PKL 2023 Live Streaming: Pro Kabaddi League Starts From Today; Two matches on the first day

ಇಂದಿನಿಂದ ಪ್ರೊ ಕಬಡ್ಡಿ ಲೀಗ್ ಆರಂಭ – ಅಗ್ರ ಆರು ತಂಡಗಳಿಗೆ ಎಷ್ಟು ಹಣ ಸಿಗಲಿದೆ ಗೊತ್ತಾ?

ನ್ಯೂಸ್ ಆ್ಯರೋ : ಕಬಡ್ಡಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ವಿವೋ ಪ್ರೊ ಕಬಡ್ಡಿ ಲೀಗ್ ಸೀಸನ್ 10ರ ಹವಾ ಶುರುವಾಗಿಯೇ ಬಿಟ್ಟಿತು. ಜನರ ಕುತೂಹಲಕ್ಕೂ ಬ್ರೇಕ್ ಬೀಳಲಿದೆ. ಪಂದ್ಯಾವಳಿಗಳಿಗೆ‌ ಇಂದು ಅಧಿಕೃತವಾಗಿ ಚಾಲನೆ ಸಿಗಲಿದ್ದು ಅಹಮದಾಬಾದ್ ನ ಟ್ರಾನ್ಸ್ ಸ್ಟೇಡಿಯಾ ಸ್ಟೇಡಿಯಂನಲ್ಲಿ ಮೊದಲಿಗೆ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಕಣಕ್ಕಿಳಿಯಲಿದೆ. ಈ ರೋಚಕ ಪಂದ್ಯಾವಳಿಯ ಆರಂಭದಲ್ಲೇ ಸ್ಟಾರ್ ಆಟಗಾರರಾದ ಫಜೆಲ್ ಅತ್ರಾಚಲಿ ಮತ್ತು ಪವನ್ ಸೆಹ್ರಾವತ್ ಮುಖಾಮುಖಿಯಾಗಲಿದ್ದು ಇಂಟ್ರೆಸ್ಟಿಂಗ್ ಇರಲಿದೆ.

ಸದ್ಯ 4ವರ್ಷಗಳ ನಂತರ ಆರಂಭವಾಗಿರುವ ಪ್ರೊ. ಕಬಡ್ಡಿ ಲೀಗ್ ನ 10ನೇ ಸೀಸನ್ ನಲ್ಲಿ ಎಲ್ಲಾ 12 ಫ್ರಾಂಚೈಸಿಗಳು ತಮ್ಮ ತವರಿನ ಅಂಗಳದಲ್ಲಿ ಆಡಲು ಸಿದ್ಧವಾಗಿದೆ. ಇಂದಿನಿಂದ ಆರಂಭವಾಗಿ 2024ರ ಫೆಬ್ರವರಿ 21ರವರೆಗೆ ನಡೆಯಲಿದೆ.

ಪ್ರೊ. ಕಬಡ್ಡಿ ಲೀಗ್ ಪಂದ್ಯಗಳ ಟಿಕೆಟ್ ಬೆಲೆ ಎಷ್ಟಿದೆ..? ಆನ್ಲೈನ್ ಟಿಕೆಟ್ ಖರೀದಿಗೆ ಇಲ್ಲಿದೆ ಸಲಹೆ:

ಪ್ರೇಕ್ಷಕರಿಗೆ ಸುಮಾರು 3 ತಿಂಗಳುಗಳ ಕಾಲ ಕಬಡ್ಡಿ ಕಲಿಗಳು ಮನರಂಜನೆಯನ್ನು ಉಣಬಡಿಸಲಿದ್ದಾರೆ. ಈ ಬಾರಿಯ ಲೀಗ್ ನಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಕೂಟದಲ್ಲಿ ಗೆಲ್ಲುವ ಮತ್ತು ಅಂಕಪಟ್ಟಿಯಲ್ಲಿ ಅಗ್ರ ಆರು ಸ್ಥಾನ ಪಡೆಯುವ ತಂಡಗಳಿಗೆ ಭರ್ಜರಿ ಬಹುಮಾನ ನೀಡಲಾಗುತ್ತದೆ. ಇದೇ ವೇಳೆ ಆಟಗಾರರಿಗೆ ಮಾತ್ರವಲ್ಲದೆ ರೆಫರಿಗಳಿಗೂ ಬಹುಮಾನ ಮೊತ್ತ ನಿಗದಿಪಡಿಸಲಾಗಿದೆ.

ಬಹುಮಾನದ ಮೊತ್ತದ ವಿವರ ಹೀಗಿದೆ..

ಪ್ರೊ. ಕಬಡ್ಡಿ ಲೀಗ್ 10ನೇ ಋತುವಿನ ಒಟ್ಟು ಬಹುಮಾನದ ಮೊತ್ತ ಬರೋಬ್ಬರಿ ಎಂಟು ಕೋಟಿ ರೂ. ಐದನೇ ಸೀಸನ್ ನಿಂದ ಪ್ರತಿ ಆವೃತ್ತಿಯಲ್ಲಿಯೂ 8ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ವಿನ್ನರ್, ರನ್ನರ್ ಅಪ್, ಮತ್ತು ಅಗ್ರ ಆರು ಸ್ಥಾನ ಪಡೆಯುವ ತಂಡಗಳು ಮಾತ್ರವಲ್ಲದೆ ತೀರ್ಪುಗಾರರಿಗೂ ಬಹುಮಾನದ ಮೊತ್ತ ನೀಡಲಾಗುತ್ತದೆ.

ವಿಜೇತರಿಗೆ- ಮೂರು ಕೋಟಿ ರೂಪಾಯಿ, ರನ್ನರ್ ಅಪ್- 1.8ಕೋಟಿ ರೂಪಾಯಿ, 3ಮತ್ತು 4ನೇ ಸ್ಥಾನ ಪಡೆಯುವ ತಂಡ – ತಲಾ 90ಲಕ್ಷ ರೂಪಾಯಿ, 5ಮತ್ತು 6ನೇ ಸ್ಥಾನ ಪಡೆಯುವ ತಂಡ- ತಲಾ 45ಲಕ್ಷ ರೂಪಾಯಿ. ಒಟ್ಟು ಬಹುಮಾನದ ಮೊತ್ತ 8ಕೋಟಿ ರೂಪಾಯಿಗಳ ಪೈಕಿ 7.5ಕೋಟಿ ರೂಪಾಯಿಯನ್ನು ಅಗ್ರ ಆರು ತಂಡಗಳಿಗೆ ವಿತರಿಸಲಾಗುತ್ತದೆ.
ಉಳಿದ 50ಲಕ್ಷ ರೂಪಾಯಿಗಳನ್ನು ಉತ್ತಮ ಪ್ರದರ್ಶನ ನೀಡಿದ ಆಟಗಾರರು ಮತ್ತು ತೀರ್ಪುಗಾರರಿಗೆ ನೀಡಲಾಗುತ್ತದೆ.