
ಸೌಜನ್ಯಾ ಮನೆಯಿಂದ ಬೆಂಗಳೂರಿಗೆ ಮೂರು ದಿನಗಳ ಪಾದಯಾತ್ರೆ – ನ್ಯಾಯಕ್ಕಾಗಿ ಸರ್ಕಾರದ ಗಮನ ಸೆಳೆಯಲು ತ್ರಿಶೂಲ್ ಸೇನೆಯಿಂದ ವಿಭಿನ್ನ ಪ್ರಯತ್ನ
- ಕರಾವಳಿ
- August 26, 2023
- No Comment
- 31
ನ್ಯೂಸ್ ಆ್ಯರೋ : ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಸೌಜನ್ಯಾ ಪರ ನ್ಯಾಯಕ್ಕಾಗಿ ಬರೋಬ್ಬರಿ 305 ಕಿಮಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು ಉಜಿರೆಯಿಂದ ಬೆಂಗಳೂರಿಗೆ ತ್ರಿಶೂಲ್ ಸೇನೆ ಪಾದಯಾತ್ರೆಯನ್ನು ಕೈಗೊಂಡಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಪಾಂಗಳದಲ್ಲಿರುವ ಸೌಜನ್ಯಾ ಮನೆಯಿಂದ ಇಂದು ಪಾದಯಾತ್ರೆ ಪ್ರಾರಂಭಗೊಂಡಿದೆ.
ಸೌಜನ್ಯಾ ಪೋಷಕರಿಂದ ಪಾದಯಾತ್ರೆಗೆ ಚಾಲನೆ ನೀಡಲಾಗಿದ್ದು, ಉಜಿರೆಯಿಂದ ಬೆಂಗಳೂರಿನ ವಿಧಾನ ಸೌಧದವರೆಗೂ ಕಾಲ್ನಡಿಗೆಯಲ್ಲಿ ನಿರಂತರ 3 ದಿನ ಪಾದಯಾತ್ರೆ ಕೈಗೊಂಡು ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರಕಿಸಲು ತ್ರಿಶೂಲ್ ಸೇನೆಯಿಂದ ಸರಕಾರಕ್ಕೆ ಪಾದಯಾತ್ರೆ ಮೂಲಕ ಹಕ್ಕೊತ್ತಾಯ ನಡೆಯಲಿದೆ.
ದಿನದಿಂದ ದಿನಕ್ಕೆ ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ತೀವ್ರತೆ ಪಡೆಯುತ್ತಿದ್ದು, ಹೋರಾಟದ ಕಿಚ್ಚು ರಾಜ್ಯವ್ಯಾಪಿ ವ್ಯಾಪಿಸುತ್ತಿದೆ. ಇದೇ ತಿಂಗಳ ಆಗಸ್ಟ್ 27 ರಂದು ದ. ಕ ಹಾಗೂ ಉಡುಪಿ ಬಿಜೆಪಿ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಲಿದೆ ಹಾಗೂ ಆಗಸ್ಟ್ 28ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿ ಚಲೋ ಕಾರ್ಯಕ್ರಮ ನಡೆಯಲಿದ್ದು ವಿವಿಧ ಜನ ಪ್ರತಿನಿಧಿಗಳು ಹಾಗೂ ಸಂಘಟನೆಗಳಿಂದ ಸರಕಾರಕ್ಕೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಆಗ್ರಹವೂ ಕೇಳಿ ಬರಲಿದೆ.
ಅಲ್ಲದೇ ಸತತ 11 ವರ್ಷಗಳಿಂದ ಸೌಜನ್ಯಾ ಪರ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ಸಂಘಟನೆಯಿಂದ ಸೆಪ್ಟೆಂಬರ್ 3 ರಂದು ಬೃಹತ್ ಪ್ರತಿಭಟನೆ ಹಾಗೂ ಹಕ್ಕೊತ್ತಾಯ ಕಾರ್ಯಕ್ರಮವೂ ನಡೆಯಲಿದೆ.