ಮುಸ್ಲಿಂ ಮಹಿಳೆಯರ ವಿರುದ್ಧ ಮಾನಹಾನಿಕರ ಹೇಳಿಕೆ ಪ್ರಕರಣ – ಕಲ್ಲಡ್ಕ ಪ್ರಭಾಕರ್ ಭಟ್ ಜಾಮೀನು ಅರ್ಜಿ ಆದೇಶ ಜನವರಿ 17ಕ್ಕೆ

ನ್ಯೂಸ್ ಆ್ಯರೋ : ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರ ಭಾಷಣದ ವೇಳೆ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿದ ಆರೋಪದ ಮೇಲೆ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ಜಾಮೀನು ಅರ್ಜಿ ಆದೇಶವನ್ನು ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜನವರಿ 17ಕ್ಕೆ ಕಾಯ್ದಿರಿಸಿದೆ.

ಡಿಸೆಂಬರ್ 24ರಂದು ಶ್ರೀರಂಗಪಟ್ಟಣದಲ್ಲಿ ನಡೆದಿದ್ದ ಮೂಡಲ ಬಾಗಿಲು ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಪ್ರಭಾಕರ್ ಭಟ್ ಮಾತನಾಡಿದ್ದರ ವಿರುದ್ಧ ಸಾಮಾಜಿಕ ಕಾರ್ಯಕರ್ತೆ, ಪಿರಿಯಾಪಟ್ಟಣ ಮೂಲದ ನಜ್ಮಾ ನಜೀರ್‌ ಎಂಬವರು ದೂರು ದಾಖಲಿಸಿದ್ದು, ಫಿರ್ಯಾದಿ ಪರ ಹೈಕೋರ್ಟ್‌ನ ಹಿರಿಯ ವಕೀಲ ಎಸ್‌. ಬಾಲನ್‌ ವಾದ ಮಂಡಿಸಿದರು.

‘ಭಾರತೀಯ ಸಾಕ್ಷ್ಯ ಅಧಿನಿಯಮದ ಪ್ರಕಾರ ಪ್ರಭಾಕರ ಭಟ್‌ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಘೋರ ಅಪರಾಧವಾಗಿದೆ. ರಾಷ್ಟ್ರೀಯ ಐಕ್ಯತೆಗೂ ಧಕ್ಕೆ ತರುವಂತೆ ಮಾತನಾಡಿರುವುದರಿಂದ ಟಾಡಾ ಮತ್ತು ಕೋಕಾ ಕಾಯಿದೆ ವ್ಯಾಪ್ತಿಗೂ ಸೇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿದ್ದು, ಇದು ಸೈಬರ್‌ ಅಪರಾಧ. ಈ ಬಗ್ಗೆ ಅವರ ಧ್ವನಿ ಪರೀಕ್ಷೆ ಮಾಡುವಂತೆಯೂ ಮನವಿ ಮಾಡಲಾಗಿದೆ’ ಎಂದು ವಿಚಾರಣೆಯ ಬಳಿಕ ಎಸ್‌. ಬಾಲನ್‌ ಸುದ್ದಿಗಾರರಿಗೆ ತಿಳಿಸಿದರು.

‘ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ತೀರ್ಪುಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಜಾಮೀನು ನೀಡದಂತೆ ಕೋರಲಾಗಿದೆ’ ಎಂದರು.

ಪ್ರಭಾಕರ ಭಟ್‌ ಅವರ ಪರ ವಾದ ಮಂಡಿಸಿದ ವಕೀಲ ಡಿ. ಚಂದ್ರೇಗೌಡ, ‘ಪ್ರಭಾಕರ‌ ಭಟ್ ಅವರ ವಿರುದ್ದ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಪಡಿಸುವಂತಹ ಗಂಭೀರ ಪ್ರಕರಣ ದಾಖಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಂದ ಮತ್ತು ದೂರಿನಲ್ಲಿರುವ ಸಂಗತಿಗಳು ಇನ್ನೂ ತನಿಖೆಗೆ ಒಳಪಡಬೇಕಿದ್ದು, ಆರೋಪಿತರು ತನಿಖೆಗೆ ಸಹಕರಿಸಲು ಸಿದ್ದರಿದ್ದಾರೆ. ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಯಾವುದೇ ಷರತ್ತು ವಿಧಿಸಿದರೂ ಒಪ್ಪಲು ಸಿದ್ದರಿದ್ದು, ಅವರಿಗೆ ಜಾಮೀನು ನೀಡಬೇಕು’ ಎಂದು ವಾದ ಮಂಡಿಸಿದರು.