
ಪ್ರಸಿದ್ಧ ಗಾಯಕ ಸಿಧು ಮೂಸೆವಾಲ ಹಂತಕರು ಜೈಲಿನಲ್ಲೇ ಕೊಲೆ – ಗ್ಯಾಂಗ್ ಗಳ ನಡುವಿನ ದ್ವೇಷಕ್ಕೆ ರಣಾಂಗಣವಾದ ಕೇಂದ್ರ ಕಾರಾಗೃಹ
- ರಾಷ್ಟ್ರೀಯ ಸುದ್ದಿ
- February 27, 2023
- No Comment
- 81
ನ್ಯೂಸ್ ಆ್ಯರೋ : ಪ್ರಸಿದ್ಧ ಪಂಜಾಬಿ ನಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಗ್ಯಾಂಗ್ಸ್ಟರ್ಗಳ ನಡುವೆ ಪಂಜಾಬ್ನ ಜೈಲಿನಲ್ಲೇ ವಾರ್ ನಡೆದಿದೆ. ಈ ಹೊಡೆದಾಟದಲ್ಲಿ ಇಬ್ಬರು ಗ್ಯಾಂಗ್ಸ್ಟರ್ಗಳು ಹತರಾಗಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಕಳೆದ ವರ್ಷ ಮೇ 29ರಂದು ಸಿಧು ಮೂಸೆವಾಲಾ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ಗಳು ಮತ್ತು ಶೂಟರ್ಗಳನ್ನು ಬಂಧಿಸಲಾಗಿತ್ತು. ಇದೀಗ ತರ್ನ್ ತರಣ್ ಜಿಲ್ಲೆಯ ಗೋಯಿಂಡ್ವಾಲ್ ಸಾಹಿಬ್‌ನ ಕೇಂದ್ರ ಕಾರಾಗೃಹದಲ್ಲಿ ಬಂಧಿತ ಆರೋಪಿಗಳ ನಡುವೆ ಗ್ಯಾಂಗ್ ವಾರ್ ನಡೆದಿದೆ.
ಮೃತರನ್ನು ಬಟಾಲದ ಮನದೀಪ್ ಸಿಂಗ್ ಅಲಿಯಾಸ್ ತೂಫಾನ್ ಮತ್ತು ಬುಧಲಾನಾದ ಮನಮೋಹನ್ ಸಿಂಗ್ ಅಲಿಯಾಸ್ ಮೊಹ್ನಾ ಎಂದು ಗುರುತಿಸಲಾಗಿದೆ. ಮತ್ತೋರ್ವ ಕೈದಿಯನ್ನು ಬಟಿಂಡಾದ ಕೇಶವ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಈತನನ್ನು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಮೂವರೂ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಮೊದಲೇ ಎರಡು ಗ್ಯಾಂಗ್ ಗಳ ನಡುವೆ ವೈರತ್ವವಿದ್ದು ಘಟನೆಯ ದಿನವೂ ಯಾವುದೋ ವಿಷಯವಾಗಿ ಇತ್ತಂಡಗಳ ನಡುವೆ ಘರ್ಷಣೆ ಏರ್ಪಟ್ಟಿತು. ಕೆಲ ನಿಮಿಷದಲ್ಲೇ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಪಾತ್ರೆಗಳು ಮತ್ತು ಕಬ್ಬಿಣದ ಸರಳುಗಳನ್ನು ಬಳಸಿ ಹೊಡೆದಾಡಿಕೊಂಡರು ಎಂದು ಪೋಲಿಸರು ತಿಳಿಸಿದ್ದಾರೆ.