
ವೀಲ್ ಚೇರ್ ನಲ್ಲೇ ರಾಜ್ಯಸಭೆಗೆ ಆಗಮಿಸಿದ ಡಾ.ಮನಮೋಹನ್ ಸಿಂಗ್ – ಮಾಜಿ ಪ್ರಧಾನಿ ಬದ್ದತೆಗೆ ಸಂಸದರು, ನೆಟ್ಟಿಗರ ಮೆಚ್ಚುಗೆ
- ರಾಜಕೀಯ
- September 18, 2023
- No Comment
- 59
ನ್ಯೂಸ್ ಆ್ಯರೋ : ಇಂದು (ಸೆಪ್ಟಂಬರ್ 18) ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಿದೆ. ಈ ವೇಳೆ ರಾಜ್ಯಸಭೆ ದಿಲ್ಲಿ ಓರ್ಡಿನೆನ್ಸ್ ಮಸೂದೆ ಮೇಲಿನ ಬಿಸಿಬಿಸಿ ಚರ್ಚೆಗೆ ಸಾಕ್ಷಿಯಾಯಿತು. ಈ ಮಸೂದೆ ದಿಲ್ಲಿಯ ಸರಕಾರದಲ್ಲಿ ಕೇಂದ್ರದ ಪಾತ್ರವನ್ನು ಬಲಪಡಿಸುತ್ತದೆ. ಈ ಮಧ್ಯೆ ಅನಾರೋಗ್ಯದ ನಡುವೆಯೂ ಗಾಲಿಕುರ್ಚಿ ಮೂಲಕ ಭಾಗವಹಿಸಿ ಮಾಜಿ ಪ್ರಧಾನಿ, ಹಿರಿಯ ಕಾಂಗ್ರೆಸ್ ನಾಯಕ ಡಾ.ಮನಮೋಹನ್ ಸಿಂಗ್ ಗಮನ ಸೆಳೆದರು.
ವಿಪಕ್ಷಗಳಿಗೆ ಸೋಲು
ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿ ರಾಜ್ಯಸಭೆಯಲ್ಲಿ ವಿಪಕ್ಷ ಸೋಲು ಕಂಡಿದ್ದರೂ ತಮ್ಮ ಬದ್ಧತೆಯ ಮೂಲಕ ಮನಮೋಹನ್ ಸಿಂಗ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಸೆಲೆಬ್ರಿಟಿಗಳಾದ ಕಿರಣ್ ಖೇರ್, ಸನ್ನಿ ಡಿಯೋಲ್, ಗೌತಮ್ ಗಂಭೀರ್ ಅವರಿಗಿಂತಲೂ ಹೆಚ್ಚಿನ ಹಾಜರಾತಿಯನ್ನು ಡಾ.ಮನಮೋಹನ್ ಸಿಂಗ್ ಹೊಂದಿದ್ದು ಅದಕ್ಕಾಗಿ ನೆಟ್ಟಿಗರು ಅವರನ್ನು ಶ್ಲಾಘಿಸಿದ್ದಾರೆ.
ಎಎಪಿ ಸಂಸದ ರಾಘವ್ ಛಡ್ಡಾ ಮಾಜಿ ಪ್ರಧಾನಿ ಅವರ ಬದ್ಧತೆಯನ್ನು ಹೊಗಳಿ, ಇಂದು ಡಾ.ಮನಮೋಹನ್ ಸಿಂಗ್ ಸುಗ್ರೀವಾಜ್ಞೆಯ ವಿರುದ್ಧ ಮತ ಚಲಾಯಿಸಲು ರಾಜ್ಯಸಭೆಗೆ ಆಗಮಿಸಿದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಅವರಿಗಿರುವ ಬದ್ದತೆಯನ್ನು ಇದು ಎತ್ತಿ ತೋರಿಸುತ್ತದೆ. ಅವರ ಬೆಂಬಲಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಎಕ್ಸ್ (ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.
ರಾಜಕಾರಣಿಗಳು ಮಾತ್ರವಲ್ಲ ಜನ ಸಾಮಾನ್ಯರು ಕೂಡ ಡಾ.ಮನಮೋಹನ್ ಸಿಂಗ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ವಿಪ್ ಹಿನ್ನಲೆಯಲ್ಲಿ 90ರ ಇಳಿ ವಯಸ್ಸಿನಲ್ಲೂ ಡಾ.ಮನಮೋಹನ್ ಸಿಂಗ್ ಗವರ್ನಮೆಂಟ್ ಆಫ್ ಎನ್.ಸಿ.ಟಿ. ಮಸೂದೆ ವಿರುದ್ಧ ಧ್ವನಿಗೂಡಿಸಲು ಆಗಮಿಸಿದ್ದರು. ಆರ್ಥಿಕವಾಗಿ ದೇಶ ಬಲಿಷ್ಠವಾಗಲು ಅವರ ಕೊಡುಗೆ ಉಲ್ಲೇಖನೀಯ ಎಂದು ನೆಟ್ಟಿಗರು ಹೇಳಿದ್ದಾರೆ.
ಡಾ.ಮನಮೋಹನ್ ಸಿಂಗ್ ಸ್ವತಂತ್ರ ಭಾರತದ ಅತ್ಯುತ್ತಮ ಪ್ರಧಾನಿ ಎನ್ನುವುದು ಅರಿತುಕೊಳ್ಳಲು ಅನೇಕರಿಗೆ ಸುಮಾರು 1 ದಶಕವೇ ಹಿಡಿಯಿತು ಎಂದು ಇನ್ನೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.