನಾನು ಕೇವಲ ಆಲ್ಕೋಹಾಲ್‌ ಮಾತ್ರ ಸೇವಿಸುತ್ತಿದ್ದೆ ವಿನಃ ಡ್ರಗ್ಸ್‌ ತಗೋತಿರಲಿಲ್ಲ.

ಈಗ ಕುಡಿತ ಬಿಟ್ಟೇ ಎಂಟು ವರ್ಷಗಳು ಕಳೆದಿವೆ. ಮದ್ಯ ಬಿಟ್ಟಿದ್ದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವೂ ಇಲ್ಲ. ಮದ್ಯಪಾನ ತ್ಯಜಿಸಿದ ಬಳಿಕ ನಾನು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇನೆ. ಆದರೆ ನೀವು ಮದ್ಯಪಾನ ಮಾಡದಿದ್ದರೆ, ಪಾರ್ಟಿಯಲ್ಲಿ ನಿಮ್ಮ ಆಪ್ತರನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಿದ್ದರೂ ನಾನು ಕುಡಿತದ ಕಡೆ ಮತ್ತೆ ಮುಖ ಮಾಡಿಲ್ಲ. ಒಂದೇ ಒಂದು ಬಾರಿಯೂ ನಾನು ಡ್ರಗ್ಸ್‌ ತೆಗೆದುಕೊಂಡಿಲ್ಲ” ಎಂದಿದ್ದಾರೆ.

ಕುಡಿವ ಸ್ನೇಹಿತರಿಂದ ಅಂತರ ಕಾಯ್ದುಕೊಳ್ಳಿ..

ಕುಡಿತ ಮತ್ತು ಪಾರ್ಟಿಗಳಿಗೆ ವ್ಯಸನಿಯಾಗಿದ್ದ ದಿನಗಳ ಬಗ್ಗೆ ಮಾತನಾಡಿದ ಶ್ರುತಿ, “ನಾನು ಎಂದಿಗೂ ಡ್ರಗ್ಸ್ ಸೇವಿಸಿಲ್ಲ. ಆದರೆ ಮದ್ಯಪಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೆ. ನಾನು ಯಾವಾಗಲೂ ನನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಮತ್ತು ಕುಡಿಯಲು ಬಯಸುತ್ತಿದ್ದೆ. ಸ್ವಲ್ಪ ಸಮಯದ ನಂತರ ನಾನು ತುಂಬಾ ಮದ್ಯಪಾನ ಮಾಡಲು ಪ್ರಾರಂಭಿಸಿದೆ ಎಂದು ನನಗೇ ತಿಳಿಯಿತು.

ಮದ್ಯ ಸೇವನೆಗೆ ಪ್ರೋತ್ಸಾಹ ನೀಡುತ್ತಿದ್ದವರಿಂದ ದೂರವಿರಲು ಆರಂಭಿಸಿದೆ. ನಿಧಾನಕ್ಕೆ ಅದರಿಂದ ಹೊರಬಂದೆ” ಎಂದಿದ್ದಾರೆ. ಒಟ್ಟಾರೆಯಾಗಿ ತನ್ನ ಜೀವನದ ತಪ್ಪು ಘಟನೆಗಳ ಬಗ್ಗೆ ಮೆಲುಕು ಹಾಕಿರುವ ನಟಿ ಯುವಜನತೆಗೆ ಮದ್ಯ, ಡ್ರಗ್ಸ್ ಸೇವನೆಯಿಂದ ದೂರವಿರಿ ಎಂಬ ಸಂದೇಶವನ್ನು ನೀಡಿದ್ದಾರೆ.