ಇನ್ಮುಂದೆ ದೇಶದ ಎಲ್ಲಾ ವೈದ್ಯರಿಗೆ ಯೂನಿಕ್ ಐಡಿ ಕಡ್ಡಾಯ – ನಿಯಮ ಏನು ಹೇಳುತ್ತದೆ?
- ರಾಷ್ಟ್ರೀಯ ಸುದ್ದಿ
- May 15, 2023
- No Comment
- 143
ನ್ಯೂಸ್ ಆ್ಯರೋ : ಇನ್ನು ಮುಂದೆ ಭಾರತದಲ್ಲಿನ ಎಲ್ಲಾ ವೈದ್ಯರು ವಿಶೇಷ ಗುರುತಿನ ಸಂಖ್ಯೆ (UID- Unique Identification Number) ಹೊಂದಿರುವುದು ಕಡ್ಡಾಯ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
ನ್ಯಾಷನಲ್ ಮೆಡಿಕಲ್ ಕಮಿಷನ್(NMC- National Medical Commission) ನ ಎಥಿಕ್ಸ್ ಬೋರ್ಡ್ ಈ ಯೂನಿಕ್ ಐಡಿ ಒದಗಿಸಲಿದೆ. ಎನ್ಎಂಸಿಯ ಎಥಿಕ್ಸ್ ಮತ್ತು ಮೆಡಿಕಲ್ ರಿಜಿಸ್ಟ್ರೇಷನ್ ಬೋರ್ಡ್ ರಾಷ್ಟ್ರೀಯ ವೈದ್ಯಕೀಯ ನೊಂದಣಿ (NMR- National Medical Register) ಯನ್ನು ನಿರ್ವಹಿಸಲಿದೆ.
ರಾಜ್ಯ ವೈದ್ಯಕೀಯ ಮಂಡಳಿಗಳ ರಿಜಿಸ್ಟರ್ಗಳಲ್ಲಿರುವ ಎಲ್ಲಾ ನೊಂದಾಯಿತ ವೈದ್ಯರನ್ನು ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್ಗೆ ಸೇರಿಸಲಾಗುತ್ತದೆ. ಈ ರಿಜಿಸ್ಟರ್ನಲ್ಲಿ ವೈದ್ಯರ ಸ್ಪೆಷಲ್ ಕ್ವಾಲಿಫಿಕೇಶನ್, ತೇರ್ಗಡೆ ವರ್ಷ, ವಿಶ್ವ ವಿದ್ಯಾನಿಲಯ ಅಥವಾ ಶಿಕ್ಷಣ ಸಂಸ್ಥೆಯ ಹೆಸರು, ಕೆಲಸ ಮಾಡುವ ಸಂಸ್ಥೆ ಇತ್ಯಾದಿ ವಿವರಗಳು ಇರುತ್ತವೆ. ಈ ಎಲ್ಲಾ ದತ್ತಾಂಶಗಳನ್ನು ಎನ್ಎಂಸಿಯ ಅಧಿಕೃತ ವೆಬ್ಸೈಟ್ www.nmc.org.inನಲ್ಲಿ ವೀಕ್ಷಿಸಬಹುದು.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಸೂಚನೆ ಪ್ರಕಾರ ವೈದ್ಯಕೀಯ ವೃತ್ತಿಯಲ್ಲಿರುವವರು ಪ್ರತೀ 5 ವರ್ಷಕ್ಕೊಮ್ಮೆ ಲೈಸೆನ್ಸ್ ನವೀಕರಿಸಬೇಕು. ಪರವಾನಿಗೆ ಅವಧಿ ಮುಗಿಯುವ ದಿನಕ್ಕೆ ಕನಿಷ್ಠ 3 ತಿಂಗಳು ಮುಂಚೆ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಪರವಾನಿಗೆ ನವೀಕರಣಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಪರವಾನಿಗೆ ನವೀಕರಣಕ್ಕೆ ಅರ್ಜಿಯನ್ನು ರಾಜ್ಯ ವೈದ್ಯಕೀಯ ಮಂಡಳಿಗೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ರಾಜ್ಯ ಮಂಡಳಿಯು ಲೈಸೆನ್ಸ್ ನವೀಕರಣಕ್ಕೆ ನಿರಾಕರಿಸಿದರೆ ಆ ವೈದ್ಯರು ಎನ್ಎಂಸಿಯ ಎಥಿಮ್ಸ್ ಆ್ಯಂಡ್ ಮೆಡಿಕಲ್ ರೆಗ್ಯುಲೇಶನ್ ಬೋರ್ಡ್ಗೆ ಮನವಿ ಮಾಡಬಹುದು. ಇದು 30 ದಿನದೊಳಗೆ ಆಗಬೇಕು. ಅಂದರೆ ಲೈಸೆನ್ಸ್ ನವೀಕರಣ ಅರ್ಜಿ ತಿರಸ್ಕೃತವಾಗಿ 30 ದಿನದೊಳಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಇರುತ್ತದೆ. ರಾಜ್ಯ ವೈದ್ಯಕೀಯ ಮಂಡಳಿಗೆ ಸಲ್ಲಿಸಿದ ಮೂಲ ಅರ್ಜಿಯನ್ನು ಸೇರಿಸಿ ಎನ್ಎಂಸಿಯ ಕಾರ್ಯದರ್ಶಿಗೆ ವೈದ್ಯರು ಮೇಲ್ಮನವಿ ಹೋಗಬಹುದು. ಇದಕ್ಕೆ ಪ್ರೋಸಸಿಂಗ್ ಶುಲ್ಕ ಇರುತ್ತದೆ.
30 ದಿನದೊಳಗೆ ಈ ಮೇಲ್ಮನವಿ ಅರ್ಜಿಯ ಬಗ್ಗೆ ಅಂತಿಮ ತೀರ್ಮಾನ ಆಗುತ್ತದೆ. ಈ ತೀರ್ಮಾನವೇ ಅಂತಿಮ ಆಗಿರುತ್ತದೆ. ಒಂದು ವೇಳೆ, ಈ ಮೊದಲ ಮನವಿ ಅರ್ಜಿ ತಿರಸ್ಕೃತವಾದಲ್ಲಿ ಎರಡನೇ ಬಾರಿ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ.