ರಾಜ್ಯದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕರೆ ಹೋಗಿರುವ ಗುಮಾನಿ, ಸ್ಥಳಕ್ಕೆ ಅಧಿಕಾರಿಗಳ ದೌಡು

ನ್ಯೂಸ್ ಆ್ಯರೋ : ಹೈದರಾಬಾದ್ ಕರ್ನಾಟಕ ಭಾಗದ ಯಾದಗಿರಿಯಲ್ಲಿ ಸ್ಯಾಟಲೈಟ್ ಫೋನ್, ಬಳಕೆ ಮಾಡಿ ಪಾಕಿಸ್ತಾನಕ್ಕೆ ಕರೆ ಮಾಡಿದ್ದಾರೆ ಎನ್ನಲಾಗಿದ್ದು, ತಾಲೂಕಿನ ಶೆಳ್ಳಗಿ ಗ್ರಾಮದಿಂದ ಪಾಕಿಸ್ತಾನಕ್ಕೆ ಸೆಪ್ಟೆಂಬರ್​​ 17ರ ನಸುಕಿನ ಜಾವ 3 ಗಂಟೆ ಸುಮಾರಿಗೆ ಸ್ಯಾಟಲೈಟ್ ಕರೆ ಹೋಗಿರುವ ಬಗ್ಗೆ ತನಿಖಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಜಿಪಿಎಸ್ ಲೊಕೇಷನ್ ಆಧಾರದ ಮೇಲೆ ಸ್ಥಳಕ್ಕೆ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಘಟನ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ. ಚೀನಾ ನಿರ್ಮಿತ ಸ್ಯಾಟಲೈಟ್ ಫೋನ್​ ಮೂಲಕ ಪಾಕಿಸ್ತಾನಕ್ಕೆ ಕರೆ ಹೋಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಅನಾಮಧೇಯ ಸ್ಥಳಕ್ಕೆ ನಿಷೇಧಿತ ‘ತುರಾಯಾ’ ಸ್ಯಾಟಲೈಟ್ ಫೋನ್ ಉಪಕರಣ ಮೂಲಕ ಕರೆ ಹೋಗಿರುವ ಬಗ್ಗೆ ಅರಿತು ಕೇಂದ್ರ ಸಂಸ್ಥೆಗಳು ಇಲ್ಲಿಗೆ ಮಾಹಿತಿ ರವಾನಿಸಿವೆ. ತಕ್ಷಣವೇ ಈ ಬಗ್ಗೆ ಜಾಗೃತರಾದ ಅಧಿಕಾರಿಗಳು ಜಿಪಿಎಸ್ ಲೊಕೇಶನ್ ಆಧಾರದ ಮೇಲೆ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೆಳ್ಳಗಿಯಿಂದ ನಿಷೇಧಿತ ಸ್ಯಾಟ್‌ ಲೈಟ್‌ ಫೋನ್ ಮೂಲಕ ವಿದೇಶಕ್ಕೆ ಕರೆ ಹೋಗಿರುವುದು ಖಚಿತವಾಗಿದೆ.

ಆದರೆ, ಇಂತಹುದ್ದೇ ಕಡೆಗೆ ಕರೆ ಹೋಗಿದೆ ಎಂದು ಗೊತ್ತಾಗಿಲ್ಲವಾದರೂ, ಪಾಕಿಸ್ತಾನಕ್ಕೆ ಹೋಗಿರುವುದು ಶಂಕೆ ವ್ಯಕ್ತವಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ, 2021ರ ಏಪ್ರಿಲ್‌ ನಲ್ಲಿ ಯಾದಗಿರಿಗೆ ಸಮೀಪದ ಹೆಡಗಿಮುದ್ರಾ ಗ್ರಾಮ ಹೊರವಲಯದಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಮೂಲಕ ಪಾಕಿಸ್ತಾನಕ್ಕೆ ಕರೆ ಹೋಗಿದ್ದರಿಂದ, ಆಂತರಿಕ ಭದ್ರತಾ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಅಲ್ಲದೇ, ಯಾದಗಿರಿಯಲ್ಲಿ ಮೋಸ್ಟ್ ವಾಂಟೆಂಡ್ ಉಗ್ರರು ಅಡಗಿದ್ದರು ಎಂಬ ಸುಳಿವಿನ ಮೇರೆಗೆ 2014ರಲ್ಲಿ ಮುಂಬೈ ಹಾಗೂ ಹೈದರಾಬಾದ್‌ ನಿಂದ ಎನ್‌ ಐಎ ಅಧಿಕಾರಿಗಳ ತಂಡ ಭೇಟಿ ನೀಡಿ, ಹಲವರ ವಿಚಾರಣೆಯನ್ನೂ ನಡೆಸಿತ್ತು.