ರಾಜಕೀಯ ಜೀವನದಲ್ಲಿ ಯಾರ ಬಳಿಯೂ ಒಂದು ರೂ. ಮುಟ್ಟಿಲ್ಲ – ಕಟೀಲು ದೇವಿ ಮೇಲೆ ನಳಿನ್ ಕುಮಾರ್ ಕಟೀಲ್‌ ಪ್ರಮಾಣ..!

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಣೆ-ಪ್ರಮಾಣಕ್ಕೆ ಮುಂದಾಗಿದ್ದು, ರಾಜಕೀಯ ಜೀವನದಲ್ಲಿ ಯಾರ ಬಳಿಯೂ ಹಣ ಪಡೆದಿಲ್ಲ ಅಂತ ಕಟೀಲು ದೇವಿಯ ಮೇಲೆ ನಳಿನ್ ಕುಮಾರ್ ಕಟೀಲ್‌ ಪ್ರಮಾಣ ಮಾಡಿದ್ದಾರೆ.

ದ.ಕ ಜಿಲ್ಲೆಯ ಬಂಟ್ವಾಳದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ನಳಿನ್‌ ಕುಮಾರ್ ಕಟೀಲ್ ಮಾತನಾಡಿದ್ದಾರೆ. ಇವತ್ತಿನವರೆಗೆ ಯಾರ ಬಳಿಯೂ ನಾನು ಒಂದು ರೂ. ಮುಟ್ಟಿಲ್ಲ. ಸಂಸದನಾಗಿದ್ದ ಅವಧಿಯಲ್ಲಿ ಹಣ ಪಡೆದಿಲ್ಲ ಅಂತ ಕಟೀಲು ದೇವರ ಮೇಲೆ ಪ್ರಮಾಣ ಮಾಡುತ್ತೇನೆ. ಯಾವುದೇ ಅಧಿಕಾರಿ, ಗುತ್ತಿಗೆದಾರರ ಬಳಿ ಹಣ ಪಡೆದಿಲ್ಲ.

ನಾನು ಕಟೀಲಿನ ದೇವರನ್ನು ಬಹಳವಾಗಿ ನಂಬುತ್ತೇನೆ.‌ ನಾನು ರಾಜಕೀಯಕ್ಕೆ ಬಂದು 20 ವರ್ಷ ಆಯ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹನ ಜವಾಬ್ದಾರಿ ಇತ್ತು. ಧರ್ಮ ಜಾಗರಣಾ ಮಾಡು ಅಂತ ಹೇಳಿದ್ರು, ಧರ್ಮ ಜಾಗರಣೆ ಮಾಡಿದೆ. ಸಂಘದ ಹಿರಿಯರು ಕರೆದಾಗ ನನಗೆ ಭಜರಂಗದಳ ಕೊಡಿ ಹೇಳಿದೆ.‌ ಆಗ ಹಿರಿಯರು ಬಿಜೆಪಿಗೆ ಹೋಗು ಹೇಳಿದ್ದಕ್ಕೆ ಇಲ್ಲಿಗೆ ಬಂದೆ.

2009ರಲ್ಲಿ ಲೋಕಸಭಾ ಸ್ಪರ್ಧೆಗೆ ಸೂಚಿಸಿದಾಗಲೂ ನಾನು ಒಪ್ಪಲಿಲ್ಲ. ಕೊನೆಗೆ ಸಂಘದ ಹಿರಿಯರ ಸೂಚನೆ ಹಿನ್ನೆಲೆಯಲ್ಲಿ ಒಪ್ಪಿದೆ. ಹಿಂದೂ ಸಮಾಜಕ್ಕೆ ಅನ್ಯಾಯ ಆದಾಗ ಎದ್ದು ಹೋರಾಟ ಮಾಡಿದ್ದೇನೆ. ಅಧಿಕಾರವೇ ನಮಗೆ ರಾಜಕಾರಣ ಅಲ್ಲ, ನಮ್ಮ ಗುರಿ ಸರ್ವಶ್ರೇಷ್ಠ. ನಾಲ್ಕುವರೆ ವರ್ಷಗಳ ಕಾಲ ಯಾವುದೇ ಆರೋಪಗಳಿಗೆ ನಾನು ತುತ್ತಾಗಿಲ್ಲ. ಯಾವುದೇ ಗುಂಪುಗಾರಿಕೆ ಮಾಡದೇ ಸಾಮಾನ್ಯ ಕಾರ್ಯಕರ್ತನಂತೆ ಇದ್ದೇನೆ ಎಂದರು.

ದಕ್ಷಿಣ ಕನ್ನಡ ಬಿಜೆಪಿ ಎಂಪಿ ಟಿಕೆಟ್‌ ನಳಿನ್‌ ಕುಮಾರ್‌ ಕಟೀಲ್‌ಗೆ?

‘ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ಯಾರೇ ಆದರೂ ನನ್ನ ಬೆಂಬಲ’

ಇನ್ನು ಮುಂದಿನ ದ‌.ಕ. ಲೋಕಸಭಾ ಅಭ್ಯರ್ಥಿ ಆಯ್ಕೆ ಬಗ್ಗೆ ನಳಿನ್ ಕುಮಾರ್ ಕಟೀಲ್ ಮೌನ ಮುರಿದಿದ್ದಾರೆ. ಮೊದಲ ಬಾರಿಗೆ ಕಾರ್ಯಕರ್ತರ ವೇದಿಕೆಯಲ್ಲೇ ಟಿಕೆಟ್ ಬಗ್ಗೆ ನಳಿನ್ ಮಾತನಾಡಿದ್ದಾರೆ. ಕಾರ್ಯಕರ್ತರ ಅಸಮಾಧಾನದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಕಟೀಲ್, ನನ್ನ ವಿರುದ್ದದ ಹಲವು ಟೀಕೆ, ಟಿಪ್ಪಣಿಯನ್ನ ಕೇಳಿದ್ದೇನೆ. ಹತ್ತಾರು ಬಾರಿ ನನಗಾದಂತಹ ಅಪಮಾನಗಳನ್ನ ಸಹಿಸಿಕೊಂಡಿದ್ದೇನೆ. ನಾನು ಬಿಜೆಪಿಯ ವಿಚಾರಧಾರೆ ಒಪ್ಪಿದ ಕಾರಣ ಎಷ್ಟೇ ಅಪಮಾನವಾದರೂ ಸಹಿಸಿಕೊಂಡಿದ್ದೇನೆ. ನಿಮ್ಮ ಆಶಯಕ್ಕೆ ನಾನು ಕೈ ಮುಗಿಯುತ್ತೇನೆ, ಹಲವು ನೋವನ್ನ ಅನುಭವಿಸಿದ್ದೇನೆ.

ಮುಂದಿನ ಲೋಕಸಭಾ ಸದಸ್ಯ ಸ್ಥಾನ ನನಗೆ ಸಿಗಬೇಕೆಂದಿಲ್ಲ. ಲೋಕಸಭಾ ಅಭ್ಯರ್ಥಿ ಯಾರೇ ಆದರೂ ನನ್ನ ಬೆಂಬಲವಿದೆ. ನನಗೆ ಈ ದೇಶದಲ್ಲಿ ಮೋದಿ ಪ್ರಧಾನಿ ಆಗಬೇಕು ಎನ್ನುವುದೇ ಗುರಿ. ಮುಂದಿನ ಗುರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸೋದಷ್ಟೇ. ನನಗೂ ದುಃಖವಿದೆ, ಸಂಸದನಾದ ಬಳಿಕ  ಹಳ್ಳಿ ಹಳ್ಳಿಗಳಿಗೆ ಬರಲು ಆಗಲಿಲ್ಲ. ನಾಲ್ಕೂವರೆ ವರ್ಷದ ಜವಾಬ್ದಾರಿಯ ಕಾರಣಕ್ಕೆ ಬರಲು‌ ಆಗಲಿಲ್ಲ.

ರಾಜ್ಯಾಧ್ಯಕ್ಷನ ನೆಲೆಯಲ್ಲಿ ಇಡೀ ರಾಜ್ಯದ ಜವಾಬ್ದಾರಿಯಿತ್ತು. ಪ್ರಾಮಾಣಿಕವಾಗಿ ಬಿಜೆಪಿಯನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಆದರೆ ನೀವು ತಲೆ ತಗ್ಗಿಸುವ ರೀತಿಯ ಕೆಲಸ ಮಾಡಲಿಲ್ಲ. ಈಗ ಮತ್ತೆ ನಾನು ದಕ್ಷಿಣ ಕನ್ನಡ ಜಿಲ್ಲೆಯತ್ತ ಗಮನ ನೀಡುತ್ತೇನೆ‌. ನಿಮ್ಮ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ‌. ಇನ್ನೂ ಉಳಿದಿರುವ 6 ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನಿಮ್ಮ ಗ್ರಾಮಕ್ಕೆ ಬರುತ್ತೇನೆ. ಮತ್ತೆ ನಿಮ್ಮ ಆಶೀರ್ವಾದವನ್ನು ಕಾಲು ಮುಟ್ಟಿ ನಮಸ್ಕಾರ ಮಾಡುವ ಮೂಲಕ ಕೇಳುತ್ತೇನೆ ಎಂದರು.