ಮೊದಲ ಕಮರ್ಷಿಯಲ್ ವಿಮಾನ ತಯಾರಿಸಿದ ಚೀನಾ – 164 ಸೀಟ್ ಸಾಮರ್ಥ್ಯದ ಚೀನಾ ವಿಮಾನ ಯಶಸ್ವಿ ಹಾರಾಟ
- ಅಂತಾರಾಷ್ಟ್ರೀಯ ಸುದ್ದಿ
- May 29, 2023
- No Comment
- 270
ನ್ಯೂಸ್ ಆ್ಯರೋ : ಚೀನಾ ಸದಾ ಏನಾದರೊಂದು ಸಂಶೋಧನೆಯಲ್ಲಿ ತೊಡಗಿರುತ್ತದೆ. ಬಾಹ್ಯಾಕಾಶದಿಂದ ಹಿಡಿದು ವಾಹನದವರೆಗೆ ಅನ್ವೇಷಣೆ ಮಾಡಿಕೊಂಡೇ ಇರುತ್ತದೆ. ಇದೀಗ ದೇಶೀಯವಾಗಿ ನಿರ್ಮಿಸಿದ ಚೀನಾದ ಪ್ರಯಾಣಿಕ ವಿಮಾನ ಸಿ919 ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.
ಈ ವಿಮಾನ ಶಾಂಘೈ ಏರ್ಪೋರ್ಟ್ನಿಂದ ಬೆಳಗ್ಗೆ 10:32ಕ್ಕೆ ಹೊರಟು ಬೀಜಿಂಗ್ ಏರ್ಪೋರ್ಟ್ ಅನ್ನು ಮಧ್ಯಾಹ್ನ 12:31ಕ್ಕೆ ತಲುಪಿತು. ಈ ಹಾರಾಟದಲ್ಲಿ ಯಾವ ತೊಂದರೆಯೂ ಎದುರಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೀನಾದ ಕಮರ್ಷಿಯಲ್ ಏರ್ಕ್ರಾಫ್ಟ್ ಕಾರ್ಪೊರೇಶನ್ (COMAC- Commercial Aircraft Corporation of China) ಈ ವಿಮಾನವನ್ನು ಅಭಿವೃದ್ಧಿಪಡಿಸಿದ್ದು, ಕಳೆದ ವರ್ಷದ ಸೆಪ್ಟಂಬರ್ ನಲ್ಲೇ ಆ ದೇಶದ ನಾಗರಿಕ ವಿಮಾನಯಾನ ಆಡಳಿತವು ಸರ್ಟಿಫಿಕೇಟ್ ಕೊಟ್ಟು ಅನುಮತಿ ನೀಡಿತ್ತು.
ಚೀನಾದ ಸರ್ಕಾರಿ ಸ್ವಾಮ್ಯದ ಚೀನಾ ಈಸ್ಟರ್ನ್ ಏರ್ಲೈನ್ಸ್ಗೆ ಈ ವಿಮಾನ ಸೇರಿದ್ದಾಗಿದೆ. ಅವಳಿ ಎಂಜಿನ್ ಹೊಂದಿರುವ ಈ ವಿಮಾನ 164 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ.
ಚೀನಾದ ಜೊತೆಗೆ ಹಲವು ದೇಶಗಳು ಸ್ವಂತವಾಗಿ ಮಿಲಿಟರಿ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತವೆ. ಆದರೆ ಕಮರ್ಷಿಯಲ್ ವಿಮಾನ ತಯಾರಿಯಲ್ಲಿ ಪ್ರಾಬಲ್ಯ ಇರುವುದು ಪಾಶ್ಚಿಮಾತ್ಯ ದೇಶದ ಬೆರಳೆಣಿಕೆಯ ಕಂಪೆನಿಗಳಿಗೆ. ಇವತ್ತು ಹಾರಾಡುತ್ತಿರುವ ಬಹುತೇಕ ಎಲ್ಲಾ ಪ್ಯಾಸೆಂಜರ್ ವಿಮಾನಗಳು ಬೋಯಿಂಗ್ ಮತ್ತು ಏರ್ಬಸ್ ಕಂಪೆನಿಗಳಿಗೆ ಸೇರಿದ್ದಾಗಿದೆ. ಇಂಥ ಹೊತ್ತಿನಲ್ಲಿ ಚೀನಾದ ಕಂಪೆನಿಯು ಸ್ಪರ್ಧೆಗೆ ಇಳಿದಿದೆ.
ಬಹಳ ವರ್ಷಗಳ ಹಿಂದೆಯೇ ಸಿಒಎಂಎಸಿ ಪ್ಯಾಸೆಂಜರ್ ಏರ್ಕ್ರಾಫ್ಟ್ ಅಭಿವೃದ್ಧಿಗೆ ಇಳಿದಿತ್ತಾದರೂ ವಿವಿಧ ಕಾರಣಗಳಿಂದ ತಡವಾಗಿತ್ತು. ಇದರ ಮೊದಲ ಪ್ರಾಯೋಗಿಕ ಹಾರಾಟ 2017ರಲ್ಲೇ ಆಗಿತ್ತು. ಅದಾದ ಬಳಿಕ ಎಲ್ಲಾ ರೀತಿಯ ಪ್ರತಿಕೂಲ ಹವಾಮಾನದಲ್ಲೂ ಇದರ ಹಾರಾಟ ಪ್ರಯೋಗ ಮಾಡಲಾಗಿದೆ. ಎಲ್ಲಾ ಪರೀಕ್ಷೆಗಳಲ್ಲೂ ಈ ವಿಮಾನ ತೇರ್ಗಡೆಯಾಗಿ ಬಂದು ಈಗ ಮೊದಲ ಕಮರ್ಷಿಯಲ್ ಫ್ಲೈಟ್ ಹಾರಾಟ ನಡೆದಿದೆ.