Dawood Ibrahim : ದಾವೂದ್‌ ಇಬ್ರಾಹಿಂ ಶೇ. 1000ದಷ್ಟು ಫಿಟ್ – ವಿಷಪ್ರಾಶನ ವದಂತಿ ಅಲ್ಲಗಳೆದ ದಾವೂದ್ ಆಪ್ತ ಛೋಟಾ ಶಕೀಲ್

ನ್ಯೂಸ್ ಆ್ಯರೋ : 1993ರ ಮುಂಬೈ ಸರಣಿ ಸ್ಫೋಟದ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅನಾರೋಗ್ಯದ ವದಂತಿ ಕುರಿತು ಆಪ್ತ ಸಹಾಯಕ ಛೋಟಾ ಶಕೀಲ್ ಸ್ಪಷ್ಟನೆ ನೀಡಿದ್ದು, ದಾವೂದ್ ಶೇ 1000 ಆರೋಗ್ಯವಾಗಿದ್ದರೆಂದು ಹೇಳಿಕೆ ನೀಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ದಾವೂದ್‌ಗೆ ವಿಷಪ್ರಾಶನ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಗಂಭೀರ ಸ್ಥಿತಿಯಲ್ಲಿರುವ ದಾವೂದ್‌ಗೆ ಕರಾಚಿಯ ಆಸ್ಪತ್ರೆಯೊಂದರಲ್ಲಿ ಬಿಗಿ ಭದ್ರತೆಯಲ್ಲಿ ಎರಡು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬದವರನ್ನು ಹೊರತು ಪಡಿಸಿ ಬೇರಾರಿಗೂ ಆಸ್ಪತ್ರೆಗೆ ಪ್ರವೇಶ ನಿಷೇಧಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಛೋಟಾ ಶಕೀಲ್ ಈ ಸ್ಪಷ್ಟನೆಯನ್ನು ನೀಡಿದ್ದಾರೆ ಎಂದು‌ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪಾಕಿಸ್ತಾನದಲ್ಲಿರುವ ದಾವೂದ್‌ ಅನ್ನು ಶಕೀಲ್ ಭೇಟಿ ನೀಡಿ ಈ ಸ್ಪಷ್ಟನೆಯನ್ನು ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಜಿಹಾದಿ ಭಯೋತ್ಪಾದಕರ ಸಾವಿನ ಹಿನ್ನೆಲೆ ಈ ಊಹಾಪೋಹಾ ಹರಡಿಕೊಂಡಿದೆ. ದಾವೂದ್ ಸ್ಥಾಪಿಸಿದ ಕ್ರಿಮಿನಲ್ ಎಂಟರ್‌ಪ್ರೈಸ್ ಡಿ-ಕಂಪನಿಯ ಜಾಗತಿಕ ಕಾರ್ಯಾಚರಣೆಯನ್ನು ಛೋಟಾ ಶಕೀಲ್ ಅವರು ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಇಂಟರ್‌ನೆಟ್‌ ಸ್ಥಗಿತಗೊಂಡಿದ್ದರಿಂದ ಈ ವದಂತಿ ಮತ್ತಷ್ಟು ಹೆಚ್ಚಿತ್ತು ಎಂದು ಶಕೀಲ್ ಹೇಳಿಕೊಂಡಿದ್ದಾರೆ.

ಇನ್ನೂ ಮುಂಬೈ ದಾಳಿಯ ರೂವಾರಿಯಾಗಿರುವ ದಾವೂದ್ ಇಬ್ರಾಹಿಂ ನೆಲೆಸಿರುವ ಬಗ್ಗೆ ಪಾಕ್‌ ನಿರಾಕರಿಸುತ್ತಲೇ ಬಂದಿದೆ. ಆದರೆ ಭಾರತದ ಗುಪ್ತಚರ ಇಲಾಖೆಯು ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಪಾಕ್‌ನ ಕರಾಚಿಯಲ್ಲಿ ನೆಲೆಸಿರುವ ಬಗ್ಗೆ ದೃಢಪಡಿಸಿಕೊಂಡಿದೆ. ಅದಲ್ಲದೆ ಈ ಬಾರಿಯೂ ವದಂತಿ ಬಗ್ಗೆ ಪಾಕ್ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ಇನ್ನೂ ದಾವೂದ್ ಇಬ್ರಾಹಿಂ ಎರಡನೇ ಪತ್ನಿ ಮೈಜಬೀನ್ ಹಾಗೂ ಆತನ ಮೂವರು ಹೆಣ್ಣು ಮಕ್ಕಳು ಹಾಗೂ ಮಗನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್‌ ಶೀಟ್‌ ಸಲ್ಲಿಸಿದೆ.