
ನಟಿಯರಿಗೆ ಅಶ್ಲೀಲ ವಿಡಿಯೊ ಕಳುಹಿಸಿದ ಡಿಂಗ್ರಿ ನಾಗರಾಜ್ – ಹಿರಿಯ ಕಲಾವಿದನ ವಿರುದ್ಧ ರಾಣಿ ಗಂಭೀರ ಆರೋಪ, ಡಿಂಗ್ರಿ ಹೇಳಿದ್ದೇನು?
- ಮನರಂಜನೆ
- November 18, 2022
- No Comment
- 448
ನ್ಯೂಸ್ ಆ್ಯರೋ : ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷ, ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ವಿರುದ್ಧ ಹಿರಿಯ ನಟಿ, ಪೋಷಕ ಕಲಾವಿದರ ಸಂಘದ ಉಪಾಧ್ಯಕ್ಷೆ ರಾಣಿ ಗಂಭೀರ ಆರೋಪ ಮಾಡಿದ್ದಾರೆ.
ಡಿಂಗ್ರಿ ನಾಗರಾಜ್ ಅವರು ನಟಿಯರಿಗೆ ಅಶ್ಲೀಲ ವಿಡಿಯೊ ಕಳುಹಿಸಿ, ಅಸಭ್ಯವಾಗಿ ಮಾತನಾಡುತ್ತಾರೆ. ಮಾತ್ರವಲ್ಲ, ಪೋಷಕ ಕಲಾವಿದರ ಸಂಘದ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಾಣಿ ಆರೋಪಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಪೋಷಕರ ಸಂಘದಿಂದ ಅನೇಕರಿಗೆ ತುಂಬ ಒಳ್ಳೆಯದಾಗಿದೆ. ಇವತ್ತು ನಾವು ಸಂಘದ ವಿರುದ್ಧ ಯಾವುದೇ ಆರೋಪ ಮಾಡುತ್ತಿಲ್ಲ. ಆದರೆ, ಡಿಂಗ್ರಿ ನಾಗರಾಜ್ ಮತ್ತು ಸಂಘದ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ವಿರುದ್ಧ ನಾನು ಆರೋಪ ಮಾಡುತ್ತಿದ್ದೇನೆ. ನಾವು ಯಾವುದಾದರೂ ವಿಷಯವನ್ನು ನೇರವಾಗಿ ಹೇಳಿದರೆ ಅವರು ಸೊಂಟದ ಕೆಳಗಿನ ಮಾತುಗಳನ್ನಾಡುತ್ತಾರೆ ಎಂದು ದೂರಿದ್ದಾರೆ.
ಸಂಘದಲ್ಲಿನ ಮಹಿಳೆಯರಿಗೆ ಅವರು ಅಶ್ಲೀಲ ವಿಡಿಯೊಗಳನ್ನು ಕಳಿಸುತ್ತಾರೆ. ಅಂತಹ ವಿಡಿಯೊಗಳನ್ನು ಕಳುಹಿಸಬೇಡಿ ಎಂದು ಹೇಳಿದ್ದರೂ ಕೇಳಲಿಲ್ಲ. ನಮ್ಮನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ. ಯಾವುದೇ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ನಮ್ಮ ಬಳಿ ಚರ್ಚೆ ಮಾಡದೆ ಅವರೇ ನಿರ್ಧಾರಕ್ಕೆ ಬರುತ್ತಾರೆ. ಅವರ ನಿರ್ಧಾರ ಪ್ರಶ್ನಿಸಿದರೆ ಇಷ್ಟವಿದ್ದರೆ ಇರು, ಇಲ್ಲವಾದರೆ ಹೋಗಿ ಎಂದು ಏಕವಚನದಲ್ಲಿ ನಿಂದಿಸುತ್ತಾರೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಕಾನಿಷ್ಕ ಹೋಟೆಲ್‌ನಲ್ಲಿ ಅಶ್ಲೀಲ ವಿಡಿಯೊ ವಿಚಾರವಾಗಿ 300 ಜನರ ಮಧ್ಯೆ ಜಗಳ ಆಗಿದೆ. ಆಗ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಕಳೆದ ತಿಂಗಳು ನನ್ನನ್ನು ಸಂಘದಿಂದ ಉಚ್ಛಾಟನೆ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಯಾರು ಯಾರನ್ನೋ ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ನಮ್ಮ ಐಡಿಯನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಮೊದಲ ಹೆಜ್ಜೆ ತೆಗೆದುಕೊಂಡು ಮಾಧ್ಯಮದ ಮುಂದೆ ಬಂದಿದ್ದೇನೆ, ಸಾಕಷ್ಟು ಹಿರಿಯ ಕಲಾವಿದರಿಗೂ ಈ ವಿಷಯವನ್ನು ತಿಳಿಸಿದ್ದೇನೆ ಎಂದು ರಾಣಿ ಹೇಳಿದ್ದಾರೆ.
ಆರೋಪ ಸುಳ್ಳು: ‘ರಾಣಿ ಮಾಡಿರುವ ಆರೋಪಗಳು ಸುಳ್ಳು. ಸಂಘದ ಸಭೆಯಲ್ಲಿ ರಾಣಿ ಏಕವಚನದಲ್ಲಿ, ಅಸಭ್ಯ ಭಾಷೆ ಬಳಸಿ ಮಾತನಾಡಿದ್ದರು. ಎಚ್ಚರಿಕೆ ನೀಡಿದರೂ ಕೂಡ ಬಾಯಿಗೆ ಬಂದಹಾಗೆ ಮಾತನಾಡಿದ್ದಾರೆ. ನಮ್ಮ ಕಾನೂನಿನ ಪ್ರಕಾರ ಅದು ತಪ್ಪು. ಹೀಗಾಗಿ, ಅವರನ್ನು ಸಂಘದಿಂದ ತೆಗೆದು ಹಾಕಲಾಗಿದೆ’ಎಂದು ಡಿಂಗ್ರಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.