ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಇನ್ಮುಂದೆ ಸ್ಪೆಷಲ್ ರಜೆ – ಪ್ರತೀ ತಿಂಗಳು ಸಿಗಲಿದೆ ‘ಪೀರಿಯೆಡ್ಸ್ ಲಿವ್’..!

ನ್ಯೂಸ್ ಆ್ಯರೋ : ಮಹಿಳೆಯರಿಗೆ ‘ಮುಟ್ಟು’ ಅನ್ನುವಂತದ್ದು ನೈಸರ್ಗಿಕ ಕ್ರಿಯೆ. ಅದು ಸಹಜ ಕೂಡಾ. ಆದರೆ ಮುಟ್ಟಿನ ಸಮಯದಲ್ಲಿ ಮಹಿಳೆಯರು ಅದರಲ್ಲೂ ವಿಶೇಷವಾಗಿ ಯುವತಿಯರು ಎದುರಿಸುವ ಸಮಸ್ಯೆ ಹೇಳಿಕೊಳ್ಳುವಂತದ್ದಲ್ಲ. ವಿಪರೀತ ಹೊಟ್ಟೆನೋವು, ರಕ್ತಸ್ರಾವದಿಂದ ಬಳಲುವ ಹೆಣ್ಮಕ್ಕಳು ಕಾಲೇಜಿಗೆ ಅಥವಾ ಕೆಲಸಕ್ಕೆ ಒಂದು ದಿನ ಅನಿವಾರ್ಯವಾಗಿ ರಜೆ ಮಾಡಲೇಬೇಕಾಗುತ್ತದೆ. ಆದರೆ ಇದೀಗ ಸರ್ಕಾರ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದೆ.

ಋತುಚಕ್ರದ ಸಮಯದಲ್ಲಿ ಮಹಿಳೆಯರು ರಜೆ ಪಡೆಯಬೇಕೇ? ದೇಶಾದ್ಯಂತ ಜನರು ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಈ ಸಮಸ್ಯೆ ಹಲವು ವರ್ಷಗಳಿಂದ ಮುಂದುವರೆದಿದೆ. ಇದೀಗ ಇದಕ್ಕೆ ಸರ್ಕಾರ ಸ್ಪಂದಿಸಿದ್ದು, ಸಂಸತ್ತಿನ ಸಮಿತಿ ತನ್ನ ವರದಿ ನೀಡಿದೆ. ಇದರಲ್ಲಿ ಮಹಿಳಾ ನೌಕರರಿಗೆ ವಿಶೇಷ ‘ಮುಟ್ಟಿನ ರಜೆ’ ಆರೋಗ್ಯ ಸಂಬಂಧಿತ ಸಮಸ್ಯೆಯಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ಪಿರಿಯೆಡ್ಸ್ ಲಿವ್ ನೀತಿಗೆ ಶಿಫಾರಸ್ಸು..!

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ತನ್ನ ಹಿಂದಿನ ವರದಿಯಲ್ಲಿ ಇದನ್ನು ಶಿಫಾರಸು ಮಾಡಿತ್ತು. ಸಮಿತಿಯು ‘ಮುಟ್ಟಿನ ರಜೆ’ ನೀತಿಯನ್ನು ರೂಪಿಸಲು ಕಾರ್ಮಿಕ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಈ ನೀತಿಯ ಪ್ರಕಾರ ಮುಟ್ಟಿನ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ರಜೆಯನ್ನು ಅನುಮತಿಸಲಾಗಿದೆ.

ಈ ಸಮಸ್ಯೆ ಆರೋಗ್ಯಕ್ಕೆ ಸಂಬಂಧಿಸಿದೆ. ಕಾರ್ಮಿಕ ಸಚಿವಾಲಯದ ಸರ್ಕಾರಿ ಮಹಿಳಾ ಉದ್ಯೋಗಿಯೊಬ್ಬರಿಗೆ ಋತುಚಕ್ರದ ಸಮಯದಲ್ಲಿ ನೋವಿನಿಂದಾಗಿ ವಿಶೇಷ ಮುಟ್ಟಿನ ರಜೆ ನೀಡುವ ಅಗತ್ಯಕ್ಕೆ ಸಂಬಂಧಿಸಿದ ವಿಷಯವು ಆರೋಗ್ಯ ಸಮಸ್ಯೆಯಾಗಿದೆ ಎಂದು ಕಾರ್ಮಿಕ ಸಚಿವಾಲಯವು ಸಮಿತಿಗೆ ತಿಳಿಸಿದೆ.

ಈ ಹಿಂದೆ ಡಿಸೆಂಬರ್ 8 ರಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಎಲ್ಲರಿಗೂ ವೇತನ ಸಹಿತ ಮುಟ್ಟಿನ ರಜೆಯನ್ನು ಕಡ್ಡಾಯವಾಗಿ ಒದಗಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಬಳಿ ಇಲ್ಲ ಎಂದು ಲೋಕಸಭೆಗೆ ತಿಳಿಸಿದ್ದರು.

ಮಹಿಳೆಯರ ರಜೆಗೆ ಸಂಬಂಧಿಸಿದ ನಿಯಮಗಳೇನು ಗೊತ್ತೇ..?

  • ರಜೆಗೆ ಸಂಬಂಧಿಸಿದಂತೆ ವೈದ್ಯಕೀಯ ಪ್ರಮಾಣಪತ್ರವನ್ನು ಕೇಳಬಾರದು :

ಹೆಚ್ಚಿನ ಮಹಿಳೆಯರು ಋತುಚಕ್ರದ ಕಾರಣದಿಂದಾಗಿ ದೌರ್ಬಲ್ಯವನ್ನು ಅನುಭವಿಸುತ್ತಾರೆ ಎಂದು ಸಮಿತಿ ಹೇಳಿದೆ. ಈ ಕಾರಣದಿಂದಾಗಿ, ಕೆಲಸದ ಸ್ಥಳದಲ್ಲಿ ಅವರ ಕೆಲಸದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಸಮಿತಿಯು ಮಹಿಳೆಯರಿಗೆ ಮಾಸಿಕ ಅಥವಾ ವಾರ್ಷಿಕ ಋತುಚಕ್ರದ ರಜೆ ಅಥವಾ ಅನಾರೋಗ್ಯ ರಜೆ (ಎಸ್ಎಲ್)/ ಅರ್ಧ ವೇತನದ ಮೇಲೆ ರಜೆ ನೀಡುವಂತೆ ಶಿಫಾರಸು ಮಾಡಿದೆ.

ಆದರೆ ಈ ರಜೆಗೆ ಪ್ರತಿಯಾಗಿ, ಯಾವುದೇ ರೀತಿಯ ವೈದ್ಯಕೀಯ ಪ್ರಮಾಣಪತ್ರವನ್ನು ಕೇಳಬಾರದು ಅಥವಾ ರಜೆ ತೆಗೆದುಕೊಳ್ಳಲು ಸಮರ್ಥನೆಯನ್ನು ಕೇಳಬಾರದು ಎನ್ನುವುದನ್ನು ಕೂಡಾ ಸಮಿತಿ ಸೂಚಿಸಿದೆ.

  • ರಜೆಗೆ ಸಂಬಂಧಿಸಿದಂತೆ ಸರ್ಕಾರದ ನಿಯಮಗಳೇನು?

ಸಮಿತಿಯು ಸೋಮವಾರ ಮಂಡಿಸಿದ ತನ್ನ ಹೊಸ ವರದಿಯಲ್ಲಿ, ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮಗಳು, 1972 ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳ ಕಲ್ಯಾಣಕ್ಕಾಗಿ ವಿವಿಧ ರೀತಿಯ ವೇತನದ ರಜೆಗಳ ರೂಪದಲ್ಲಿ ವಿವಿಧ ಪ್ರೋತ್ಸಾಹಕಗಳನ್ನು ಹೊಂದಿದೆ ಎಂದು ಹೇಳಿದೆ. ಇವುಗಳಲ್ಲಿ ಮಾತೃತ್ವ ರಜೆ ಮತ್ತು ಮಕ್ಕಳ ಆರೈಕೆ ರಜೆಗಳೂ ಸೇರಿವೆ.

ಯಾವುದೇ ಸರ್ಕಾರಿ ನೌಕರನು ತನ್ನ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ವರ್ಷದಲ್ಲಿ 30 ದಿನಗಳ ಗಳಿಕೆ ರಜೆ ಮತ್ತು ಎಂಟು ದಿನಗಳ ಕ್ಯಾಶುಯಲ್ ರಜೆ (CL) ಪಡೆಯುತ್ತಾನೆ ಎಂದು ಅದು ಹೇಳುತ್ತದೆ.