
ಮೈತ್ರಿ ಯೋಜನೆಗೆ ಹೆಣ್ಣುಮಕ್ಕಳೇ ರಾಯಭಾರಿಗಳು – ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
- ರಾಜಕೀಯ
- September 11, 2023
- No Comment
- 37
ನ್ಯೂಸ್ ಆ್ಯರೋ : ಮೆನ್ ಸ್ಟ್ರಯಲ್ ಕಪ್ ಬಳಸುವ ಹೆಣ್ಣುಮಕ್ಕಳೇ ನನ್ನ ಮೈತ್ರಿ ಯೋಜನೆಯ ರಾಯಭಾರಿಗಳು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನಲ್ಲಿ ಸೋಮವಾರ ನನ್ನ ಮೈತ್ರಿ ಮೆನ್ ಸ್ಟ್ರುಯಲ್ ಕಪ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಯಾನಿಟರಿ ನ್ಯಾಪ್ಕಿನ್ ಬದಲು ಮೆನ್ ಸ್ಟ್ರುಯಲ್ ಕಪ್ ಬಳಕೆ ಬಗ್ಗೆ ಬಹುತೇಕ ಹೆಣ್ಣುಮಕ್ಕಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಲ್ಲದೇ ಈ ಕಪ್ ಗಳು ಪರಿಸರ ಸ್ನೇಹಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶುಚಿ ಯೋಜನೆಯಡಿ ಈ ಮೊದಲು ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ವಿತರಿಸಲಾಗುತಿತ್ತು. ನ್ಯಾಪ್ಕಿನ್ ಗಳ ಡಿಸ್ಪೋಸಲ್ ದೊಡ್ಡ ಸಮಸ್ಯೆಯಾಗಿತ್ತು. ಈ ಬಗ್ಗೆ ತುಂಬಾ ಹೆಣ್ಣು ಮಕ್ಕಳು ಮುಜುಗರ ಪಟ್ಟುಕೊಳ್ಳುತ್ತಿದ್ದರು. ಮುಟ್ಟಿನ ವಿಚಾರದಲ್ಲಿ ಮಾತನಾಡಲು ಯಾರು ಹಿಂಜರಿಯುವ ಅಗತ್ಯವಿಲ್ಲ. ಇದೊಂದು ನೈಸರ್ಗಿಕ ಕ್ರಿಯೆ. ಮೆನ್ ಸ್ಟ್ರುಯಲ್ ಕಪ್ ಗಳನ್ನು ಐದಾರು ವರ್ಷಗಳ ವರೆಗೆ ಮರುಬಳಕೆ ಮಾಡಬಹುದು. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಈಗಾಗಲೇ ಚಾಮರಾಜನಗರದಲ್ಲಿ 300 ಹೆಣ್ಣುಮಕ್ಕಳಿಗೆ ಮೆನ್ ಸ್ಟ್ರುಯಲ್ ಕಪ್ ಗಳನ್ನು ನೀಡಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ನ್ಯಾಪ್ಕಿನ್ ಬದಲು ಮೈತ್ರಿ ಕಪ್ ಬಳಕೆಗೆ ಹೆಣ್ಣುಮಕ್ಕಳಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ಪ್ರಯೋಗಿಕವಾಗಿ ತೆಗೆದುಕೊಳ್ಳಲಾಗಿದೆ. ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಎರಡು ಜಿಲ್ಲೆಗಳಿಗೆ 15,000 ಮೆನ್ ಸ್ಟ್ರುಯಲ್ ಕಪ್ ಗಳ ವಿತರಣೆಗೆ ಇಂದು ಚಾಲನೆ ನೀಡಿದ್ದೇವೆ.. ಈ ಯೋಜನೆ ಯಶಸ್ವಿಯಾಗುವ ವಿಶ್ವಾಸವಿದ್ದು, ರಾಜ್ಯಾದ್ಯಂತ ವಿಸ್ತರಿಸುವುದಾಗಿ ಅವರು ತಿಳಿಸಿದರು.
ಸರ್ಕಾರಿ ಮತ್ತು ಅನುದಾನಿತ ಶಾಲಾ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುವ ಶುಚಿ ಯೋಜನೆಯನ್ನೂ ಅಕ್ಟೋಬರ್ ತಿಂಗಳಲ್ಲಿ ಚಾಲನೆಗೆ ತರುತ್ತಿರುವುದಾಗಿ ಇದೇ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ತಿಳಿಸಿದರು.
ಕಳೆದ ಮೂರು ವರ್ಷಗಳಿಂದ ಶುಚಿ ಯೋಜನೆಯನ್ನು ಸ್ಥಗಿತಗೊಳಿದ್ದು, ಈ ವರ್ಷ ಮರು ಚಾಲನೆ ನೀಡಲು ನಿರ್ಧರಿಸಲಾಗಿದೆ. ಪ್ರಸಕ್ತ ಸಾಲಿಗೆ 10 ರಿಂದ 18 ವರ್ಷದ ಹೆಣ್ಣುಮಕ್ಕಳಿಗೆ ನ್ಯಾಪ್ಕಿನ್ ವಿತರಿಸಲು ಅಧಿಕಾರಿಗಳಿಗೆ ಅಧಿಕಾರಕ್ಕೆ ಬಂದ ಆರಂಭದಲ್ಲೇ ನಾನು ಸೂಚಿಸಿದ್ದೆ. 40.50 ಕೋಟಿ ವೆಚ್ಚದಲ್ಲಿ 15 ಕೋಟಿಗೂ ಹೆಚ್ಚು ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಔಷಧ ಸರಬರಾಜು ಕಾರ್ಪೋರೇಷನ್ ಮೂಲಕ ಖರೀದಿಸಿ ಹೆಣ್ಣು ಮಕ್ಕಳಿಗೆ ವಿತರಿಸಲು ಯೋಜಿಸಲಾಗಿದೆ ಎಂದರು.
ನನ್ನ ಮೈತ್ರಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಹೊಸ ಪ್ರಯೋಗವನ್ನು ಸ್ವಾಗತಿಸಿದರು. ಅಲ್ಲದೇ ಶುಚಿ ಯೋಜನೆಗೆ ಮರು ಚಾಲನೆ ನೀಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ ದೇಶ ವಿಶ್ವದಲ್ಲಿ ನಂ. 1 ಆಗಬೇಕಾದರೆ ಮೊದಲು ಬಡ ಜನರಿಗೆ ಬಲ ತುಂಬುವ ಕೆಲಸವಾಗಬೇಕು. ದೇಶದ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಿ ದುಡಿಯುವ ಯುವಕರನ್ನಾಗಿ ರೂಪಿಸಿದಾಗ ಮಾತ್ರ ದೇಶ ವೇಗವಾಗಿ ಬೆಳವಣಿಗೆಯತ್ತ ಸಾಗುತ್ತದೆ ಎಂದರು.