
ಅನ್ ವೆರಿಫೈಡ್ ಟ್ವಿಟರ್ ಬಳಕೆದಾರರಿಗೆ ಶಾಕ್ – ಪೋಸ್ಟ್, ರಿಟ್ವೀಟ್, ಲೈಕ್ ಗೂ ಇನ್ಮುಂದೆ ಹಣ ಕಟ್ಟಲೇಬೇಕು..!
- ಟೆಕ್ ನ್ಯೂಸ್
- November 20, 2023
- No Comment
- 23
ನ್ಯೂಸ್ ಆ್ಯರೋ : ನಾವು ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ವಿಟರ್ ಕೂಡಾ ಒಂದು. ಆ್ಯಪ್ ಗಳಲ್ಲಿ ಅಥವಾ ಅದು ಕೆಲಸ ಮಾಡುವ ಪ್ರಕ್ರಿಯೆಗಳಲ್ಲಿ ಏನಾದರೊಂದು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಟ್ವಿಟರ್ ಕಂಪೆನಿಯಲ್ಲಿ ಕೂಡಾ ಇತ್ತೀಚೆಗೆ ನಡೆದ ಬೆಳವಣಿಗೆಗಳು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಇದೀಗ ಟ್ವಿಟರ್ ಬಳಕೆದಾರರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಕೇಳಿಬಂದಿದೆ.
ಏನದು ಹೊಸ ಸುದ್ದಿ..?
ಅನ್ ವೆರಿಫೈಡ್ ಟ್ವಿಟರ್ ಬಳಕೆದಾರರು ಇನ್ಮುಂದೆ ಪೋಸ್ಟ್, ಲೈಕ್, ರಿಟ್ವೀಟ್, ರಿಪ್ಲೈ ಒಳಗೊಂಡ ಮುಂತಾದ ಸಂವಹನ ಸೇವೆಗಳಿಗೆ ಪಾವತಿ ಮಾಡಬೇಕಾಗುತ್ತದೆ. ಟ್ವಿಟರ್ ಸಂಸ್ಥೆ ಅನ್ವೆರಿಫೈಡ್ ಬಳಕೆದಾರರಿಗೆ ಪಾವತಿ ಸೇವೆಯನ್ನು ಪರಿಚಯಿಸುತ್ತಿದ್ದು ವರ್ಷಕ್ಕೆ ಒಂದು ಡಾಲರ್ ಪಾವತಿಸಿದರೆ ಮಾತ್ರ ಪೋಸ್ಟ್, ಲೈಕ್, ಕಮೆಂಟ್ ಮಾಡಬಹುದು.
ಈ ಬಗ್ಗೆ ಟ್ವಿಟರ್ ಸಂಸ್ಥೆ ಏನು ಹೇಳುತ್ತೆ..?
ಸದ್ಯ ಈ ಯೋಜನೆ ನ್ಯೂಜಿಲೆಂಡ್ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ಪರೀಕ್ಷಾ ಹಂತದಲ್ಲಿದೆ. ಅ.17, 2023ರಿಂದ ನಾವು ಎರಡು ದೇಶಗಳಲ್ಲಿನ ಹೊಸ ಬಳಕೆದಾರರಿಗೆ ಹೊಸ ಚಂದಾದಾರಿಕೆ ವಿಧಾನವನ್ನು ಪರೀಕ್ಷಿಸಲು ಪ್ರಾರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದು ಎಲ್ಲಾ ದೇಶಗಳಿಗೂ ಅನ್ವಯವಾಗುವ ಸಾಧ್ಯತೆಯಿದೆ’ ಎಂದು ಟ್ವಿಟರ್ ಸಂಸ್ಥೆ ತಿಳಿಸಿದೆ.
ಈ ಹೊಸ ನಿಯಮ ಜಾರಿಗೆ ತರಲು ಕಾರಣವೇನು?
ಸ್ಪ್ಯಾಮ್ ಅಥವಾ ನಕಲಿ ಅಕೌಂಟ್ ಗಳನ್ನು ಕಡಿಮೆ ಮಾಡಲು ಮತ್ತು ಅಧಿಕೃತ ಬಳಕೆದಾರರ ಚಟುವಟಿಕೆಯ ಕುಶಲತೆ ಹೆಚ್ಚಿಸಲು ಈ ಹೊಸ ಪರೀಕ್ಷೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಹೊಸ ಬಳಕೆದಾರರಿಗೆ ಕಡಿಮೆ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಹಣ ಪಾವತಿಸದ ಬಳಕೆದಾರರು ಟ್ವಿಟರ್ ನ್ನು ಹೇಗೆ ಉಪಯೋಗಿಸಬಹುದು..?
ಹಣ ಪಾವತಿಸದ ಹೊಸ ಟ್ವಿಟರ್ ಬಳಕೆದಾರರು ಟ್ವೀಟ್ ಅನ್ನು ಕೇವಲ ಓದಲು ಮಾತ್ರ ಸಾಧ್ಯವಾಗುತ್ತದೆ. ಪ್ರತಿಕ್ರಿಯೆಯ ಯಾವುದೇ ಸೌಲಭ್ಯ ಲಭ್ಯವಾಗುವುದಿಲ್ಲ. ಪ್ರಸ್ತುತ ಭಾರತದಲ್ಲಿ ಗಣ್ಯರು ಹೊರತುಪಡಿಸಿ ಬ್ಲೂಟಿಕ್ ಸೇವೆ ಪಡೆಯಲು 699ರೂ. ಪಾವತಿಸಬೇಕಿದೆ.