
MLA ಟಿಕೆಟ್ ನೆಪದಲ್ಲಿ ಚೈತ್ರಾ ಗ್ಯಾಂಗ್ ನಿಂದ ಬಹುಕೋಟಿ ವಂಚನೆ ಪ್ರಕರಣ – ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿಗೆ ಜಾಮೀನು ನೀಡಿದ ಹೈಕೋರ್ಟ್
- ಕರ್ನಾಟಕ
- November 8, 2023
- No Comment
- 88
ನ್ಯೂಸ್ ಆ್ಯರೋ : ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಗ್ಯಾಂಗ್ ನ ಅಭಿನವ ಹಾಲಶ್ರೀಗೆ ಕರ್ನಾಟಕ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ಹಾಲಶ್ರೀ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕದಸ್ಯ ಪೀಠ ಅಭಿನವ ಹಾಲಶ್ರೀಗಳಿಗೆ ಷರತ್ತುಬದ್ಧ ಜಾಮೀನು ನೀಡಿದ್ದು, ಅಭಿನವ ಹಾಲಶ್ರೀಗಳನ್ನು ಸೆಪ್ಟೆಂಬರ್ 19ರಂದು ಒಡಿಶಾದ ಕಟಕ್‌ನಲ್ಲಿ ಬಂಧಿಸಲಾಗಿತ್ತು.
ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಮತ್ತು ಗ್ಯಾಂಗ್ ಉದ್ಯಮಿ ಗೋವಿಂದ ಪೂಜಾರಿ ಅವರನ್ನು ವಂಚಿಸಿದ ಪ್ರಕರಣದಲ್ಲಿ ಫೈರ್ ಬ್ರಾಂಡ್ ಭಾಷಣಕಾರ್ತಿ ಚೈತ್ರಾ ಕುಂದಾಪುರ ಪ್ರಧಾನ ಆರೋಪಿಯಾಗಿದ್ದರೆ ಗಗನ್ ಕಡೂರು ಎರಡನೇ ಆರೋಪಿ. ಗೋವಿಂದ ಪೂಜಾರಿ ಅವರನ್ನು ಯಾಮಾರಿಸಲು ಆರೆಸ್ಸೆಸ್ ಪ್ರಚಾರಕನ ವೇಷ ಧರಿಸಿದ ರಮೇಶ್ ಕಡೂರು ನಾಲ್ಕನೇ ಆರೋಪಿಯಾಗಿದ್ದಾನೆ.
ಐದನೇ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದು, ಬಿಜೆಪಿ ರಾಷ್ಟ್ರೀಯ ನಾಯಕನೆಂದು ಪೋಸ್ ಕೊಟ್ಟ ಬೆಂಗಳೂರಿನ ಚನ್ನಾ ನಾಯ್ಕ್. ರಮೇಶ್ ಕಡೂರ್ ಮತ್ತು ಚನ್ನಾ ನಾಯ್ಕ್ ಎಂಬ ವೇಷಧಾರಿಗಳನ್ನು ಪರಿಚಯಿಸಿದ ಧನರಾಜ್ ಆರನೇ ಆರೋಪಿಯಾಗಿದ್ದಾನೆ. ಏಳನೇ ಆರೋಪಿ, ಚೈತ್ರಾ ಕುಂದಾಪುರಳ ಆಪ್ತ ಗೆಳೆಯ ಶ್ರೀಕಾಂತ್ ನಾಯಕ್ ಹಾಗೂ ಎಂಟನೇ ಆರೋಪಿ ಪ್ರಸಾದ್ ಬೈಂದೂರು. ಪ್ರಸಾದ್ ಬೈಂದೂರು ಚೈತ್ರಾ ಮತ್ತು ಗೋವಿಂದ ಪೂಜಾರಿ ನಡುವೆ ಕೊಂಡಿಯಾಗಿದ್ದವನಾಗಿದ್ದಾನೆ.
ಪ್ರಕರಣದ ಮೈನ್ ಕಿಂಗ್ ಪಿನ್ ಚೈತ್ರಾ ಕುಂದಾಪುರಳನ್ನು ಸೆಪ್ಟೆಂಬರ್ 12ರಂದು ಉಡುಪಿಯ ಕೃಷ್ಣ ಮಠದ ಸಮೀಪದಿಂದ ಮತ್ತು ಉಳಿದವರನ್ನು ಅವರವರ ಊರುಗಳಿಂದ ಬಂಧಿಸಲಾಗಿತ್ತು. ಸೆ. 13ರಂದು ಸಂಜೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್ ಚೈತ್ರಾ ಕುಂದಾಪುರ ಸೇರಿದಂತೆ ಆರು ಆರೋಪಿಗಳಿಗೆ 10 ದಿನಗಳ ಸಿಸಿಬಿ ಕಸ್ಟಡಿ (CCB Custody) ವಿಧಿಸಿತ್ತು. ಸಿಸಿಬಿ ಕಸ್ಟಡಿ ಅವಧಿ ಸೆ. 23ಕ್ಕೆ ಅಂತ್ಯಗೊಂಡ ಬಳಿಕ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಚೈತ್ರಾ ಕುಂದಾಪುರ ಮತ್ತು ಟೀಮನ್ನು ಸಿಸಿಬಿ ಪೊಲೀಸರು ಬೆನ್ನಟ್ಟುತ್ತಿರುವ ಮಾಹಿತಿ ಸಿಗುತ್ತಿದ್ದಂತೆಯೇ ಅಭಿನವ ಹಾಲಶ್ರೀ ಸ್ವಾಮೀಜಿ ಮಠದಿಂದ ಪರಾರಿಯಾಗಿ ಮೈಸೂರಿಗೆ ಬಂದಿದ್ದರು. ಅಲ್ಲಿಂದ ಮೊಬೈಲ್ ಮತ್ತು ನಾಲ್ಕು ಸಿಮ್ ಖರೀದಿ ಮಾಡಿ ಬಸ್ ಮೂಲಕ ಹೈದರಾಬಾದ್‌ಗೆ ಅಲ್ಲಿಂದ ರೈಲು ಮೂಲಕ ಒಡಿಶಾದ ಕಟಕ್‌ಗೆ ಹೋಗಿದ್ದರು. ಮುಂದೆ ಕಾಶಿಗೆ ಹೋಗಿ ತಲೆಮರೆಸಿಕೊಳ್ಳುವ ಪ್ರಯತ್ನದಲ್ಲಿದ್ದ ಅವರನ್ನು ಕಟಕ್ ರೈಲು ನಿಲ್ದಾಣದಲ್ಲೇ ಪೋಲಿಸರ ಅತ್ಯಂತ ಚಾಣಾಕ್ಷತನದಿಂದ ಬಂಧಿಸಲಾಗಿತ್ತು.