
Toby Review : ರಾಜ್ ಅಭಿನಯದ ಟೋಬಿಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ – ಸಿನಿಮಾ ಚೆನ್ನಾಗಿಲ್ಲ ಎಂದ ಮಹಿಳೆಗೆ ವ್ಯಕ್ತಿಯಿಂದ ಅವಾಚ್ಯ ನಿಂದನೆ, ವಿಡಿಯೋ ವೈರಲ್..!! ರಾಜ್ ಬಿ ಶೆಟ್ಟಿ ಹೇಳಿದ್ದೇನು?
- ಮನರಂಜನೆ
- August 26, 2023
- No Comment
- 84
ನ್ಯೂಸ್ ಆ್ಯರೋ : ಭಾರೀ ಪ್ರಚಾರ ಗಿಟ್ಟಿಸಿಕೊಂಡಿದ್ದ ಟೋಬಿ ಸಿನಿಮಾ ನಿನ್ನೆ (ಆ 25) ರಂದು ಬಿಡುಗಡೆಯಾಗಿ, ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಇನ್ನೂ ಚಿತ್ರ ವೀಕ್ಷಿಸಿದವರು ರಾಜ್ ನಟನೆಗೆ ಫಿದಾ ಆಗಿದ್ದು, ಕೆಲವರು ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದರ ಮುಂದುವರೆದ ಭಾಗವೆಂಬಂತೆ ನಿನ್ನೆ ಬೆಂಗಳೂರಿನಲ್ಲಿ ಟೋಬಿ ಚಿತ್ರ ವೀಕ್ಷಿಸಿದ ಮಹಿಳೆ ಸಿನಿಮಾ ಚೆನ್ನಾಗಿಲ್ಲ ಎಂದು ಅನಿಸಿಕೆ ಹೇಳಿದ್ದಕ್ಕೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಮನಬಂದಂತೆ ಮಹಿಳೆಗೆ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ ಶೆಟ್ಟಿ ಅವರ ಲುಕ್ ಮತ್ತು ಸಿನಿಮಾ ಮೂಡಿಬಂದ ರೀತಿ, ಮೇಕಿಂಗ್ ವಿಚಾರವಾಗಿ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟಿಸಿತ್ತು. ಬಿಡುಗಡೆ ದಿನ ಹೌಸ್‌ಫುಲ್ ಪ್ರದರ್ಶನ ಕಂಡು ಅನಿರೀಕ್ಷಿತ ಪ್ರದರ್ಶನ ಕಂಡಿತು. ಇದೀಗ ಸಿನಿಮಾ ವೀಕ್ಷಿಸಿದವರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಜೈಕಾರ ಕೂಗಿದವರೇ ಸಿನಿಮಾ ಅಷ್ಟಕಷ್ಟೇ ಎಂದು ಹೇಳುತ್ತಿದ್ದಾರೆ.
ನಿನ್ನೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ರಾಜ್ ಶೆಟ್ಟಿ ಅವರ ಟೋಬಿ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ನೋಡಲು ಮಹಿಳೆಯೊಬ್ಬರು ತೆರಳಿ, ಸಿನಿಮಾ ನೋಡಿ ಹೊರಬಂದಿದ್ದಾರೆ. ಕೆಲವು ಯೂಟ್ಯೂಬ್ ಚಾನೆಲ್‌ನವರು ಸಿನಿಮಾ ಹೇಗಿದೆ ಎಂದು ಪ್ರಶ್ನೆ ಕೇಳಿದ್ದಾರೆ. ಚಾನೆಲ್‌ನವರ ಪ್ರಶ್ನೆಗೆ ಉತ್ತರಿಸಿದ ಮಹಿಳೆ, ಸಿನಿಮಾ ಚೆನ್ನಾಗಿಲ್ಲ ಎಂದಿದ್ದಾರೆ. ಮಹಿಳೆಯ ಮಾತನ್ನು ಕೇಳಿಸಿಕೊಂಡ, ಅಲ್ಲಿಯೇ ಇದ್ದ ವ್ಯಕ್ತಿ ಮಹಿಳೆಯ ವಿರುದ್ಧ ತಿರುಗಿ ಬಿದ್ದಿದ್ದಾನೆ.
“ಹೇ.. ಯಾರ್ ಹೇಳಿದ್ದು ನಿನಗೆ ಚೆನ್ನಾಗಿಲ್ಲ ಅಂತ. –ಮುಚ್ಕೊಂಡ್ ಹೊಯ್ತಾಯಿರ್ಬೇಕ್.. ಸುಮ್ನೆ ಹೊಯ್ತಾಯಿರ್ಬೇಕ್. ಏನ್ ಚೆನ್ನಾಗಿಲ್ಲ ಅಂತ ಹೇಳೋದು.. ಸಿನಿಮಾದಲ್ಲಿ ಏನ್ ಚೆನ್ನಾಗಿಲ್ಲ ಹೇಳು.. ಎಂದು ಗೂಂಡಾಗಿರಿ ಪ್ರದರ್ಶನ ಮಾಡಿದ್ದಾನೆ.
ವ್ಯಕ್ತಿಯ ಈ ಗೂಂಡಾಗಿರಿಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು, ವ್ಯಕ್ತಿಯ ಗೂಂಡಾಗಿರಿ ನೆಟ್ಟಿಗರು ಕಿಡಿ ಕಾರಿದ್ದಾರೆ. ಸದ್ಯ ವ್ಯಕ್ತಿಯ ಮಿತಿಮೀರಿದ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆ ಖಂಡಿಸಿದ ಚಿತ್ರದ ಕಥೆಗಾರ ದಯಾನಂದ್:
ಈ ಸಂಬಂಧ ಚಿತ್ರದ ಕಥೆಗಾರ ಟಿ.ಕೆ.ದಯಾನಂದ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ಭಿನ್ನಾಭಿಪ್ರಾಯವನ್ನು ಗೌರವಿಸುವುದು ಆರೋಗ್ಯವಂತ ಸಮಾಜದ ಲಕ್ಷಣ. ಚಿತ್ರ ಚೆನ್ನಾಗಿದೆ ಎಂದವರ ಅಭಿಪ್ರಾಯವನ್ನು ಗೌರವಿಸಿದಷ್ಟೇ, ಚೆನ್ನಾಗಿಲ್ಲ ಎಂದವರ ಅಭಿಪ್ರಾಯವನ್ನೂ ನಾವು ಗೌರವಿಸುತ್ತೇವೆ” ಎಂದು ಅವರು ಬರೆದಿದ್ದಾರೆ.
ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ ಏನು?
ಟೋಬಿ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಮನಬಂದಂತೆ ನಿಂದಿಸಿ ಗೂಂಡಾಗಿರಿ ಮೆರೆದಿದ್ದ ಆ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ನಟ ರಾಜ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಅಭಿಪ್ರಾಯ ತಿಳಿಸುವುದು ನಿಮ್ಮ ಹಕ್ಕು, ಅದನ್ನು ನಾವು ಪ್ರಶ್ನಿಸುವುದಿಲ್ಲ ಎಂದಿದ್ದಾರೆ. ಮಹಿಳೆಯನ್ನು ನಿಂದಿಸಿದ ವ್ಯಕ್ತಿಯ ಬಗ್ಗೆಯೂ ಮಾತನಾಡಿದ್ದು ಅಭಿಮಾನ ಮನದಲ್ಲಿರಲಿ, ಹೀಗೆಲ್ಲ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.