ಮಂಗಳೂರು : ಮಹೇಶ್ ಟ್ರಾವೆಲ್ಸ್ ಬಸ್ ಚಾಲಕ ಆತ್ಮಹತ್ಯೆ – ತಂದೆ ದಾಖಲಾಗಿದ್ದ ಆಸ್ಪತ್ರೆಗೇ ಮಗನ ಮೃತದೇಹ ರವಾನೆ..!!

ನ್ಯೂಸ್ ಆ್ಯರೋ : ಸೋಮೇಶ್ವರ ಕಡಲ ತೀರದಲ್ಲಿ ಇಂದು ಬೆಳಗ್ಗೆ ಮಹೇಶ್ ಟ್ರಾವೆಲ್ಸ್ ಬಸ್ ಚಾಲಕನ ಮೃತದೇಹ ಸಿಕ್ಕಿದ್ದು, ರುದ್ರಪಾದೆಯಿಂದ ಜಿಗಿದು ಆತ್ಮಹತ್ಯೆಗೈದಿರುವುದಾಗಿ ಶಂಕಿಸಲಾಗಿದೆ.

ಕೋಟೆಕಾರು ಪಟ್ಟಣದ ಕೊಂಡಾಣ, ವಿದ್ಯಾನಗರ ನಿವಾಸಿ ಜಗದೀಶ್ ಶೆಟ್ಟಿ(38)ಮೃತ ವ್ಯಕ್ತಿ. ಜಗದೀಶ್ ಅವರು 43 ರೂಟ್ ಸಂಖ್ಯೆಯ ಮಂಗಳೂರು – ತಲಪಾಡಿಯ ನಡುವೆ ಓಡಾಟ ನಡೆಸುತ್ತಿದ್ದ ಖಾಸಗಿ ಬಸ್ ಮಹೇಶ್ ಟ್ರಾವೆಲ್ಸ್ ನಲ್ಲಿ ಚಾಲಕರಾಗಿದ್ದರು. ಜಗದೀಶ್ ನಿನ್ನೆ ರಾತ್ರಿ ಮನೆಗೆ ತೆರಳದೆ ನಾಪತ್ತೆಯಾಗಿದ್ದರು.

ಇಂದು ಬೆಳಗ್ಗೆ ಜಗದೀಶ್ ಅವರ ಮೃತದೇಹ ಸೋಮೇಶ್ವರ ಕಡಲಲ್ಲಿ ತೇಲುತ್ತಿದ್ದು ಸ್ಥಳೀಯ ಮೀನುಗಾರರು ಅದನ್ನು ಎಳೆದು ದಡಕ್ಕೆ ಹಾಕಿದ್ದಾರೆ. ರುದ್ರಪಾದೆಯಲ್ಲಿ ಜಗದೀಶ್ ಅವರು ಧರಿಸಿದ್ದ ಚಪ್ಪಲ್, ಮೊಬೈಲ್, ಬೈಕ್ ಕೀ ಗೊಂಚಲು ದೊರಕಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮಹೇಶ್ ಟ್ರಾವೆಲ್ಸ್ ಬಸ್ಸು ಮಾಲಕ ಪ್ರಕಾಶ್ ಶೇಖ ಕೂಡ ಕೆಲ ತಿಂಗಳ ಹಿಂದಷ್ಟೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಮಹೇಶ್ ಟ್ರಾವೆಲ್ಸ್ ನಲ್ಲೇ ಕ್ಲೀನರ್, ನಿರ್ವಾಹಕ ವೃತ್ತಿ ಮಾಡಿ ಕಳೆದ ಹಲವು ವರುಷಗಳಿಂದ ಚಾಲಕರಾಗಿದ್ದ ಜಗದೀಶ್ ಆತ್ಮಹತ್ಯೆಗೈದಿರುವುದು ಅವರ ಮನೆ ಮಂದಿ, ಸ್ನೇಹಿತರನ್ನ ಆಘಾತಗೊಳಿಸಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಜಗದೀಶ್ ತಂದೆ ವೆಂಕಪ್ಪ ಶೆಟ್ಟಿ ಅಸೌಖ್ಯದಿಂದ ಬಳಲುತ್ತಿದ್ದು ಮೂರು ದಿನಗಳ ಹಿಂದೆ ದೇರಳಕಟ್ಟೆಯ ಕೆ.ಎಸ್ .ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಅದೇ ಆಸ್ಪತ್ರೆಗೆ ಮಗನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ಜಗದೀಶ್ ಅವಿವಾಹಿತರಾಗಿದ್ದು ತಾಯಿ, ತಂದೆ ಇಬ್ಬರು ಅಣ್ಣಂದಿರನ್ನು ಅಗಲಿದ್ದಾರೆ.