
ಡೀಲ್ ಚೈತ್ರಾ ಕುಂದಾಪುರ ಪ್ರಕರಣ – ತಲೆಮರೆಸಿಕೊಂಡಿದ್ದ ಎ3 ಆರೋಪಿ ಹಾಲಶ್ರೀ ಸ್ವಾಮೀಜಿ ಬಂಧನ
- ಕರ್ನಾಟಕ
- September 19, 2023
- No Comment
- 106
ನ್ಯೂಸ್ ಆ್ಯರೋ : ಉಡುಪಿಯ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ 5 ಕೋಟಿ ರೂ. ವಂಚನೆ ಮಾಡಿದ ಚೈತ್ರಾ ಕುಂದಾಪುರ ನೇತೃತ್ವದ ತಂಡದ ಎ3 ಆರೋಪಿ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಓರಿಸ್ಸಾದಲ್ಲಿ ಬಂಧಿಸಿದ್ದಾರೆ.
ಚೈತ್ರಾ ಗ್ಯಾಂಗ್ ವಂಚನೆ ಪ್ರಕರಣದ 3ನೇ ಆರೋಪಿ ಹಾಲಾಶ್ರೀ ಸ್ವಾಮೀಜಿಯನ್ನು ಒಡಿಶಾದ ಕಟಕ್ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಸಿಬಿ ಪೋಲಿಸರ ಕಣ್ತಪ್ಪಿಸಿ ಹಾಲಶ್ರೀ ಸ್ವಾಮೀಜಿ ದಿನಕ್ಕೊಂದು ಸ್ಥಳವನ್ನು ಬದಲಾಯಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ಮೊದಲು ಸ್ವಾಮೀಜಿಯ ಕಾರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಮಹತ್ವದ ಅಂಶ ಕಲೆಹಾಕಿದ್ದರು.
ಮೊದಲಿಗೆ ಸಿಸಿಬಿ ಪೊಲೀಸರಿಂದ ಸ್ವಾಮೀಜಿ ಆತ್ಮೀಯ ಸಂಪರ್ಕದಲ್ಲಿದ್ದವರ ವಿಚಾರಣೆ ಮಾಡಿದ್ದರು. ಮಠದ ಕೆಲ ಆತ್ಮೀಯರು ಹಾಗೂ ಚಾಲಕ ಸೇರಿ ಕೊನೆ ಕ್ಷಣದ ಕರೆಗಳ ಆಧರಿಸಿ ವಿಚಾರಣೆ ಮಾಡಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದು ಕೊನೆಗೂ ಸ್ವಾಮೀಜಿಯನ್ನು ಬಂಧಿಸಿದ್ದಾರೆ.
ಇಂದು ಸಂಜೆ ಬೆಂಗಳೂರಿಗೆ ಕರೆ ತರುವ ಸಾಧ್ಯತೆಯಿದೆ. ಅಭಿನವ ಹಾಲಶ್ರೀ’ ಸ್ವಾಮೀಜಿ ಮೈಸೂರಿನಲ್ಲಿ ಕಾರು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರ ಕಣ್ಣಿಗೆ ಮಣ್ಣೆರಚಲು ಕಾರಿನ ನಂಬರ್ ಪ್ಲೇಟ್ ತೆಗೆದು ಪ್ರಯಾಣಿಸಿದ್ದರು. ಬಳಿಕ ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದರು. ಇಂದೇ ಈ ಪ್ರಕರಣದಲ್ಲಿ ಹಾಲಶ್ರೀ ಸ್ವಾಮಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ದಿನಾಂಕ ನಿಗದಿಯಾಗಿತ್ತು.