Shabarimala : 18 ಗಂಟೆ ಕಾದರೂ ಅಯ್ಯಪ್ಪನ ದರುಶನ ಭಾಗ್ಯ ಇಲ್ಲ‌ – ಮಣಿಕಂಠನ ಸನ್ನಿಧಿಯಲ್ಲಿ ಮುಗಿಯದ ಸ್ವಾಮಿ ಭಕ್ತರ ರೋದನ

ನ್ಯೂಸ್ ಆ್ಯರೋ : ವಿಶ್ವ ಪ್ರಸಿದ್ಧ ಕೇರಳದ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ 18 ಗಂಟೆ ಸರದಿಯಲ್ಲಿ ನಿಂತರೂ ಕೆಲವೊಮ್ಮೆ ದೇವರ ದರ್ಶನ ಸಾಧ್ಯವಾಗುತ್ತಿಲ್ಲ. ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಗರ್ಭಗುಡಿ ಬಳಿ ಹೋದಾಗ ದೇವರ ಮುಖ ನೋಡುವ ಮುನ್ನವೇ ಎಳೆದು ಹೊರಗೆ ಹಾಕಲಾಗುತ್ತಿದೆ ಎಂದು ಭಕ್ತರು ಹೇಳಿಕೊಂಡಿದ್ದಾರೆ.

ನಮ್ಮ ಬಸ್‌, ನಿಂತ ಜಾಗದಿಂದ ಗಂಟೆಗಟ್ಟಲೆ ಕದಲುತ್ತಿಲ್ಲ. ಭಕ್ತರ ನಿರ್ವಹಣೆಯಲ್ಲಿ ಸರ್ಕಾರ ಪೂರ್ಣ ವಿಫಲವಾಗಿದೆ. ಬೆಟ್ಟದ ಬುಡದವರೆಗೆ ಬಸ್‌ನಲ್ಲಿ ಹೋಗಿ ಅಲ್ಲಿಂದ ಕಾಲ್ನಡಿಗೆಯಲ್ಲೇ ಮೇಲೇರಬೇಕು. ಅಷ್ಟಾದ ಮೇಲೂ ಸರದಿ ಉದ್ದ ಇರುವ ಕಾರಣ ಮಕ್ಕಳು, ವೃದ್ಧ ಭಕ್ತರು ಕೂಡಾ ಅರಣ್ಯದಲ್ಲಿ ಮಲಗಿ, ಅಲ್ಲೇ ನದಿಯಲ್ಲೇ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ.

ಇಷ್ಟೆಲ್ಲಾ ಆಗಿ ಬೆಟ್ಟ ಏರಿದ ಬಳಿಕ ತಗಡಿನ ಶೆಡ್‌ನೊಳಗೆ ಮತ್ತೆ ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯಬೇಕು. ಇಷ್ಟೆಲ್ಲಾ ಸಾಹಸ ಮಾಡಿ ದೇಗುಲದ 18 ಮೆಟ್ಟಿಲೇರಿ ದೇವರ ದರ್ಶನ ಮಾಡೋಣವೆಂದರೆ ಅಲ್ಲಿ ನಿಂತಿರುವ ಭದ್ರತಾ ಸಿಬ್ಬಂದಿ ದೇವರನ್ನೂ ನೋಡಲು ಬಿಡದೆ ಎಳೆದು ಹಾಕುತ್ತಾರೆ ಎಂದು ಹಲವು ಭಕ್ತರು ಗೋಳು ತೋಡಿಕೊಂಡಿದ್ದಾರೆ.

ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಾರಿ ಸಂಖ್ಯೆಯ ಭಕ್ತರು ಬರತೊಡಗಿದ್ದಾರೆ. ಆನ್ಲೈನ್ ನಲ್ಲಿ ದರ್ಶನಕ್ಕೆ ಬುಕ್ ಮಾಡಿಕೊಂಡವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಐದು ಲಕ್ಷ ನಿತ್ಯ ಲಕ್ಷಾಂತರ ಭಕ್ತರಿಗೆ ಅವಕಾಶ ಕಲ್ಪಿಸಿದ್ದರೂ ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ಭಕ್ತರು ಪರದಾಡುವಂತಾಗಿದೆ ಎಂದು ಹೇಳಲಾಗಿದೆ.