ಶಬರಿಮಲೆ ಭಕ್ತರಿಗಾಗಿ ವಿಶೇಷ ‘ ವಂದೇ ಭಾರತ್’ ರೈಲು ಆರಂಭ – ಮಾರ್ಗ, ಸಮಯದ ಮಾಹಿತಿ ಇಲ್ಲಿದೆ ನೋಡಿ…

ನ್ಯೂಸ್ ಆ್ಯರೋ : ಶಬರಿಮಲೆಗೆ ಯಾತ್ರಾರ್ಥಿಗಳು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ನೂಕುನುಗ್ಗಲು, ಅಯ್ಯಪ್ಪನ ದರ್ಶನಕ್ಕೆ ಅವಕಾಶ ಸಿಗದೆ ಒದ್ದಾಡುತ್ತಿರುವುದು ಎಲ್ಲವೂ ಮಾಧ್ಯಮಗಳಲ್ಲಿ ಕಂಡುಬಂದಿದೆ. ಈ ಎಲ್ಲಾ ಅವ್ಯವಸ್ಥೆಗೆ ಕೇರಳ ಸರ್ಕಾರವೇ ನೇರ ಹೊಣೆ ಎಂದು ಭಕ್ತಾದಿಗಳು ಶಪಿಸುತ್ತಿದ್ದಾರೆ. ಇದೇ ವೇಳೆ ಶಬರಿಮಲೆಗೆ ಯಾತ್ರೆ ಕೈಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ವಿಶೇಷ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ಮುಂದಾಗಿದೆ.

ಶಬರಿಮಲೆಗೆ ರೈಲು ಸೇವೆ ಯಾವಾಗದಿಂದ ಆರಂಭ..?

ಹಬ್ಬದ ಸೀಸನ್‌ನಲ್ಲಿ ಶಬರಿಮಲೆಗೆ ಹೊರಡುವ ಭಕ್ತರ ಸಂಖ್ಯೆ ಅಧಿಕವಾಗಿರುವುದರಿಂದ ಅವರ ಅನುಕೂಲಕ್ಕಾಗಿ ದಕ್ಷಿಣ ರೈಲ್ವೆಯು ಚೆನ್ನೈ ಮತ್ತು ಕೊಟ್ಟಾಯಂ ನಡುವೆ ವಿಶೇಷ ವಂದೇ ಭಾರತ್ ರೈಲು ಸೇವೆಯನ್ನು ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ರೈಲು ಸಂಖ್ಯೆ 06151 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಹಾಗೂ ಕೊಟ್ಟಾಯಂ ನಡುವೆ ವಂದೇ ಭಾರತ್ ಶಬರಿ ಎರಡು ವಾರದ ವಿಶೇಷ ರೈಲು ಡಿಸೆಂಬರ್ 15, 17, 22 ಮತ್ತು 24 ರಂದು ಬೆಳಿಗ್ಗೆ 4.30 ಕ್ಕೆ ಚೆನ್ನೈನಿಂದ ಹೊರಡಲಿದೆ. ಅದೇ ದಿನ ಸಂಜೆ 4.15 ಕ್ಕೆ ಕೊಟ್ಟಾಯಂ ತಲುಪಲಿದೆ.

ಹಿಂದುರುಗುವ ರೈಲು ಸಂಖ್ಯೆ 06152 ಕೊಟ್ಟಾಯಂ – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಶಬರಿ ದ್ವಿ-ವಾರದ ವಿಶೇಷ ರೈಲು ಡಿಸೆಂಬರ್ 16, 18, 23 ಮತ್ತು 25 ರಂದು ಬೆಳಿಗ್ಗೆ 4.40 ಕ್ಕೆ ಕೊಟ್ಟಾಯಂ ನಿಲ್ದಾಣದಿಂದ ಹೊರಟು ಅದೇ ದಿನ ಸಂಜೆ 5.15 ಕ್ಕೆ ಚೆನ್ನೈ ತಲುಪಲಿದೆ.

ಇದು ಪೆರಂಬೂರ್, ಕಟ್ಪಾಡಿ, ಸೇಲಂ, ಈರೋಡ್, ತಿರುಪ್ಪೂರ್, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ ಮತ್ತು ಎರ್ನಾಕುಲಂ ಉತ್ತರದಂತಹ 10 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ವಂದೇ ಭಾರತ್ 8 ಬೋಗಿಗಳನ್ನು ಹೊಂದಿರುತ್ತದೆ. ಕೇರಳದಲ್ಲಿ ಇದು ಮೂರನೇ ವಂದೇ ಭಾರತ್ ಆಗಿದ್ದು, ಈಗಾಗಲೇ ಕಾಸರಗೋಡು- ತಿರುವನಂತಪುರಂ ಮಾರ್ಗದಲ್ಲಿ ಇಂತಹ ಎರಡು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಕಾರ್ಯನಿರ್ವಹಿಸುತ್ತಿವೆ.

ತಮಿಳುನಾಡು ಯಾತ್ರಾರ್ಥಿಗಳಿಗೆ ಸೌಲಭ್ಯ:

ಶಬರಿಮಲೆಗೆ ಭಾರೀ ಜನಸಂಖ್ಯೆಯ ಜನರು ತೆರಳಲಿರುವುದರಿಂದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಾಜ್ಯದ ಭಕ್ತರಿಗೆ ಸುರಕ್ಷತೆ ಮತ್ತು ಸುಗಮ ಸಂಚಾರ ಸೌಲಭ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅದರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಇದರ ಬೆನ್ನಲ್ಲೇ ತಮಿಳುನಾಡು ಮುಖ್ಯ ಕಾರ್ಯದರ್ಶಿ ಶಿವದಾಸ್ ಮೀನಾ ಅವರು ಕೇರಳ ಮುಖ್ಯಮಂತ್ರಿ ವಿ ವೇಣು ಅವರೊಂದಿಗೆ ಮಾತನಾಡಿ ಶಬರಿಮಲೆಯ ಪರಿಸ್ಥಿತಿಯನ್ನು ಅವಲೋಕಿಸಿದರು. ದೇಗುಲದಲ್ಲಿ ವಿಪರೀತ ನೂಕು ನುಗ್ಗಲು ಉಂಟಾಗಿ ಯಾತ್ರಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತಮಿಳುನಾಡು ಸಿಎಂ ಈ ನಿರ್ದೇಶನ ನೀಡಿದ್ದಾರೆ.

ನವೆಂಬರ್ 17 ರಂದು ಶಬರಿಮಲೆಯಲ್ಲಿ ಮಂಡಲ-ಮಕರವಿಳಕ್ಕು ಋತುವು ಪ್ರಾರಂಭವಾಗಿದೆ. ಡಿಸೆಂಬರ್ 27 ರಂದು ಮಂಡಲ ಪೂಜೆಯ ನಂತರ ದೇವಾಲಯವು ಸ್ವಲ್ಪ ಸಮಯದವರೆಗೆ ಮುಚ್ಚಲ್ಪಡುತ್ತದೆ. ಇದು ಮಕರವಿಳಕ್ಕು ಋತುವಿಗಾಗಿ ಡಿಸೆಂಬರ್ 30 ರಂದು ಮತ್ತೆ ತೆರೆಯುತ್ತದೆ. ಪ್ರಸಿದ್ಧ ಮಕರವಿಳಕ್ಕು ಜನವರಿ 15, 2024 ರಂದು ನಡೆಯಲಿದೆ.