
2023 ರ ಐಪಿಎಲ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಗೆ ಧೋನಿಯೇ ನಾಯಕ – ಅಧಿಕೃತ ಹೇಳಿಕೆ ನೀಡಿದ ಸಿಎಸ್ಕೆ
- ಕ್ರೀಡಾ ಸುದ್ದಿ
- November 17, 2022
- No Comment
- 457
ನ್ಯೂಸ್ ಆ್ಯರೋ : ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಹಬ್ಬ ಆರಂಭವಾಗಲಿದೆ. ಇದರ ನಡುವೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಿಂದಲೇ ನಿವೃತ್ತಿ ಪಡೆಯುವ ವದಂತಿ ಮಧ್ಯೆಯೇ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ತಂಡ ಹೇಳಿದೆ.
ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಆಡಳಿತ ಮಂಡಳಿ, ಯಶಸ್ವಿ ನಾಯಕ ದೋನಿ ಅವರು ಮುಂದಿನ ಐಪಿಎಲ್ನಲ್ಲಿ ಚೆನ್ನೈ ತಂಡದ ನಾಯಕರಾಗಲಿದ್ದಾರೆ ಎಂದಿದೆ. ತಂಡದ ಸಿಇಒ ಕೆಎಸ್ ವಿಶ್ವನಾಥನ್ ಮಾತನಾಡಿ, ನಾಲ್ಕು ಬಾರಿಯ ಚಾಂಪಿಯನ್ ಮಾಡಿರುವ ಮಹೇಂದ್ರ ಸಿಂಗ್ ದೋನಿ ಅವರು ತಂಡದ ಸಾರಥ್ಯ ವಹಿಸಲಿದ್ದಾರೆ ಎಂಬುದು ನಿಸ್ಸಂಶಯ. 2023 ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಂಡ ದೋನಿ ನಾಯಕತ್ವದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದು ಭವಿಷ್ಯ ನುಡಿದರು.
ಈ ಬಾರಿಯ ಐಪಿಎಲ್ ಪಂದ್ಯಗಳು ತವರು ಮೈದಾನದಲ್ಲಿ ನಡೆಯಲಿವೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಎಂಎಸ್ಡಿ ತಂಡದ ನಾಯಕರಾಗುವುದೂ ಖುಷಿ ದ್ವಿಗುಣಗೊಳಿಸಲಿದೆ ಎಂದು ಹೇಳಿದರು.
ಆಟಗಾರರೊಂದಿಗೆ ತಂಡ ಭಾವನಾತ್ಮಕ ಸಂಬಂಧ ಹೊಂದಿದೆ. ಮುಂದಿನ ತಿಂಗಳು ಕೊಚ್ಚಿಯಲ್ಲಿ ನಡೆಯುವ ಕಿರು ಐಪಿಎಲ್ ಹರಾಜಿನಲ್ಲಿ ಕೆಲ ಆಟಗಾರರು ತಂಡ ಸೇರಲಿದ್ದು, ಇನ್ನು ಕೆಲವರು ತಂಡದಿಂದ ಮುಕ್ತರಾಗಲಿದ್ದಾರೆ. ಟೀಂ ಬಲಿಷ್ಠವನ್ನಾಗಿ ಮಾಡಿ ಮುಂದಿನ ಚಾಂಪಿಯನ್ ಆಗಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕಳೆದ ಆವೃತ್ತಿಯಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾಗೆ ತಂಡದ ನಾಯಕತ್ವ ವಹಿಸಲಾಗಿತ್ತು. ಧೋನಿ ನೆರವಿನ ಮಧ್ಯೆಯೂ ತಂಡ ಹೀನಾಯ ಪ್ರದರ್ಶನ ನೀಡಿತ್ತು. ಇದರಿಂದ ಟೂರ್ನಿ ಅರ್ಧಕ್ಕೆ ಜಡೇಜಾ ನಾಯಕತ್ವದಿಂದ ಹಿಂದೆ ಸರಿದಿದ್ದರು. ಇದೀಗ ತೆರವಾದ ಸ್ಥಾನಕ್ಕೆ ತಂಡದ ಆಡಳಿತ ಮಂಡಳಿ ಮತ್ತೆ ಧೋನಿ ಅವರನ್ನು ಪೂರ್ಣ ಪ್ರಮಾಣದ ಆಯ್ಕೆ ಮಾಡಿದೆ. ಇದರ ಬೆನ್ನಲ್ಲೇ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಲಿಷ್ಠ ತಂಡ ಕಟ್ಟಲು ಚೆನ್ನೈ ಸೂಪರ್ ಕಿಂಗ್ಸ್ ಪ್ರಯತ್ನ ನಡೆಸಿದೆ.