ಕಡಬ : ವಾಚ್ ಅಂಗಡಿ ನಡೆಸುತ್ತಿದ್ದ ಹಿರಿಯ ವ್ಯಕ್ತಿಯ ಮೇಲೆ ಹಲ್ಲೆ ಆರೋಪ – ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು : ವೀಡಿಯೋ ವೈರಲ್..!

ನ್ಯೂಸ್ ಆ್ಯರೋ : ವಾಹನ ಪಾರ್ಕಿಂಗ್ ವಿಚಾರದಲ್ಲಿ ಕಡಬದಲ್ಲಿ ವಾಚ್ ವರ್ಕ್ ಕೆಲಸ ಮಾಡಿ ಹೆಸರುವಾಸಿಯಾಗಿರುವ ಹಿರಿಯ ವ್ಯಕ್ತಿಯೊಬ್ಬರ ಕೊರಳ ಪಟ್ಟಿ ಹಿಡಿದು ದೂಡಿ ಹಾಕಿ ತಂಡವೊಂದು ಪುಂಡಾಟಿಕೆ ಮೆರೆದ ಘಟನೆ ಕಡಬದಲ್ಲಿ ಜ.3 ರಂದು ಹಾಡಹಗಲೇ ನಡೆದಿದೆ.

ಸದ್ಯ ಈ ಘಟನೆಗೆ ಸಂಬಂಧಿಸಿದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹಲ್ಲೆಗೆ ಒಳಗಾಗಿರುವ ಐಡಿಯಲ್ ಕಾಂಪ್ಲೆಕ್ಸ್‌ನ ಲಕ್ಷ್ಮಣ ರೈ ಎಂಬವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಕಡಬದ ಸಮುದಾಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಹಲ್ಲೆ ಮಾಡಿದವರ ವಿರುದ್ದ ದೂರು ನೀಡಿದ ಲಕ್ಷ್ಮಣ ರೈ ಅವರಿಗೆ ನ್ಯಾಯಾಲದ ಆದೇಶ ಅಪಡೆಯುವಂತೆ ಪೊಲೀಸರು ಹಿಂಬರಹ ನೀಡಿ ಸೂಚಿಸಿರುವುದಾಗಿ ತಿಳಿದು ಬಂದಿದೆ.

ಲಕ್ಷ್ಮಣ ರೈ ಅವರ ಅಂಗಡಿಯ ಸಿಬ್ಬಂದಿ ಪದ್ಮನಾಭ ರೈ ಎಂಬವರು ಠಾಣೆಗೆ ದೂರು ನೀಡಲು ಆಗಮಿಸಿದರೂ ಇಂದು ಸುಮಾರು 5ಗಂಟೆಗಳವರೆಗೂ ಪೊಲೀಸರು ದೂರು ಪಡೆದುಕೊಂಡಿಲ್ಲ ಎನ್ನಲಾಗಿದೆ.

ಸಿಬ್ಬಂದಿ ಪದ್ಮನಾಭ ರೈ ಅವರು ನೀಡಲು ಮುಂದಾದ ದೂರಿನಲ್ಲಿ ತನ್ನ ಅಂಗಡಿ ಎದುರು ಇರುವ ಅಂಗಡಿಯ ಮಾಲೀಕನ ಮಗ ಮತ್ತು ಇತರರು ತಾನು ಕೆಲಸ ಮಾಡುವ ಅಂಗಡಿ ಎದುರುಗಡೆ ಮಧ್ಯಾಹ್ನ ವೇಳೆಗೆ ಬಂದು ನನ್ನ ಅಂಗಡಿ ಕಾಂಪ್ಲೆಕ್ಸ್‌ನ ಮಾಲಕರಾದ ಲಕ್ಷ್ಮಣ ರೈ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ತಾನು ನಿಲ್ಲಿಸಿದ್ದ ನನ್ನ ಬೈಕನ್ನು ಕಾಲಿನಿಂದ ಜಾಡಿಸಿ ಒದ್ದು ನೆಲಕ್ಕುರುಳಿಸಿ ಹಾನಿಅಗೈದು, ಅಂಗಡಿಯ ಒಳಗೆ ನುಗ್ಗಿ ಲಕ್ಷ್ಮಣ ರೈ ಅವರು ಹಿರಿಯ ನಾಗರಿಕ ಎನ್ನುವುದನ್ನು ಕೂಡಾ ನೋಡದೆ, ಅವರ ಕೊರಳ ಪಟ್ಟಿ ಹಿಡಿದು ದೂಡಿ ಹಾಕಿರುತ್ತಾರೆ.

ಹಾಗೂ ನಾನು ಅಂಗಡಿಯ ಒಳಗಿರುವುದನ್ನು ನೋಡಿ, ನನ್ನನ್ನೂ ಉದ್ದೇಶಿಸಿ ನಾನು ಜೈಲಿಗೆ ಹೋದರೂ ತೊಂದರೆ ಇಲ್ಲ, ನಮ್ಮಿಬ್ಬರನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗೆಗಿನ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತ ಹಲ್ಲೆ ನಡೆಸಿದರು ಎನ್ನಲಾದ ವ್ಯಕ್ತಿಗಳೂ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.